
ಕೋಟೆಕಾರು ಕೆ.ಸಿ.ರೋಡ್ ಶಾಖಾ ಬ್ಯಾಂಕ್‌ನಿಂದ ಭಾರೀ ದರೋಡೆ: ಬಂದೂಕು, ತಲವಾರು ತೋರಿಸಿ ಗೋಣಿಗಳಲ್ಲಿ ನಗ ನಗದು ದೋಚಿದ ದರೋಡೆಕೋರರು
ಉಳ್ಳಾಲ: ಕಾರೊಂದರಲ್ಲಿ ಬಂದ ಆರು ಮಂದಿ ದರೋಡೆ ಕೋರರತಂಡ ಬ್ಯಾಂಕ್ ಸಿಬ್ಬಂದಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಿಂದ ಕೋಟ್ಯಂತರ ಮೌಲ್ಯದ ಚಿನ್ನ ಹಾಗೂ ನಗದನ್ನು ದರೋಡೆ ನಡೆಸಿ ಪರಾರಿಯಾದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ. ರೋಡ್ ಬಳಿ ಶುಕ್ರವಾರ ಮಧ್ಯಾಹ್ನ ವೇಳೆ ನಡೆದಿದೆ.
ಸ್ಥಳಕ್ಕೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಭೇಟಿ ನೀಡಿ ಶೀಘ್ರವೇ ದರೋಡೆಕೋರರನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶಿಸಿದ್ದಾರೆ.
ಬ್ಯಾಂಕಿನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿ ಹಾಗೂ ಓರ್ವ ಪುರುಷ ಸಿಬ್ಬಂದಿ ಮತ್ತೋರ್ವ ಸಿಸಿಟಿವಿ ಟೆಕ್ನೀಷಿಯನ್ ಅವರಿಗೆ ಬಂದೂಕು ಹಾಗೂ ತಲವಾರು ತೋರಿಸಿದ ಮಾಸ್ಕ್ ಧರಿಸಿದ್ದ ಐವರ ತಂಡ ಸುಮ್ಮನಿರುವಂತೆ ಬೆದರಿಸಿದ್ದಾರೆ. ಇಲ್ಲದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಒಡ್ಡಿ ಲಾಕರ್‌ನಲ್ಲಿದ್ದ 15 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ 5 ಲಕ್ಷ ರೂ. ನಷ್ಟು ನಗದು ದೋಚಿ ಗ್ರೇ ಬಣ್ಣದ ಫಿಯೇಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಸದಾ ಜನಜಂಗುಳಿಯಿಂದ ಕೂಡಿರುವ ಕೆ.ಸಿ ರೋಡ್ ಜಂಕ್ಷನ್ ಶುಕ್ರವಾರ ವಾದ ಹಿನ್ನೆಲೆಯಲ್ಲಿ ಜನ ಸಂಖ್ಯೆ ವಿರಳ ಇತ್ತು.
ಓಡಿಬಂದ ವಿದ್ಯಾರ್ಥಿಗಳು:
ಕೃತ್ಯ ಸಂದರ್ಭ ವಿದ್ಯಾರ್ಥಿಗಳು ಬ್ಯಾಂಕ್ ಕೆಳಗಿನ ಬೇಕರಿಯಲ್ಲಿದ್ದು ಸಿಬ್ಬಂದಿ ಬೊಬ್ಬೆ ಕೇಳಿ ವಿದ್ಯಾರ್ಥಿಗಳು ಮೊದಲ ಮಹಡಿಯಲ್ಲಿರುವ ಬ್ಯಾಂಕಿನತ್ತ ದೌಡಾಯಿಸಿದ್ದಾರೆ. ದರೋಡೆಕೋರರು ವಿದ್ಯಾರ್ಥಿಗಳನ್ನು ಕೂಡ ವಾಪಾಸ್ಸು ಹೋಗುವಂತೆ ಬೆದರಿಸಿದ್ದಾರೆ. ಪ್ರತ್ಯಕ್ಷದರ್ಶಿ ವಿದ್ಯಾರ್ಥಿಗಳಲ್ಲಿ ಆಗಂತುಕರು ಕನ್ನಡ ಮಾತನಾಡಿದ್ದರೆ, ಬ್ಯಾಂಕ್ ಸಿಬ್ಬಂದಿ ಜೊತೆ ಹಿಂದಿ ಭಾಷೆಯಲ್ಲಿ ಸಂಭಾಷಣೆ ನಡೆಸಿರುವುದಾಗಿ ಸಿಬ್ಬಂದಿ ಪೊಲೀಸ್ ತನಿಖೆ ವೇಳೆ ತಿಳಿಸಿದ್ದಾರೆ.
ಬ್ಯಾಂಕಿಗೆ ಸಿಸಿಟಿವಿ ದುರಸ್ತಿಗೆಂದು ತಂತ್ರಜ್ಞರೊಬ್ಬರು ಆಗಮಿಸಿದ್ದು, ಅದೇ ದಿನದಂದು ದರೋಡೆ ನಡೆದಿದೆ. ಸಿಸಿಟಿವಿ ತಂತ್ರಜ್ಞರ ಬೆರಳಿನಲ್ಲಿದ್ದ ಉಂಗುರವನ್ನು ಬಲಾತ್ಕಾರವಾಗಿ ದೋಚಿರುವ ದರೋಡೆಕೋರರು ಗೋಣಿ ಪೂರ್ತಿ ಚಿನ್ನ ಹಾಗೂ ನಗದಿನ ಜೊತೆಗೆ ಪರಾರಿಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ವಿಧಾನ ಸಭಾಧ್ಯಕ್ಷರ ಭೇಟಿ:
ಕೃತ್ಯ ಸ್ಥಳಕ್ಕೆ ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಅಲ್ಲದೆ ಎಸಿಪಿ ಅವರಲ್ಲಿ ತಕ್ಷಣವೇ ದರೋಡೆಕೋರರನ್ನು ಹಿಡಿಯುವಂತೆ ಸೂಚಿಸಿದ್ದಲ್ಲದೆ ತನಿಖೆಯ ಹಾದಿಯನ್ನು ತಿಳಿದುಪಡೆದುಕೊಂಡರು.
ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಉಳ್ಳಾಲ ಪೊಲೀಸರ ತಂಡ ಭೇಟಿ ನೀಡಿದೆ.
12 ಕೋಟಿ ಮೌಲ್ಯದ ಸೊತ್ತು ಕಳವು:
ಕೋಟೆಕಾರ್‌ನ ಸಹಕಾರಿ ಬ್ಯಾಂಕ್‌ನಲ್ಲಿ ಇಂದು ಮಧ್ಯಾಹ್ನ 12.30 ರ ವೇಳೆಗೆ ಸಶಸ್ತ್ರ ದರೋಡೆ ನಡೆದ ವರದಿಯಾಗಿದೆ. 35 ವರ್ಷ ವಯಸ್ಸಿನ 5-6 ವ್ಯಕ್ತಿಗಳ ಗುಂಪು ಮಾಸ್ಕ್ ಧರಿಸಿ ಮತ್ತು ಪಿಸ್ತೂಲ್, ತಲ್ವಾರ್ ಮತ್ತು ಚಾಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹಿಡಿದು ಬ್ಯಾಂಕ್‌ಗೆ ಪ್ರವೇಶಿಸಿದೆ. ಘಟನೆಯ ವೇಳೆ ಬ್ಯಾಂಕ್‌ನಲ್ಲಿ 4-5 ಉದ್ಯೋಗಿಗಳು ಇದ್ದರು.
ಹಿಂದಿಯಲ್ಲಿ ಮಾತನಾಡುತ್ತಿದ್ದ ಆರೋಪಿಗಳು ಸಿಬ್ಬಂದಿಯನ್ನು ಬೆದರಿಸಿ ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳಿದ್ದ ವಾಲ್ಟ್ ತೆರೆಯುವಂತೆ ಒತ್ತಾಯಿಸಿದ್ದಾರೆ. ಕಳುವಾದ ವಸ್ತುಗಳ ಮೌಲ್ಯ ಸುಮಾರು 12 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಸೊತ್ತಿನ ಮೌಲ್ಯ ಬಗ್ಗೆ ತನಿಖೆ ಮುಂದುವರಿದಿದೆ.
ಆರೋಪಿಗಳು ಕಪ್ಪು ಬಣ್ಣದ ಫಿಯೆಟ್ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆ ಮತ್ತು ಆರೋಪಿಗಳನ್ನು ಬಂಧಿಸಲು ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.