
ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶತಮಾನೋತ್ಸವ ಸಂಭ್ರಮ
ಬದುಕು ಕಲಿಸುವ ಶಿಕ್ಷಣ ಬೇಕು: ಭೋಜೇ ಗೌಡ
ಸುಳ್ಯ: ಗುಣಮಟ್ಟದ ಶಿಕ್ಷಣದ ಜೊತೆಗೆ ಬದುಕು ಕಲಿಸುವ, ಸಂಸ್ಕಾರ ತುಂಬುವ ಶಿಕ್ಷಣ ಬೇಕು, ನಮ್ಮ ಬಾಂಧವ್ಯ ಗಟ್ಟಿಯಾಗಿ ಉಳಿಯಲು ಮೌಲ್ಯಯುತ ಶಿಕ್ಷಣ ಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇ ಗೌಡ ಹೇಳಿದ್ದಾರೆ.
ಎಲಿಮಲೆಯ ದೇವಚಳ್ಳ ದ.ಕ. ಜಿಲ್ಲಾ ಪಂಚಾಯತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ, ನೂತನ ರಂಗಮಂದಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ, ಅರೋಗ್ಯ ಪ್ರತಿಯೊಬ್ಬರ ಸಂವಿಧಾನಬದ್ಧ ಹಕ್ಕು. ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅದನ್ನು ಪೂರೈಸಲು ಆಗುತ್ತಿಲ್ಲ ಎಂಬ ಬೇಷರ ಇದೆ. ಸರಕಾರಿ ಕನ್ನಡ ಶಾಲೆಯನ್ನು ಉಳಿಸುವ ಅಗತ್ಯತೆ ಇದೆ. ಆದರೆ ಶೇ.50 ಶಿಕ್ಷಕರ ಕೊರತೆ ದೊಡ್ಡ ಸಮಸ್ಯೆಯಾಗುತಿದೆ. ಗುಣಮಟ್ಟದ ಶಿಕ್ಷಣ ನೀಡಲು ಪೂರ್ತಿ ಶಿಕ್ಷಕರನ್ನು ನೇಮಕ ಮಾಡುವ ಜವಾಬ್ದಾರಿ ಸರಕಾರ, ಜನಪ್ರತಿನಿಧಿಗಳ ಮೇಲಿದೆ ಎಂದು ಹೇಳಿದರು.
ಕೇವಲ ನಾಮಫಲಕ ಮಾತ್ರ ಹಾಕಿದರೆ ಕನ್ನಡ ಆಡಳಿತ ಭಾಷೆ ಆಗಲು ಸಾಧ್ಯವೇ, ಅದು ನಿಜ ಅರ್ಥದಲ್ಲಿ ಅನುಷ್ಠಾನ ಆಗಬೇಕು. ಪಠ್ಯ ಪುಸ್ತಕದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು. ಅತ್ಯುತ್ತಮ ಸಾಹಿತಿಗಳ, ಪಂಡಿತರ ಅತ್ಯುತ್ತಮ ಪಠ್ಯ ಪುಸ್ತಕಗಳು ಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಕನ್ನಡ ಶಾಲೆಯನ್ನು ಉಳಿಸುವುದು ಬಹು ದೊಡ್ಡ ಸವಾಲು. ಶಿಕ್ಷಣ ಕ್ಷೇತ್ರದಲ್ಲಿ ಬಹು ದೊಡ್ಡ ಬದಲಾವಣೆ ಆಗುತಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ ವ್ಯಕ್ತಿಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಸಮಗ್ರ ಶಿಕ್ಷಣದ ಪರಿಕಲ್ಪನೆಯ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದೆ. ಶಿಕ್ಷಣ ಸಂಸ್ಥೆಯನ್ನು ಉಳಿಸಿ ಅಮೂಲಾಗ್ರ ಬದಲಾವಣೆಯ ದೃಷ್ಠಿಯಿಂದ ಯೋಚನೆ ಮಾಡಬೇಕಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳನ್ನು ಭಯಮುಕ್ತ ವಾತಾವರಣದಲ್ಲಿ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಸಬೇಕು, ಅವರ ಆಸಕ್ತಿಗೆ ತಕ್ಕಂತೆ ಶಿಕ್ಷಣ ಪಡೆಯುವಂತಾಗಬೇಕು ಎಂದು ಹೇಳಿದರು.
ಶಾಸಕಿ ಭಾಗೀರಥಿ ಅಧ್ಯಕ್ಷತೆ ವಹಿಸಿದ್ದರು. ನೂತನ ಕೊಠಡಿಗಳನ್ನು ಉದ್ಘಾಟಿಸಿದ ಮಾಜಿ ಸಚಿವ ಎಸ್.ಅಂಗಾರ ಮಾತನಾಡಿದರು.
ಜಿಲ್ಲಾ ಗ್ಯಾರಂಟಿ ಅನುಸ್ಟಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಇಂಟರ್ ಲಾಕ್ ಅಳವಡಿಯನ್ನು ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್‌ಎನ್ ಮನ್ಮಥ ಅವರು ಸಭಾಭವನವನ್ನು ಉದ್ಘಾಟಿಸಿದರು. ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕೋಟೆಮಲೆ, ತಾಲೂಕು ದೈಹಿಕ ಶಿಕ್ಷಣ ಪರವೀಕ್ಷಣಾಧಿಕಾರಿ ಆಶಾ ನಾಯಕ್, ಕ್ಷೇತ್ರ ಶಿಕ್ಷಣ ಸಂಯೋಜಕಿ ಧನಲಕ್ಷ್ಮಿ ಕುದ್ಪಾಜೆ, ಪಿಎಂ ಪೋಷಣ್ ಯೋಜನೆಯ ಸಹಾಯಕ ನಿರ್ದೇಶಕಿ ವೀಣಾ ಎಂ.ಟಿ., ಸೇವಾ ಸಂಗಮ ಟ್ರಸ್ಟ್‌ನ ಗೌರವಾಧ್ಯಕ್ಷ ಬಾಲಕೃಷ್ಣ ಬೊಳ್ಳೂರು ಅತಿಥಿಗಳಾಗಿ ಭಾಗವಹಿಸಿದ್ದರು.
ಉದ್ಯಮಿ ಜೋಸೆಫ್ ಕುರಿಯನ್, ನಿವೃತ್ತ ಎ.ಎಸ್.ಐ. ಕೃಷ್ಣಯ್ಯ ಕಾಣಿಕೆ, ಶಿವಾಜಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ವಿನಯಕುಮಾರ ಕಲ್ಲುಪಣೆ, ನಿವೃತ್ತ ಬ್ಯಾಂಕ್ ಅಧಿಕಾರಿ ರಮೇಶ್ ಮೂರ್ತಿ ಕೇರ, ಉದ್ಮಮಿ ಸೀತಾರಾಮ ಹಲ್ದಡ್ಕ, ಪುರುಷೋತ್ತಮ ಗೌಡ ಕೇಪುಳುಕಜೆ, ವೈ.ಎಂ. ಹಮೀದ್, ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎ.ವಿ. ತೀರ್ಥರಾಮ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಜಯಾನಂದ ಪಟ್ಟೆ ಶಾಲಾ ಮುಖೋಪಾಧ್ಯಾಯ ಶ್ರೀಧರ್ ಗೌಡ ಕೆ, ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೋಪಿನಾಥ ಮೆತ್ತಡ್ಕ, ಖಜಾಂಜಿ ಕೆ.ಆರ್. ರಾಧಾಕೃಷ್ಣ ಮಾವಿನಕಟ್ಟೆ, ಡಿ.ಟಿ. ದಯಾನಂದ, ಕಾರ್ಯದರ್ಶಿ ಜಯಂತ ತಳೂರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಬಿ.ವಿ., ಕಾರ್ಯದರ್ಶಿ ರಾಜಗೋಪಾಲ, ರಾಜೇಶ್ ಶತಮಾನೋತ್ಸವ ಸಮಿತಿ ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎ.ವಿ. ತೀರ್ಥರಾಮ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೋಪಿನಾಥ ಮೆತ್ತಡ್ಕ ವಂದಿಸಿದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ, ಕಿರಣ್ ಗುಡ್ಡೆಮನೆ ಕಾರ್ಯಕ್ರಮ ನಿರೂಪಿಸಿದರು.
ಶತಮಾನೋತ್ಸವ ಸ್ಮಾರಕ ಸಭಾಭವನ, ನೂತನ ರಂಗಮಂದಿರ, ನೂತನ ತರಗತಿ ಕೊಠಡಿ, ಪ್ರಾಣಿಗಳ ಸ್ತಬ್ಧಚಿತ್ರಗಳಿರುವ ಆಕರ್ಷಕ ಉದ್ಯಾನವನ, ದ್ವಾರ ಇಂಟರ್‌ಲಾಕ್ ಹೀಗೆ ಶಾಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಯಿತು.