
ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ತ್ವರಿತ ಕ್ರಮಕ್ಕೆ ಸಚಿವೆ ಹೆಬ್ಬಾಳ್ಕರ್ ಸೂಚನೆ
ಉಡುಪಿ: ಐದು ವರ್ಷದ ಬಾಲಕಿಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ಶುಕ್ರವಾರ ಸಂಜೆ ನಗರದ ಪೂರ್ಣಪ್ರಜ್ಞ ಕಾಲೇಜು ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಭಿಕ್ಷೆ ಬೇಡುತ್ತಾ ಓಡಾಡುತ್ತಿದ್ದ ವ್ಯಕ್ತಿಯೋರ್ವನ ಕೃತ್ಯ ಇದಾಗಿದ್ದು, ಆರೋಪಿಯ ಚಲನವಲನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಪರಾರಿಯಾಗಿದ್ದಾನೆ.
ಮಗುವಿನ ಪೋಷಕರ ತರಕಾರಿ ಅಂಗಡಿ ಸಮೀಪವೇ ಕೃತ್ಯ ನಡೆದಿದ್ದು, ಮತ್ತೋರ್ವ ಬಾಲಕಿ ಜೊತೆ ಓಡಾಡುತ್ತಿದ್ದ ಈಕೆಗೆ ಚಾಕಲೇಟ್ ಆಸೆ ತೋರಿಸಿದ ಆರೋಪಿ, ಆಕೆಯನ್ನು ಅಂಗಡಿ ಪಕ್ಕದ ಕಾಲುದಾರಿಯಲ್ಲಿ ಕರೆದುಕೊಂಡು ಹೋಗಿ ದಾರಿಬದಿಯ ಬೇಲಿ ಪಕ್ಕದಲ್ಲಿ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದು, ಬಾಲಕಿ ಬೊಬ್ಬೆ ಹಾಕಿದಾಗ ಪರಾರಿಯಾದ ಎಂದು ಎಸ್‌ಪಿ ಡಾ. ಅರುಣ್ ತಿಳಿಸಿದ್ದಾರೆ.
ಅಪರಿಚಿತ ತನ್ನ ಗುಪ್ತಾಂಗಗಳನ್ನು ಸ್ಪರ್ಷಿಸಿರುವ ಬಗ್ಗೆ ಪೋಷಕರಲ್ಲಿ ತಿಳಿಸಿದ್ದು, ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯ ಶೋಧ ಕಾರ್ಯದಲ್ಲಿದ್ದು, ಆತನ ಬಗ್ಗೆ ಸುಳಿವು ಲಭಿಸಿದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ತ್ವರಿತ ಕ್ರಮಕ್ಕೆ ಸಚಿವೆ ಹೆಬ್ಬಾಳ್ಕರ್ ಸೂಚನೆ:
ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ನೀಡಿದ್ದಾರೆ. ಆರೋಪಿಯನ್ನು ತಕ್ಷಣ ಪತ್ತೆಹಚ್ಚಬೇಕು. ಜೊತೆಗೆ ಬಾಲಕಿಗೆ ಅಗತ್ಯ ನೆರವು ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಸೂಚನೆ ನೀಡಿದ್ದಾರೆ.