ಸಮುದ್ರಕ್ಕೆ ಬಿದ್ದು ಮೃತಪಟ್ಟ ಯುವಕನ ಪ್ರಕರಣ: ಸಾವಿನ ಬಗ್ಗೆ ಸಂಶಯ

ಸಮುದ್ರಕ್ಕೆ ಬಿದ್ದು ಮೃತಪಟ್ಟ ಯುವಕನ ಪ್ರಕರಣ: ಸಾವಿನ ಬಗ್ಗೆ ಸಂಶಯ

ಕುಂದಾಪುರ: ಕೋಟೇಶ್ವರ ಹಳೆಅಳಿವೆ ಪ್ರದೇಶದ ಬೀಜಾಡಿ ಗ್ರಾಮ ವ್ಯಾಪ್ತಿಯ ಸಮುದ್ರ ಕಿನಾರೆಯಲ್ಲಿ ಫೆ. 25 ರಂದು ಸಮುದ್ರಕ್ಕೆ ಮರಣ ಬಲೆ ಬಿಡಲು ಹೋಗಿದ್ದ ಮೇಘರಾಜ್ ಎಂಬ 24 ರ ಹರೆಯದ ಯುವಕನ ಸಾವು ಆಕಸ್ಮಿಕವಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಸಂಶಯ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕು ಎಂದು ಆಗ್ರಹಿಸಿ ಅವರು ಕುಂದಾಪುರ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. 

ಪೊಲೀಸರಿಗೆ ಸಲ್ಲಿಸಿದ ಮನವಿಯಲ್ಲಿ ಅವರು ಹಲವು ವಿಷಯಗಳು ಸಂಶಯಾಸ್ಪದ ಎಂದು ವಿವರಿಸಿದ್ದಾರೆ.

24ರ ಹರೆಯದ ಯುವಕ ಏಕಾಏಕಿ ಸಮುದ್ರ ಪಾಲಾಗುವುದು ಅಸಾಧ್ಯ. ಇದರ ಹಿಂದೆ ಕ್ರಿಕೆಟ್ ಬುಕ್ಕಿಗಳು, ಬಡ್ಡಿ ದಂಧೆಕೋರರ ಕೈವಾಡವಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ. 

ಉಡುಪಿ ಜಿಲ್ಲೆಯಾದ್ಯಂತ ಈ ಅಕ್ರಮ ದಂಧೆ ಯಗ್ಗಿಲ್ಲದೆ ನಡೆಯುತ್ತಿದ್ದು, ಪೋಲೀಸರ ಗಮನಕ್ಕೆ ಬಾರದಿರುವುದು ಆಶ್ಚರ್ಯವಾಗಿದೆ! ಮೇಘರಾಜ್ ಪ್ರಕರಣದಲ್ಲೂ ಈ ದಂಧೆಯವರೇ ಕೈ ಚಳಕ ತೋರಿಸಿದ್ದಾರೆ. ಅವರನ್ನು ಸಮುದ್ರ ದಡದಲ್ಲಿ ಕೊಲೆ ಮಾಡಿ ನೀರಿಗೆ ಎಸೆದಿದ್ದಾರೆ ಎಂಬ ಸಂಶಯ ಬಲವಾಗಿದೆ. ಆದ್ದರಿಂದ ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯ ಹೊರತರಬೇಕು, ಕೊಲೆಯಾದ ವ್ಯಕ್ತಿ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಎಂದು ಪುತ್ರನ್ ಆಗ್ರಹಿಸಿದ್ದಾರೆ. 

ಮೇಘರಾಜ್ ಅವರು ಮರಣ ಬಲೆ ಬಿಡಲೆಂದು ಸಮುದ್ರಕ್ಕೆ ಬಂದವರು ಅಕಸ್ಮಾತ್ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಸುದ್ದಿಯಾಗಿತ್ತು.  ಕರಾವಳಿ ಕಾವಲು ಪಡೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದರು. ಮೇಘರಾಜ್ ಬೆಳಿಗ್ಗೆ ಹಳೆ ಅಳಿವೆ ಪ್ರದೇಶದಲ್ಲಿ ಸಮುದ್ರ ಪಾಲಾಗಿದ್ದು, ಸಂಜೆ ಸಮೀಪದಲ್ಲೇ ಅವರ ಶವ ದೊರಕಿತ್ತು. ಇದು ಕೂಡಾ ಸಂಶಯಕ್ಕೆ ಎಡೆ ಮಾಡಿದೆ ಎನ್ನಲಾಗಿದೆ. ಅವರು ಕಾರಿನಲ್ಲಿ ಬಂದಿದ್ದು, ಮೊಬೈಲ್ ಕಾರಿನಲ್ಲೇ ಬಿಟ್ಟಿದ್ದರು ಮತ್ತು ಅವರ ಬಳಿ ಮೀನಿನ ಬಲೆ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಪೋಲೀಸರ ಮುಂದಿನ ಕ್ರಮಕ್ಕಾಗಿ ಕಾದು ನೋಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article