ಶ್ವೇತಯಾನದ ನೂರೆಂಟರೊಳಗೆ ಒಂದಾಗುವ ಭಾಗ್ಯ ನನ್ನದು: ಡಾ. ಉಮಾಶ್ರೀ

ಶ್ವೇತಯಾನದ ನೂರೆಂಟರೊಳಗೆ ಒಂದಾಗುವ ಭಾಗ್ಯ ನನ್ನದು: ಡಾ. ಉಮಾಶ್ರೀ


ಕುಂದಾಪುರ: ಯಶಸ್ವೀ ಕಲಾವೃಂದದ ಶ್ವೇತಯಾನದ ನೂರೆಂಟರಲ್ಲಿ ಭಾಗವಹಿಸುವ ಅವಕಾಶ ದೊರೆತದ್ದು ನನ್ನ ಪುಣ್ಯ. ಶಾಸ್ತ್ರೀಯವಾಗಿ ಕಲಿತ ಪಂಡಿತರ ಟೀಕೆ ಟಿಪ್ಪಣಿಗಳಿಂದ ಹೊರತಾದವರು ನಾವು. ಯಾಕೆಂದರೆ ಯಕ್ಷ ಕಲೆಯೊಳಗೆ ಬೆರೆಯುವ ಅವಕಾಶಕ್ಕೆ ಖುಷಿ ಪಟ್ಟು ಬಂದವಳು ನಾನು. ಈ ಕಲೆಯನ್ನು ಗೌರವಿಸುತ್ತಾ ಒಪ್ಪಿದ್ದೇನೆ, ಅಪ್ಪಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯೆ ಡಾ. ಉಮಾಶ್ರೀ ಹೇಳಿದರು. 

ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999-ಶ್ವೇತಯಾನ-108’ರ ಕಾರ್ಯಕ್ರಮವನ್ನು ಕಿರೀಟಕ್ಕೆ ನವಿಲುಗರಿಯನ್ನು ಇಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿಯ ಜೀವಂತ ಕಲೆಯಲ್ಲಿ ಜೀವಿಸುವ ಭಾಗ್ಯ ಸಿಕ್ಕಿದೆ. ಬಹುವಾಗಿ ಪಾಂಡಿತ್ಯರು, ಶಾಸ್ತ್ರೀಯವಾಗಿ ಕಲಿತು ಪರಿಪೂರ್ಣತೆಯನ್ನು ಸಾಧಿಸಿದ ಸಾವಿರ ಸಾವಿರ ಸಂಖ್ಯೆಗೂ ಮೀರಿದ ಕಲಾವಲಯವಾಳಿದ ಲೋಕಕ್ಕೆ ನಾನು ನನ್ನ ಸಂತೋಷಕ್ಕಾಗಿ ಬಂದಿದ್ದೇನೆ ಎಂದರು.

ಶುಭಾಶಂಸನೆ ಮಾಡಿದ ಪ್ರೊ. ಪವನ್ ಕಿರಣಕೆರೆ, ಮಕ್ಕಳಿಗೆ ಕಲೆಯನ್ನು ಕಲಿಸುತ್ತಾ ಕಲೆಯನ್ನು ಕೈ ದಾಟಿಸುವ ಕೆಲಸ ಯಶಸ್ವೀ ಸಂಸ್ಥೆ ಮಾಡುತ್ತಿದೆ. ಕಲಾ ವಲಯದಲ್ಲಿ ಕಲಾವಿದ ವಿಜೃಂಭಿಸಬೇಕಾದರೆ ಸಂಘಟಕ ಮತ್ತು ಪ್ರೇಕ್ಷಕ ಇವೆರಡು ದೊಡ್ಡ ಆಸ್ತಿಯಾಗಿರುತ್ತದೆ. ಮೂರನೆಯ ದೊಡ್ಡ ಶಕ್ತಿಯಾಗಿ ಪೋಷಕ ನಿಂತರೆ ನಾಲ್ಕನೆಯವರಾಗಿ ಕಲಾವಿದರಾದ ನಾವು ಕಲೆಯನ್ನು ವಿಸ್ತರಿಸುತ್ತಾ, ಪೋಷಿಸುತ್ತಾ ಸಾಗುತ್ತೇವೆ. ಯಕ್ಷ ಕಲಾವಲಯದ ಆಚೆ ಇರುವವರು ಯಕ್ಷಗಾನಕ್ಕೆ ಬರುವಂತೆ ಆಗಬೇಕು. ಈ ಸಾಧನೆಯನ್ನು ನಟಿ ಉಮಾಶ್ರೀಯ ಆಗಮನದ ಮೂಲಕ ಸಾಧಿಸಿದ್ದಾರೆ. ಶ್ವೇತಯಾನ ನೂರೆಂಟಕ್ಕೇ ನಿಲ್ಲದೇ ಸಾವಿರದೆಂಟು ಕಾರ್ಯಕ್ರಮವಾಗಲಿ ಎಂದು ಹಾರೈಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಉಪನ್ಯಾಸಕ ಸುಜಯೀಂದ್ರ ಹಂದೆ, ಕುಂದಾಪುರದ ಕುಗ್ರಾಮ ಕೊಮೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಕಾರಣ ಯಶಸ್ವೀ ಕಲಾವೃಂದ. ಈ ಸಂಸ್ಥೆ ತನ್ನನ್ನು ತಾನು ವಿಸ್ತರಿಸಿಕೊಳ್ಳುತ್ತಾ ಜಗತ್ತಿನಾದ್ಯಂತ ಗುರುತಿಸಿಕೊಂಡಿದೆ. ಹಳ್ಳಿ ಹಳ್ಳಿಗಳೂ ಸಾಂಸ್ಕೃತಿವಾಗಿ ಹೆಚ್ಚು ಹೆಚ್ಚು ತೊಡಗಿಸಿಕೊಂಡರೆ ಅದು ಒಂದು ದೇಶದ ನಿಜವಾದ ಸಂಪತ್ತು. ಆ ನಿಟ್ಟಿನಲ್ಲಿ ಯಶಸ್ವೀ ಕಲಾವೃಂದ ರಾಷ್ಟ್ರದ ಸಂಪತ್ತನ್ನು ಹೆಚ್ಚಿಸುವಲ್ಲಿ ದೊಡ್ಡ ಕೊಡುಗೆ ಕೊಟ್ಟಿದೆ ಎಂದರು. 

ಮುಖ್ಯ ಅತಿಥಿ ಡಾ. ದೀಪಕ್ ಶೆಟ್ಟಿ ಮಾತನಾಡಿ, ನಟಿ ಉಮಾಶ್ರೀ ಯಕ್ಷ ವಲಯಕ್ಕೆ ಬಂದದ್ದು ನಿಜಕ್ಕೂ ಕಲೆಯ ವಿಸ್ತರಣೆಯಾದಂತಾಗಿದೆ. ಉಮಾಶ್ರಿಯವರು ತಾಳಮದ್ದಳೆಯಲ್ಲಿ ಬಹಳ ಮನೋಜ್ಞವಾಗಿ ಅಭಿನಯಿಸಿದ್ದಾರೆ ಎಂದು ಶ್ಲಾಘಿಸಿದರು. 

ಇನ್ನೊರ್ವ ಮುಖ್ಯ ಅತಿಥಿ ಡಾ. ಕೆ.ಸಿ. ಬಲ್ಲಾಳ್, ತೆಕ್ಕಟ್ಟೆಯ ಹಲವರು ಚಿತ್ರರಂಗದಲ್ಲಿ, ಯಕ್ಷಗಾನದಲ್ಲಿ ವಿಜೃಂಬಿಸಿದ್ದಾರೆ. ಹಾಗೆ ಈ ಸಂಸ್ಥೆಯೂ ನೂರಾರು ಕಾಲ ಮೆರೆಯಲಿ ಎಂದು ಶುಭಕೋರಿದರು.

ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ ಸಂಭ್ರಮದ ಮಾತನ್ನಾಡಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಹೂವಿನಕೋಲು, ಒಡ್ಡೋಲಗಗಳು, ಗಾನ ವೈಭವ, ವಾಗ್ವಿಲಾಸದ ಯಕ್ಷವಿಶೇಷ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ‘ನವನೀತ’ ರಂಗ ಪ್ರಸ್ತುತಿಗೊಂಡಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article