ಪಿಲಿಕುಳ ನಿಸರ್ಗ ಧಾಮ ಸೇರಿ 10 ಇಲಾಖೆಗಳ ಅಭಿವೃದ್ಧಿಗೆ 165 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಕೆ: ಬಿ. ಶಿವಣ್ಣ

ಪಿಲಿಕುಳ ನಿಸರ್ಗ ಧಾಮ ಸೇರಿ 10 ಇಲಾಖೆಗಳ ಅಭಿವೃದ್ಧಿಗೆ 165 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಕೆ: ಬಿ. ಶಿವಣ್ಣ

ಮಂಗಳೂರು: ಮಂಗಳೂರು ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿ 10 ಇಲಾಖೆಗಳಿಂದ ಒಟ್ಟು 165 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಕರ್ನಾಟಕ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿ ಅಧ್ಯಕ್ಷ ಬಿ. ಶಿವಣ್ಣ ತಿಳಿಸಿದ್ದಾರೆ.

ಸಮಿತಿಯು ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡಿದ ಬಳಿಕ ಬುಧವಾರ ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ  ಸಭೆಯ ಬಳಿಕ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

ಪಿಲಿಕುಳ ನಿಸರ್ಗಧಾಮವನ್ನು ರಾಜ್ಯದ ಆಕರ್ಷಣೀಯ ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ಅರಣ್ಯ, ಪ್ರವಾಸೋದ್ಯಮ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ವಿಜ್ಞಾನ ಮತ್ತು ತಂತ್ರಜ್ಞಾನ, ಕಂದಾಯ, ತೋಟಗಾರಿಕೆ, ಕನ್ನಡ ಮತ್ತು ಸಂಸ್ಕೃತಿ, ಮೀನುಗಾರಿಕೆ, ಜವಳಿ ಸೇರಿ 10 ಇಲಾಖೆಗಳಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಇಲಾಖಾವಾರು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿ, ಅಲ್ಲಿನ ವರದಿ ಆಧಾರದಲ್ಲಿ ವಿವಿಧ ಇಲಾಖೆಗಳ ಸಚಿವರ ಜತೆ ಸಾಧಕ ಬಾಧಕಗಳನ್ನು ಚರ್ಚಿಸಿ ಬಳಿಕ ಮುಖ್ಯಮಂತ್ರಿ ಮಟ್ಟದಲ್ಲಿ ಸಭೆ ನಡೆಸಿ ಅಗತ್ಯ ಅನುದಾನ ಒದಗಿಸಲು ಕ್ರಮ ವಹಿಸಲಾಗುವುದು. ಪಿಲಿಕುಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ ಹೆಚ್ಚಳದ ಬಗ್ಗೆಯೂ ಗಮನ ಹರಿಸಲಾಗಿದೆ ಎಂದು ಅವರು ಹೇಳಿದರು.

ಸಮಿತಿಯ ಸದಸ್ಯ ಎಂ.ಆರ್. ಸೀತಾರಾಂ ಮಾತನಾಡಿ, ಪಿಲಿಕುಳದ ದೀರ್ಘಾವಧಿಯ ಅಭಿವೃದ್ಧಿಗಾಗಿ ಅನುದಾನ ಒದಗಿಸುವ ಜತೆಗೆ ಪಿಲಿಕುಳದ ಉಸ್ತುವಾರಿಗೆ ಉಪ  ನಿರ್ದೇಶಕರ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡುವ ನಿಟ್ಟಿನಲ್ಲಿಯೂ ಸಭೆಯಲ್ಲಿ ಚರ್ಚೆಯಾಗಿದೆ. ಪಿಲಿಕುಳ ದ.ಕ. ಜಿಲ್ಲೆಯ ಮುಖಪುಟ ಇದ್ದಂತೆ. ಇದನ್ನು ಇ ನ್ನಷ್ಟು ಆಕರ್ಷಣೀಯವಾಗಿಸುವ ಜತೆಗೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದವರು ಹೇಳಿದರು.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವನ್ನು ಮಂಡಳಿಯಾಗಿ ರಚಿಸುವ ಅಥವಾ ನಿರ್ವಹಣೆಯನ್ನು ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಬೇಡಿಕೆಯೂ ಸಭೆಯಲ್ಲಿ  ವ್ಯಕ್ತವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ವರದಿ ಆಧಾರದಲ್ಲಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಪಿಲಿಕುಳ ಪ್ರಾಧಿಕಾರಕ್ಕೆ ಕಾಯಂ ಆಯುಕ್ತರ ನೇಮಕದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಪ್ರಸ್ತಾವಿಸಲಾಗಿರುವ ಸಮಗ್ರ ಅಭಿವೃದ್ಧಿಯ ಬಳಿಕ ಈ ಬಗ್ಗೆ ಕ್ರಮ ವಹಿಸಲಾಗುತ್ತದೆ ಎಂದರು.

ಏನೇನು ಕಾಮಗಾರಿ ಪ್ರಸ್ತಾಪ:

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ತಾರಾಲಯಕ್ಕೆ ಲೇಸರ್ ಪ್ರೊಜೆಕ್ಟರ್ ಅಳವಡಿಕೆ, ಪ್ರೊ. ಯು.ಆರ್. ರಾವ್ ಗ್ಯಾಲರಿ ಸ್ಥಾಪನೆ, ತಾರಾಲಯ ಪಾರ್ಕ್‌ನಲ್ಲಿ ಮಾದರಿಗಳ ಅಳವಡಿಕೆ, ವಿಜ್ಞಾನ ಕೇಂದ್ರದ ಮಾದರಿಗಳ ಬದಲಾವಣೆ ಸೇರಿದಂತೆ ಒಟ್ಟು 4,900 ಲಕ್ಷ ರೂ. ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರವಾಸೋದ್ಯಮ  ಇಲಾಖೆಯಿಂದ ಪ್ರಸಕ್ತ ಇರುವ ಎರಡು ಆಂಪಿ ಥಿಯೇಟರ್‌ಗಳ ನವೀಕರಣ, ಸೋಲಾರ್ ಗ್ರಿಡ್, ಪಿಲಿಕುಳದ ಸುತ್ತ ಶಾಶ್ವತ ಕಂಪೌಂಡ್ ವಾಲ್ ನಿರ್ಮಾಣ, ವಿದ್ಯುತ್  ಟ್ರಾನ್ಸ್‌ಫಾರ್ಮರ್, ದಾರಿದೀಪ ನವೀಕರಣ, ಲೇಕ್ ಗಾರ್ಡನ್‌ನಲ್ಲಿ ತೂಗು ಸೇತುವೆ ನಿರ್ಮಾಣ, ಪ್ರವಾಸಿಗರಿಗೆ ಹೈಟೆಕ್ ಯಾತ್ರಿ ನಿವಾಸ, ಡಾರ್ಮಿಟರಿ ನಿರ್ಮಾಣ, ಮಕ್ಕಳ  ಪಾರ್ಕ್ ಅಭಿವೃದ್ಧಿ ಹಾಗೂ ಟಾಯ್ ಟ್ರೇನ್ ನಿರ್ಮಾಣ ಸೇರಿ ಒಟ್ಟು 4,600 ಲಕ್ಷ ರೂ. ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಿವಣ್ಣ ಹೇಳಿದರು.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಿಂದ ಪಶ್ಚಿಮ ಘಟ್ಟದ ಸಂಶೋಧನಾ ಕೇಂದ್ರ, ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ ಯೋಜನೆಯ  ವಿಸ್ತರಣೆ, ಹರ್ಬೇರಿಯಂ ಮಾದರಿಗಳ ಡಿಜಿಟಲೀಕರಣ, ಸಸ್ಯಕಾಶಿ ಉನ್ನತೀಕರಣ, ವನ್ಯ ಪ್ರಾಣಿ ಸಂರಕ್ಷಣಾ ಕೇಂದ್ರ ಸೇರಿ 4,355 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಸಮಿತಿ ಸದಸ್ಯರಾದ ಡಿ.ಜಿ. ಶಾಂತನಗೌಡರ, ಸಮೃದ್ಧಿ ಮಂಜುನಾಥ್, ಪ್ರಕಾಶ್ ಕೋಳಿವಾಡ್, ರಾಜಾ ವೇಣುಗೋಪಾಲ ನಾಯಕ್, ವಿಠಲ್ ಸೋಮಣ್ಣ ಅಲ್ಗೇಕರ್, ಎನ್. ರವಿಕುಮಾರ್, ಗಣಪತಿ ಉಳ್ವೇಕರ್, ವಸಂತ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಹೀಂ, ಶಿಕ್ಷಣ ಇಲಾಖೆ ಆಯುಕ್ತ ಡಾ.  ತ್ರಿಕೋಲ್‌ಚಂದ್ರ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ. ಆನಂದ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article