
ಫೆ.11 ರಂದು ಅಂಬ್ಲಮೊಗರು ಗ್ರಾಮದ ಕೃಷಿಭೂಮಿಯ ಉಳಿವಿಗಾಗಿ ಪ್ರತಿಭಟನೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ
ಮಂಗಳೂರು: ಅಂಬ್ಲಮೊಗರು ಗ್ರಾಮದ ಕೃಷಿಭೂಮಿಯನ್ನು ಉಳಿಸಲಿಕ್ಕಾಗಿ, ರೈತರ ಬದುಕನ್ನು ಸಂರಕ್ಷಿಸಲಿಕ್ಕಾಗಿ, ಪಂಚಾಯತ್‌ನಿಂದ ನಿರ್ಮಿಸಲ್ಪಟ್ಟ ಎಲ್ಲಾ ರಸ್ತೆಗಳು ಸೇತುವೆಗಳು ಕಾಲುಸಂಕಗಳ ಉಳಿವಿಗಾಗಿ, ಬಲಾಢ್ಯ ಖಾಸಗಿ ವ್ಯಕ್ತಿಗಳ ಹಾಗೂ ಆಧುನಿಕ ಭೂ ಕಬಳಿಕೆದಾರರ ಹುನ್ನಾರಗಳನ್ನು ಬಯಲಿಗೆಳೆಯಲು ಒತ್ತಾಯಿಸಿ ಅಂಬ್ಲಮೊಗರು ಗ್ರಾಮಸ್ಥರಿಂದ ಫೆ.11ರಂದು ಬೆಳಿಗ್ಗೆ 10.30ಕ್ಕೆ ನಗರದ ಮಿನಿ ವಿಧಾನಸೌಧದ ಬಳಿ(ಕ್ಲಾಕ್ ಟವರ್)ಯಲ್ಲಿ ಪ್ರತಿಭಟನೆ ಜರುಗಲಿದೆ ಎಂದು ಕೃಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಬ್ಲಮೊಗರು ಗ್ರಾಮದ ಸುಮಾರು 200 ಎಕರೆ ಕೃಷಿಯೋಗ್ಯ ಭೂಮಿಗಳನ್ನು ಕಳೆದ ಹಲವು ವರ್ಷಗಳಿಂದ ಖಾಸಾಗೀ ವ್ಯಕ್ತಿಗಳು ಹಾಗೂ ಭೂಕಬಳಿಕೆದಾರರು ಅನುಮಾನಾಸ್ಪದ ರೀತಿಯಲ್ಲಿ ಖರೀದಿಸತೊಡಗಿದ್ದಾರೆ. ಬಲಾಢ್ಯ ಲಾಭಿಯೊಂದು ಏಜೆಂಟರನ್ನು ಮುಂದಿಟ್ಟು ಭೂಮಿಯನ್ನು ಖರೀದಿಸುತ್ತಿದೆ. ಇದರ ಜೊತೆಗೆ ನೂರಾರು ಎಕರೆ ಸರಕಾರಿ ಭೂಮಿಗಳನ್ನು ಇದೇ ಖಾಸಗಿ ವ್ಯಕ್ತಿಗಳು ತಮ್ಮ ಕೈವಶ ಮಾಡುತ್ತಿದ್ದಾರೆ. ಗುಡ್ಡಗಳನ್ನು ಅಗೆದು ನೆಲಸಮ ಮಾಡಲಾಗುತ್ತಿದ್ದು, ನೂರಾರು ಟಿಪ್ಪರ್‌ಗಳಲ್ಲಿ ಮಣ್ಣನ್ನು ಸಾಗಿಸಲಾಗುತ್ತಿದೆ. ಅದರಿಂದ ಉದ್ಭವಿಸಿದ ವಿಪರೀತ ಧೂಳಿನ ಸಮಸ್ಯೆಯಿಂದಾಗಿ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪಂಚಾಯತ್‌ನಿಂದ ಈಗಾಗಲೇ ನಿರ್ಮಿಸಲ್ಪಟ್ಟಿದ್ದ ಅನೇಕ ರಸ್ತೆಗಳನ್ನು, ಸೇತುವೆಗಳನ್ನು, ಕಾಲುಸಂಕಗಳನ್ನು ಬಂದ್ ಮಾಡಿ ಊರಿನ ನಾಗರಿಕರಿಗೆ ಅತ್ತಿಂದಿತ್ತ ನಡೆದಾಡಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣಗೊಂಡಿದೆ. ಇದರ ಹಿಂದಿನ ಉದ್ದೇಶಗಳು, ಯೋಜನೆಗಳು ಏನೆಂಬುದು ಜನಸಾಮಾನ್ಯರಿಗೆ ಬಿಡಿ, ಕನಿಷ್ಠ ಪಕ್ಷ ಸ್ಥಳೀಯ ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ತಿಳಿದಿಲ್ಲ ಎಂದು ಹೋರಾಟ ಸಮಿತಿಯು ಆರೋಪಿಸಿದೆ.
ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ ಕೂಡಲೇ ಮಧ್ಯೆಪ್ರವೇಶಿಸಿ ಅಂಬ್ಲಮೊಗರು ಗ್ರಾಮಸ್ಥರಿಗೆ ನ್ಯಾಯ ಒದಗಿಸಿ ಕೊಡಲು ಒತ್ತಾಯಿಸಿ ಫೆ.11 ರಂದು ಹಮ್ಮಿಕೊಂಡ ಪ್ರತಿಭಟನೆಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೋರಾಟ ಸಮಿತಿಯ ಗೌರವ ಸಂಚಾಲಕ ಕೃಷ್ಣಪ್ಪ ಸಾಲ್ಯಾನ್ ಹಾಗೂ ಗೌರವ ಸಲಹೆಗಾರ ಸುನಿಲ್ ಕುಮಾರ್ ಬಜಾಲ್ ಪ್ರಕಟಣೆಯಲ್ಲಿ ಜಂಟಿಯಾಗಿ ತಿಳಿಸಿದ್ದಾರೆ.