
ಕುಕ್ಕೆ: ಕಿರು ಷಷ್ಟಿ ದಿನದಂದು ಭಕ್ತರ ಸಂದಣಿ
Sunday, January 5, 2025
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿಂದು ಕಿರುಷಷ್ಟಿ ಮಹೋತ್ಸವದ ಅಂಗವಾಗಿ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವರ ದರುಶನ ಪಡೆದರು. ಅಲ್ಲದೆ ಹೆಚ್ಚಿನ ಸೇವೆಗಳನ್ನು ನೆರವೇರಿಸಿದರು.
ವಾರಾಂತ್ಯ ಹಾಗೂ ಕಿರುಷಷ್ಠಿ ಒಂದೇ ದಿನ ಬಂದುದರಿಂದ ಶ್ರೀ ದೇವಳಕ್ಕೆ ಅಸಂಖ್ಯಾತ ಭಕ್ತರು ಆಗಮಿಸಿದ್ದರು.
ದೇವಳದ ಒಳಾಂಗಣ ಹೊರಾಂಗಣ ಹಾಗೂ ಕ್ಷೇತ್ರದ ಎಲ್ಲಾ ಕಡೆಗಳಲ್ಲಿಯೂ ಭಕ್ತ ಸಂದಣಿ ಕಂಡು ಬಂತು. ಕುಕ್ಕೆಯಲ್ಲಿ ಚಂಪಾ ಷಷ್ಟಿ ವಾರ್ಷಿಕ ಜಾತ್ರೋತ್ಸವ ಕಳೆದು ಒಂದು ತಿಂಗಳ ನಂತರದ ಕಿರು ಷಷ್ಟಿಯ ಸುದಿನ ದೂರದೂರುಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಹಾಗೂ ಅನ್ನಪ್ರಸಾದವನ್ನು ಪಡೆದು ಸ್ವೀಕರಿಸಿದರು.
ಶ್ರೀ ದೇವಳದ ಕಡೆಯಿಂದ ಭಕ್ತರಿಗೆ ತೊಂದರೆ ಆಗದ ಹಾಗೆ ಅನುಕೂಲಕರ ರೀತಿಯಲ್ಲಿ ದೇವರ ದರ್ಶನ, ದೇವರ ಪ್ರಸಾದ, ಹಾಗೂ ಭೋಜನ ಪ್ರಸಾದಕ್ಕೆ ವ್ಯವಸ್ಥೆಯನ್ನು ಮಾಡಿದರು.ಸರದಿ ಸಾಲಿನಲ್ಲಿ ಸಾಗಿ ಭಕ್ತರು ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಭಕ್ತರ ಅನುಕೂಲತೆಗಾಗಿ ಷಣ್ಮುಖ ಪ್ರಸಾದ ಬೋಜನ ಶಾಲೆಯಲ್ಲಿ 10.30ಯಿಂದ ಬೋಜನ ಪ್ರಸಾದ ವಿತರಣೆ ಆರಂಭವಾಗಿ 4 ಗಂಟೆ ತನಕ ನಡೆಯಿತು.ಭಕ್ತರ ವಿಶೇಷ ಅನುಕೂಲತೆಗಾಗಿ ಆದಿ ಸುಬ್ರಹ್ಮಣ್ಯ ಸಭಾಂಗಣದಲ್ಲಿ ಬಫೆ ಮಾದರಿಯ ವ್ಯವಸ್ಥೆ ಮಾಡಲಾಗಿತ್ತು.ಕಿರುಷಷ್ಠಿ ನಿಮಿತ್ತ ವಿವಿಧ ಭಕ್ಷ್ಯಗಳನ್ನು ಒಳಗೊಂಡ ಪ್ರಸಾದ ಬೋಜನವನ್ನು ಭಕ್ತರು ಸ್ವೀಕರಿಸಿದರು.