ಫೆ.22 ರಂದು ತುಳುಭವನದಲ್ಲಿ ನಿರಂಜನ ಶತಮಾನೋತ್ಸವ ವಿಚಾರ ಸಂಕಿರಣ, ನಾಟಕ ಪ್ರದರ್ಶನ

ಫೆ.22 ರಂದು ತುಳುಭವನದಲ್ಲಿ ನಿರಂಜನ ಶತಮಾನೋತ್ಸವ ವಿಚಾರ ಸಂಕಿರಣ, ನಾಟಕ ಪ್ರದರ್ಶನ

ಮಂಗಳೂರು: ತುಳುನಾಡಿನ ಸ್ವಾತಂತ್ಯ ಹೋರಾಟ ಹಾಗೂ ಅಮರ ಸುಳ್ಯ ಸ್ವಾತಂತ್ಯ ಹೋರಾಟವನ್ನು ಕಥೆ, ಕಾದಂಬರಿ ಮೂಲಕ ಪ್ರಪ್ರಥಮ ಬಾರಿಗೆ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಪ್ರಸಿದ್ಧ ಕಾದಂಬರಿಕಾರ, ಪ್ರಗತಿಶೀಲ ಲೇಖಕ ನಿರಂಜನ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಫೆ.22 ರಂದು ಒಂದು ದಿನದ ವಿಚಾರ ಸಂಕಿರಣವನ್ನು ಮಂಗಳೂರಿನ ಉರ್ವಸ್ಟೋರ್‌ನಲ್ಲಿರುವ ತುಳು ಭವನದಲ್ಲಿ ಹಮ್ಮಿಕೊಂಡಿದೆ.

ಶನಿವಾರ ಬೆಳಿಗ್ಗೆ 10 ಗಂಟೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಪೋತ್ತಮ ಬಿಳಿಮಲೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಅಧ್ಯಕ್ಷತೆ ವಹಿಸುವರು. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಬೆಳಗ್ಗೆ 11.45ಕ್ಕೆ ‘ನಿರಂಜನರ ಬದುಕು ಮತ್ತು ಸಾಹಿತ್ಯದ’ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ನಿರಂಜನರ ಪ್ರಸಿದ್ಧ ಕಾದಂಬರಿ ‘ಚಿರಸ್ಮರಣೆ’ಯ ತುಳು ಅನುವಾದ ‘ಮದಪಂದಿ ನೆಂಪು’ ಕೃತಿಯ ಬಗ್ಗೆ ಹಿರಿಯ ಲೇಖಕಿ ಅತ್ರಾಡಿ ಅಮೃತ ಶೆಟ್ಟಿ ಮಾತನಾಡುವರು. ನಿರಂಜನರ ‘ಮೃತ್ಯುಂಜಯ’ ಕಾದಂಬರಿಯ ಬಗ್ಗೆ ಪ್ರಾಂಶುಪಾಲರು ಹಾಗೂ ಲೇಖಕ ಗಣರಾಜ ಕುಂಬ್ಳೆ ರಾಮಕುಂಜ ಮಾತನಾಡುವರು. ನಿರಂಜನರ ‘ಸಮಗ್ರ ಸಾಹಿತ್ಯ ಅವಲೋಕನ’ವನ್ನು ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಅವರು ಮಾಡುವರು. ‘ಕರಾವಳಿಯ ಸ್ವಾತಂತ್ಯ ಹೋರಾಟ ಮತ್ತು ರೈತ ಚಳವಳಿಗೆ ನಿರಂಜನರ ಪ್ರೇರಣೆಯ’ ಬಗ್ಗೆ ಚಿಂತಕ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡುವರು. ಹಂಪಿ ವಿ.ವಿ ಯ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ವಿದ್ವಾಂಸರಾದ ಪ್ರೊ. ಎ.ವಿ ನಾವಡ ಅವರು ‘ನಿರಂಜನರೊಂದಿಗೆ ತನ್ನ ಒಡನಾಟ’ವನ್ನು ಹಂಚಿಕೊಂಡು ಮೊದಲ ಗೋಷ್ಠಿಯ ಸಮನ್ವಯದ ಮಾತುಗಳನ್ನಾಡುವರು.

ಅಪರಾಹ್ನ 2 ಗಂಟೆಗೆ ‘ನಿರಂಜನರ ಸಾಹಿತ್ಯ: ಹೊಸ ತಲೆಮಾರಿನ ದೃಷ್ಟಿಕೋನ’ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಿಂದ ಆಯ್ದ 15 ಕಾಲೇಜಿನ 15 ವಿದ್ಯಾರ್ಥಿಗಳು ತಾವು ಓದಿದ ನಿರಂಜನರ ಕಥೆ, ಕಾದಂಬರಿಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವರು. ಈ ಗೋಷ್ಠಿಯ ಸಮನ್ವಯವನ್ನು ಲೇಖಕಿ, ವಿಶ್ರಾಂತ ಉಪನ್ಯಾಸಕಿಯಾದ ಡಾ. ಮೀನಾಕ್ಷಿ ರಾಮಚಂದ್ರ ಅವರು ನಡೆಸಿಕೊಡುವರು.

ಅಪರಾಹ್ನ 3.30ಕ್ಕೆ ‘ನಿರಂಜನರ ಹಿನ್ನೆಲೆಯಲ್ಲಿ ನೂರು ವರ್ಷಗಳ ತುಳುನಾಡು’ ಎಂಬ ವಿಚಾರದ ಬಗ್ಗೆ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಅವರು ನಿರಂಜನರ ‘ಪತ್ರಿಕೋದ್ಯಮದ ಸೇವೆಯ’ ಬಗ್ಗೆ ಮಾತನಾಡಲಿದ್ದಾರೆ. ಹಿರಿಯ ಸಾಹಿತಿ ಡಾ. ಬಿ. ಜನಾರ್ದನ ಭಟ್ ಅವರು ‘ನಿರಂಜನರ ಸಮಗ್ರ ಕಾದಂಬರಿ’ಯ ಅವಲೋಕನ ಮಾಡಲಿದ್ದಾರೆ. ಲೇಖಕಿ ಹಾಗೂ ಪ್ರಾಂಶುಪಾಲರಾದ ಡಾ ಜ್ಯೋತಿ ಚೇಳೈರು ನಿರಂಜನರ ‘ಕೊನೆಯ ಗಿರಾಕಿ’ ಕತೆಯ ಹಿನ್ನೆಲೆಯಲ್ಲಿ ಕರಾವಳಿಯಿಂದ ನಾಪತ್ತೆಯಾದ ಹೆಣ್ಣು ಮಕ್ಕಳ ವಿಚಾರದ ಬಗ್ಗೆ ಮಾತನಾಡುವರು. ಹಿರಿಯ ಸಾಹಿತಿ ರಾಧಕೃಷ್ಣ ಉಳಿಯತ್ತಡ್ಕ ಅವರು ‘ಮಲಯಾಳಂ ಸಾಹಿತ್ಯ ಲೋಕದಲ್ಲಿ ನಿರಂಜನರ ಖ್ಯಾತಿ’ಯ ಬಗ್ಗೆ ಮಾತನಾಡುವರು. ಈ ಗೋಷ್ಠಿಯ ಸಮನ್ವಯ ಹಾಗೂ ಸಮಾರೋಪದ ಮಾತುಗಳನ್ನು ಉಡುಪಿಯ ಡಾ. ಶಿವರಾಮ ಕಾರಂತ ಟ್ರಸ್ಟ್ ನ ನಿರ್ದೇಶಕರಾದ ಡಾ. ಗಣನಾಥ ಎಕ್ಕಾರು ಮಾಡಲಿರುವರು.

ಬೆಳಿಗ್ಗೆ ಹಾಗೂ ಸಂಜೆ ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಮತ್ತು ಅಲೋಷಿಯಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ರಂಗಗೀತೆಗಳ ಪ್ರಸ್ತುತಿ ನಡೆಯಲಿದೆ.

ಸಂಜೆ 6 ಗಂಟೆಗೆ ನಿರಂಜನರ ಮೃತ್ಯುಂಜಯ ಕಾದಂಬರಿ ಆಧಾರಿತ ರೋಹಿತ್ ಎಸ್. ಬೈಕಾಡಿ ನಿರ್ದೇಶನದ ಮಣಿಪಾಲದ ಸಂಗಮ ನಾಟಕ ಕಲಾವಿದರು ಪ್ರಸ್ತುತಪಡಿಸುವ ‘ಮರಣ ಗೆಂದಿನಾಯೆ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article