ಡಾ.ಪಿ.ದಯಾನಂದ ಪೈ ಎಸ್‌ಬಿಎಫ್ ಯುವ ಮಹೋತ್ಸವ್ ಸಂಪನ್ನ: ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆ ಬಹುಮಾನ ವಿತರಣೆ

ಡಾ.ಪಿ.ದಯಾನಂದ ಪೈ ಎಸ್‌ಬಿಎಫ್ ಯುವ ಮಹೋತ್ಸವ್ ಸಂಪನ್ನ: ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆ ಬಹುಮಾನ ವಿತರಣೆ


ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ ಆಯೋಜನೆಯ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆ, ವಿಜೇತರಿಗೆ ಪುರಸ್ಕಾರ ಪ್ರದಾನ ಕಾರ್ಯಕ್ರಮ ‘ಡಾ. ಪಿ ದಯಾನಂದ ಪೈ ಎಸ್‌ಬಿಎಫ್ ಯುವ ಮಹೋತ್ಸವ್-2025’ ಭಾನುವಾರ ನಗರದಲ್ಲಿ ಸಂಪನ್ನಗೊಂಡಿತು.

ಸ್ಪರ್ಧೆಯ ತೀರ್ಪುಗಾರರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಬಾನ್ಸುರಿ ಕಲಾವಿದ ಪಂ. ರೋನು ಮಜುಂದಾರ್, ಅಂತಾರಾಷ್ಟ್ರೀಯ ಕಲಾವಿದರಾದ ಪಂ. ಜಯತೀರ್ಥ ಮೇವುಂಡಿ, ಯುವ ತಬ್ಲಾ ವಾದಕ ಪಂ. ಯಶವಂತ್ ವೈಷ್ಣವ್, ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ, ಡಾ.ಶಶಾಂಕ್ ಮಕ್ತೇದಾರ್ ಹಾಗೂ ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್ ಅವರನ್ನು ಗೌರವಿಸಲಾಯಿತು.


ಯುವಜನರಲ್ಲಿ ಹಿಂದುಸ್ತಾನಿ ಶಾಸೀಯ ಸಂಗೀತವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಡಾ. ಪಿ. ದಯಾನಂದ ಪೈ ಎಸ್‌ಬಿಎಫ್ ಯುವ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಸ್ಪರ್ಧಾಳುಗಳಿಗೆ ಹಿರಿಯ ಕಲಾವಿದರಿಂದ ಸಂಗೀತ ಪ್ರಾತ್ಯಕ್ಷಿಕೆಯನ್ನೂ ನೀಡಲಾಗಿದೆ. ಯುವ ಕಲಾವಿದರ ಕೈಯಲ್ಲಿ ಶಾಸ್ತ್ರೀಯ ಸಂಗೀತ ಭದ್ರವಾಗಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಹೇಳಿದರು.

ಉಸ್ತಾದ್ ರಫೀಕ್ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂಆರ್‌ಪಿಎಲ್‌ನ ಕೃಷ್ಣ ಹೆಗ್ಡೆ, ಸಂಗೀತ ಭಾರತಿ ಪ್ರತಿಷ್ಠಾನದ ಟ್ರಸ್ಟಿ ಅಂಕುಶ್ ಎನ್. ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಸಂಗೀತ ಭಾರತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್. ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.


ಸಂಗೀತ ಭಾರತಿ ಪ್ರತಿಷ್ಠಾನ ಅಧ್ಯಕ್ಷ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಸ್ವಾಗತಿಸಿ, ಉಪನ್ಯಾಸಕಿ ಧೃತಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ಭಾರತಿ ಪ್ರತಿಷ್ಠಾನದ ಖಜಾಂಚಿ ಕರುಣಾಕರ ಬಳ್ಕೂರು, ಟ್ರಸ್ಟಿಗಳಾದ ಮುರುಳೀಧರ ಜಿ. ಶೆಣೈ, ಡಾ.ರಮೇಶ್ ಕೆ.ಜಿ, ಉಪನ್ಯಾಸಕಿ ಉಜ್ವಲ್ ಪ್ರದೀಪ್ ಮತ್ತಿತರರು ಸಹಕರಿಸಿದರು.

ಬಹುಮಾನ ವಿಜೇತರು:

ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದ 18-30 ವರ್ಷದೊಳಗಿನ 24 ಕಲಾವಿದರ ಸ್ಪರ್ಧೆಯ ಹಾಡುಗಾರಿಕೆ ವಿಭಾಗದಲ್ಲಿ ಇಶಾನ್ ಘೋಷ್ ಕೋಲ್ಕತಾ (ಪ್ರಥಮ), ವಿಭಾ ಹೆಗ್ಡೆ ಯಲ್ಲಾಪುರ (ದ್ವಿತೀಯ) ಮತ್ತು ಮಿತ್ರಾ ಭಟ್ಟಾಚಾರ್ಯ ಕೋಲ್ಕತಾ(ತೃತೀಯ) ಬಹುಮಾನ ಪಡೆದರು. ವಾದ್ಯ ವಿಭಾಗದಲ್ಲಿ ಮಾಧವ್ ಕಲ್ರಾ ನವದೆಹಲಿ (ಪ್ರಥಮ), ಆದಿತ್ಯ ಅಭಿಜಿತ್ ದೇಶಪಾಂಡೆ, ಪುಣೆ (ದ್ವಿತೀಯ) ಮತ್ತು ಕಾರ್ತಿಕ್ ಭಟ್ ಪಾಣೆಮಂಗಳೂರು (ತೃತೀಯ) ಬಹುಮಾನ ಗಳಿಸಿದರು. ಪ್ರಥಮ ಸ್ಥಾನಿಗೆ 60 ಸಾವಿರ ರೂ., ದ್ವಿತೀಯ 40 ಸಾವಿರ ರೂ. ಹಾಗೂ ತೃತೀಯ ಸ್ಥಾನಿಗೆ 20 ಸಾವಿರ ರೂ.ಬಹುಮಾನ ನೀಡಲಾಯಿತು. ಪ್ರಥಮ ಸ್ಥಾನ ವಿಜೇತ  ಇಶಾನ್ ಘೋಷ್ ಕೋಲ್ಕತಾ ಹಾಗೂ ಮಾಧವ್ ಕಲ್ರಾ ನವದೆಹಲಿ ಅವರಿಗೆ ಸ್ವರ ಭಾರತಿ ಬಿರುದು ಪ್ರದಾನ ಮಾಡಲಾಯಿತು. ಬಹುಮಾನ ವಿಜೇತ ಕಲಾವಿದರು ಪ್ರತಿಭಾ ಪ್ರದರ್ಶನ ನೀಡಿದರು.

ಗಮನ ಸೆಳೆದ ಕಛೇರಿ:

ಪಂ.ರೋನು ಮಜುಂದಾರ್, ಹುಬ್ಬಳ್ಳಿಯ ಪಂ.ಜಯತೀರ್ಥ ಮೇವುಂಡಿ ಮತ್ತು ಉಸ್ತಾದ್ ರಫೀಕ್ ಖಾನ್ ಅವರ ಬಾನ್ಸುರಿ-ಗಾಯನ-ಸಿತಾರ್ ಜುಗಲ್‌ಬಂದಿ ಕಛೇರಿ ಸಂಗೀತಾಸಕ್ತರ ಗಮನ ಸೆಳೆಯಿತು. ಮುಂಬೈಯ ಪಂ.ಯಶವಂತ್ ವೈಷ್ಣವ್ ತಬ್ಲಾ ಹಾಗೂ ಪ್ರೊ.ನರೇಂದ್ರ ಎಲ್.ನಾಯಕ್ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article