
ಫೆ.14 ರಂದು ‘ಭುವನಂ ಗಗನಂ’ ಸಿನೆಮಾ ತೆರೆಗೆ
ಮಂಗಳೂರು: ಎಸ್‌ವಿಸಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣಗೊಂಡ ಪೃಥ್ವಿ ಅಂಬರ್ ಮತ್ತು ಪ್ರಮೋದ್ ಅಭಿನಯದ ‘ಭುವನಂ ಗಗನಂ’ ಸಿನೆಮಾ ಫೆ.14ರಂದು ಬಿಡುಗಡೆಗೊಳ್ಳಲಿದೆ.
‘ಭುವನಂ ಗಗನಂ’ ಪ್ರೀತಿಗೆ ಸಂಬಂಧಿಸಿದ ಸಿನೆಮಾ. ಭಾವನೆಗಳ ಮೇಲೆ ಈ ಸಿನೆಮಾ ಮೂಡಿಬಂದಿದೆ. ಸಾಮಾಜಿಕ ಸಂದೇಶ, ಮನೋರಂಜನೆ ಇರುವ ಸಿನೆಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಚಿತ್ರದ ನಾಯಕ ಪೃಥ್ವಿ ಅಂಬರ್ ಮಂಗಳೂರಿನವರಾದ ಕಾರಣ ಮಂಗಳೂರು ಕನ್ನಡದಲ್ಲಿ ಸಿನೆಮಾ ಸಂಭಾಷಣೆಯಿದೆ ಎಂದು ಚಿತ್ರದ ನಿರ್ದೇಶಕ ಗಿರೀಶ್ ಮೂಲಿಮನಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಟ ಪೃಥ್ವಿ ಅಂಬರ್ ಮಾತನಾಡಿ, ಮಂಗಳೂರಿನ ಪ್ರೇಕ್ಷಕರು ನನ್ನ ಈ ಹಿಂದಿನ ತುಳು, ಕನ್ನಡ ಸಿನಿಮಾಗಳನ್ನು ಮೆಚ್ಚಿಕೊಂಡಿದ್ದಾರೆ. ದಿಯಾ ಸಿನಿಮಾ ಬಳಿಕ ಪ್ರೇಕ್ಷಕರು ಭಾವುಕರಾಗುವ ಸನ್ನಿವೇಶ ‘ಭುವನಂ ಗಗನಂ’ ಸಿನಿಮಾದಲ್ಲಿದೆ. ಮಂಗಳೂರು ಶೈಲಿಯ ಕನ್ನಡ ಇಲ್ಲಿನವರಿಗೆ ಇಷ್ಟವಾಗಲಿದೆ. ಚಿತ್ರದಲ್ಲಿ ಪ್ರಬುದ್ಧವಾದ ಕಥೆಯಿದೆ. ಸಂಗೀತ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದರು.
ನಿರ್ಮಾಪಕ ಎಂ. ಮುನೇ ಗೌಡ ಮಾತನಾಡಿ, ‘ಭುವನಂ ಗಗನಂ’ ಸಿನೆಮಾವನ್ನು ಅತ್ಯುತ್ತಮವಾಗಿ ನಿರ್ಮಾಣ ಮಾಡಲಾಗಿದೆ. ದುಬೈನಲ್ಲಿ ಈಗಾಗಲೇ ಪ್ರೀಮಿಯರ್ ಶೋ ನಡೆದಿದ್ದು, ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಂಶೆ ವ್ಯಕ್ತವಾಗಿದೆ ಎಂದರು.
ನಟಿ ರಚೆಲ್ ಡೇವಿಡ್ ಮಾತಾಡಿ, ಸಿನಿಮಾದಲ್ಲಿ ಮಂಗಳೂರಿನ ಭಾಷೆ ಇಲ್ಲಿನ ಸಂಸ್ಕೃತಿಯನ್ನು ತೋರಿಸಲಾಗಿದೆ. ಮಂಗಳೂರಿನ ಚಿತ್ರಪ್ರೇಮಿಗಳು ಸಿನಿಮಾ ನೋಡಿ ನಮ್ಮನ್ನು ಆಶೀರ್ವದಿಸಿ ಎಂದರು.
ಈ ಸಂದರ್ಭದಲ್ಲಿ ನಟ ಪ್ರಮೋದ್, ನಟಿ ಅಶ್ವಥಿ, ಪ್ರಜ್ವಲ್ ಶೆಟ್ಟಿ, ಮಹೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.