
ರಾತ್ರಿ 11ರ ಬಳಿಕ ಕಬಡ್ಡಿ ಪಂದ್ಯಾಟ ನಡೆಸುವಂತಿಲ್ಲ: ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನಿಂದ ಮಹತ್ವದ ನಿರ್ಣಯ
ಬಂಟ್ವಾಳ: ಕಬಡ್ಡಿ ಪಂದ್ಯಾಟಗಳು ರಾತ್ರಿ 11ರ ಬಳಿಕ ನಡೆಸುವಂತಿಲ್ಲ ಎಂದು ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ವಾರ್ಷಿಕ ಮಹಾಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಂಡಿದೆ.
ಬಂಟ್ವಾಳ ರೋಟರಿ ಭವನದಲ್ಲಿ ನಡೆದ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ವಾರ್ಷಿಕ ಮಹಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಂಸ್ಥೆಯ ಅಧ್ಯಕ್ಷ ರಾಕೇಶ್ ಮಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕಬಡ್ಡಿಯನ್ನು ಉಳಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಂದ್ಯಾಟಗಳು ಸಂಜೆ ವೇಳೆಗೆ ಆರಂಭಗೊಂಡು ರಾತ್ರಿ 11 ರ ವೇಳೆಗೆ ಮುಗಿಸಬೇಕು. ಇದಕ್ಕೆ ಸಹಕರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಜಿಲ್ಲೆಯ ಎಲ್ಲಾ ಶಾಸಕರಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.
ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವೃಥಾ ಆರೋಪ ಮಾಡಿರುವುದನ್ನು ಖಂಡಿಸಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಸಂಸ್ಥೆಯ ಜಿಲ್ಲಾ ಸದಸ್ಯರಾಗಿದ್ದುಕೊಂಡು ಅಶಿಸ್ತು ತೋರ್ಪಡಿಸಿದ ಇಬ್ಬರು ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಲೆಕ್ಕ ಪರಿಶೋಧಕರಾಗಿ ಬಸರಿ ಎನ್. ರಾವ್ ಅವರನ್ನು ಮುಂದುವರಿಸುವುದು ಎಂಬ ಪ್ರಮುಖ ನಿರ್ಣಯಗಳನ್ನು ಈ ಸಂದರ್ಭ ಕೈಗೊಳ್ಳಲಾಯಿತು.
ಸಂಸ್ಥೆಯ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ಉಪ್ಪಿನಂಗಡಿ, ಉಪಾಧ್ಯಕ್ಷ ಕೆ.ಟಿ. ಸುವರ್ಣ, ತೀರ್ಪುಗಾರರ ಮಂಡಳಿ ಜಿಲ್ಲಾಧ್ಯಕ್ಷ ಶಿವರಾಮ ಏನೆಕಲ್ಲು, ಬಂಟ್ವಾಳ ತಾಲೂಕು ಅಧ್ಯಕ್ಷ ಪುಷ್ಪರಾಜ್ ಚೌಟ ಉಪಸ್ಥಿತರಿದ್ದರು.
ಜಿಲ್ಲಾ ಉಪಾಧ್ಯಕ್ಷ ಬೇಬಿ ಕುಂದರ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಶೇಖರ ಕರ್ಣ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಅನಿಲ್ ಕೆಂಬಾರ್ ಲೆಕ್ಕ ಪತ್ರ ಮಂಡಿಸಿದರು.
ಅಸೋಸಿಯೇಷನ್ ಗೌರವ ಸಲಹೆಗಾರರಾದ ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ, ಪ್ರಮುಖರಾದ ಕೃಷ್ಣಾನಂದ, ನಾಮ್ ದೇವ್ ರಾವ್, ಲೋಕನಾಥ್ ಶೆಟ್ಟಿ ಬಿ.ಸಿ. ರೋಡ್, ಮಹಮ್ಮದ್ ವಳವೂರು ಮೊದಲಾದವರು ಸಲಹೆ ನೀಡಿದರು.
ಬಂಟ್ವಾಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶಿವರಾಜ್ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕಾರ್ಯಾಧ್ಯಕ್ಷ ಝಕರಿಯಾ ಕಲ್ಲಡ್ಕ, ಕಾರ್ಯದರ್ಶಿ ಲತೀಫ್ ನೇರಳಕಟ್ಟೆ, ತೀರ್ಪುಗಾರರ ಮಂಡಳಿ ಅಧ್ಯಕ್ಷ ಸುರೇಶ್ ಮೈರಡ್ಕ ಮತ್ತು ಪ್ರಸಾದ್ ಶೆಟ್ಟಿ ಸಹಕರಿಸಿದರು.