
‘ಸೌಹಾರ್ದದ ಬಳಿ; ನಮ್ಮ ಕರಾವಳಿ’: ಫೆ.28ರಿಂದ ನಿರ್ದಿಗಂತ ಉತ್ಸವ 2025
ಮಂಗಳೂರು: ಯುವ ಮನಸ್ಸುಗಳನ್ನು ರಂಗಭೂಮಿಯತ್ತ ಸೆಳೆಯುವ ನಿಟ್ಟಿನಲ್ಲಿ ಖ್ಯಾತ ನಟ ಪ್ರಕಾಶ್ರಾಜ್ ನೇತೃತ್ವದಲ್ಲಿ ರೂಪುಗೊಂಡಿರುವ ನಿರ್ದಿಗಂತ ತಂಡದಿಂದ ಈ ಬಾರಿ ‘ಸೌಹಾರ್ದದ ಬಳಿ; ನಮ್ಮ ಕರಾವಳಿ’ ಎಂಬ ಶೀರ್ಷಿಕೆಯಡಿ ಫೆ. 28ರಿಂದ ಮಾ. 3ರವರೆಗೆ ನಿರ್ದಿಗಂತ ಉತ್ಸವ 2025 ನಡೆಯಲಿದೆ.
ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ತುಳು, ಕೊಂಕಣಿ ಸೇರಿದಂತೆ ರಂಗಭೂಮಿ ನಿರ್ದೇಶಕರಿಂದ ರಚನೆಗೊಂಡಿರುವ 8 ನಾಟಕಗಳು ಪ್ರದರ್ಶನಗೊಳ್ಳಲಿವೆ. ಕಲೆಯ ಮೂಲಕ ಭಾವೈಕ್ಯತೆಯಿಂದ ಕೂಡಿದ ನಾಟಕಗಳ ಜತೆಗೆ ವಿವಿಧ ರೀತಿಯ ಕಾರ್ಯಾಗಾರ, ವಿಚಾರಗೋಷ್ಟಿ, ಬೀದಿನಾಟಕಗಳನ್ನು ಆಯೋಜಿಸಲಾಗಿದೆ.
ಉತ್ಸವದ ಬಗ್ಗೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ನಿರ್ದಿಗಂತ ರುವಾರಿ, ಬಹುಭಾಷಾ ನಟ ಪ್ರಕಾಶ್ ರಾಜ್ ತಿಳಿಸಿದರು.
ಫೆ. 28ರಂದು ಬೆಳಗ್ಗೆ 9.30ಕ್ಕೆ ಸಂತ ಅಲೋಶಿಯಸ್ ಕಾಲೇಜಿನ ಕುಲಪತಿ ರೆ.ಡಾ. ಪ್ರವೀಣ್ ಮಾರ್ಟಿಸ್ ಉಪಸ್ಥಿತಿಯಲ್ಲಿ ಉದ್ಘಾಟನೆ ನೆರವೇರಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಶಯ ಭಾಷಣ ಮಾಡಲಿದ್ದಾರೆ.
12 ಗಂಟೆಗೆ ಉತ್ಸವದ ಪ್ರಥಮ ನಾಟಕ, ಶಕೀಲ್ ಅಹ್ಮದ್ ನಿರ್ದೇಶನದ ‘ಫಾರ್ ಎ. ಬೈಟ್ ಆಪ್ ಫುಡ್’ನ್ನು ಬಿಜಾಪುರದ ಸ್ಪಿನ್ನಿಂಗ್ ಟ್ರೀ ಥಿಯೇಟರ್ ತಂಡ ಪ್ರಸ್ತುತ ಪಡಿಸಲಿದೆ.
ಸಂಜೆ 3 ಗಂಟೆಗೆ ಮಂಗಳೂರು ಯಕ್ಷಮಿತ್ರರು ತಂಡದಿಂದ ಕೋಟಿ ಚೆನ್ನಯ್ಯ ಯಕ್ಷಗಾನ ನಡೆಯಲಿದ್ದು, ಡಾ. ಗಣನಾಥ ಎಕ್ಕಾರು ಅವರು ಸಂಜೆ 4 ಗಂಟೆಗೆ ‘ಬದಲಾಗುತ್ತಿರುವ ಯಕ್ಷಗಾನದ ಸ್ವರೂಪ’ ಎಂಬ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.
ಸಂಜೆ 5.30ಕ್ಕೆ ಸಂತ ಅಲೋಶಿಯಸ್ ಕಾಲೇಜು ತಂಡದಿಂದ ಕಾಲೇಜ್ ಬ್ಯಾಂಡ್ ಜ್ಯಾಮಿಂಗ್ ನಡೆಯಲಿದ್ದು, ಸಂಜೆ ಧಾರವಾಡದ ಆಟಮಾಟ ತಂಡ ಹಾಗೂ ಮಹದೇವ ಹಡಪದ ನಿರ್ದೇಶನದ ‘ಗುಡಿಯ ನೋಡಿರಣ್ಣ’ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ. 1ರಂದು ಬೆಳಗ್ಗೆ 10.30ಕ್ಕೆ ಡಾ. ಮೋಹನ್ ಕುಂಟಾರ್ ಅವರು ‘ಕರಾವಳಿಯ ಭಾಷಾ ಸಂಬಂಧದ ಕೊಡುಕೊಳ್ವೆಯ ಸ್ವರೂಪ’ ವಿಷಯದಲ್ಲಿ ಮಾತನಾಡಲಿದ್ದಾರೆ.
12 ಗಂಟೆಗೆ ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ತಂಡದಿಂದ ಕ್ಲೆನ್ವಿನ್ ನಿರ್ದೇಶನದ ‘ಹ್ಯಾಂಗಾನ್’ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. 3 ಗಂಟೆಗೆ ಬಂಟ್ವಾಳದ ಶಾರದಾ ಜಿ. ಬಂಗೇರ ಅವರು ಪಾಡ್ದನ ಹಾಡಲಿದ್ದು, ಐರಿನ್ ರೆಬಲ್ಲೋ ಮತ್ತು ತಂಡದಿಂದ ವೊವಿಯೊ ಕೊಂಕಣಿ ಹಾಡು ಹಾಗೂ ಪೂಜ್ಯ ಸೇಸು ಗೌಡ ಕಲಾ ಟ್ರಸ್ಟ್ನಿಂದ ಕುಡುಬಿ ಹಾಡುಗಳು ಪ್ರಸ್ತುತಗೊಳ್ಳಲಿವೆ.
ಸಂಜೆ 4 ಗಂಟೆಗೆ ವೆಂಕಟರಮಣ ಐತಾಳ್ರವರು ‘ಸ್ಥಳೀಯ ಚರಿತ್ರೆಗಳು ಮತ್ತು ಕುಸಿಯುತ್ತಿರುವ ಬಹುತ್ವದ ನೆಲೆ’ ವಿಷಯದಲ್ಲಿ ಮಾತನಾಡುವರು.
ಸಂಜೆ 5.30ಕ್ಕೆ ನಿರ್ದಿಗಂತ ತಂಡದಿಂದ ಸಮತೆಯ ಹಾಡುಗಳು ಪ್ರಸ್ತುತಗೊಳ್ಳಲಿದ್ದು, 7ಕ್ಕೆ ಕೇರಳದ ಲಿಟಲ್ ಅರ್ತ್ ಸ್ಕೂಲ್ ಆಫ್ ಥಿಯೇಟರ್ ತಂಡದಿಂ ಅರುಣ್ ಲಾಲ್ ನಿರ್ದೇಶನದ ‘ಕುಹೂ : ಆಂತಾಲಜಿ ಆನ್ ದ ರೈಲ್ಸ್’ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ. 2ರಂದು 10.30ಕ್ಕೆ ನರೇಂದ್ರ ರೈ ದೇರ್ಲರಿಂದ ‘ಜೀವ ಸಂರಕ್ಷಣೆ ಮತ್ತು ಆಚರಣಾ ಲೋಕ’ ವಿಷಯ ಪ್ರಸ್ತುತಿ, 12ಕ್ಕೆ ನಿರ್ದಿಗಂತ ತಂಡದಿಂದ ಸವಿತಾ ರಾಣಿ ನಿರ್ದೇಶನದ ‘ರಸೀದಿ ಟಿಕೇಟ್’ ಪ್ರದರ್ಶನಗೊಳ್ಳಲಿದೆ. ಸಂಜೆ 3ಕ್ಕೆ ಸಚಿನ್ ಅಂಕೋಲ, ಫಾತಿಮಾ ರಲಿಯ, ವಿಲ್ಸನ್ ಕಚೀಲ್ರಿಂದ ಕಥಾ ಕಾವ್ಯ ಕಾರಣ ಕವನ ವಾಚನ, 4ಕ್ಕೆ ಶ್ರೀನಿವಾಸ ಗಿಳಿಯಾರು ಅವರಿಂದ ‘ಕರಾವಳಿಯ ಸೃಜನಶೀಲತೆಯ ಸ್ವರೂಪ’ ವಿಷಯ ಪ್ರಸ್ತುತಿ, 5.30ಕ್ಕೆ ಉಡುಪಿಯ ಸಾವಿತ್ರಿ ಬಾಯಿ ಫುಲೆ ಸಾಂಸ್ಕೃತಿಕ ಕಲಾತಂಡದಿಂದ ಕೊರಗರ ಡೋಲು ಹಾಗೂ 7ಕ್ಕೆ ನಿರ್ದಿಗಂತ ತಂಡದಿಂದ ಶಕೀಲ್ ಅಹ್ಮದ್ ನಿರ್ದೇಶನದ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶಿಸಲ್ಪಡಲಿದೆ.
ಮಾ.3ರಂದು ಬೆಳಗ್ಗೆ 10.30ಕ್ಕೆ ಡಾ. ಇಂದಿರಾ ಹೆಗ್ಡೆಯವರಿಂದ ‘ಕರಾವಳಿ ಸಂಸ್ಕೃತಿಯಲ್ಲಿ ಸ್ತ್ರೀ ಲೋಕದೃಷ್ಟಿ’ ವಿಷಯ ಪ್ರಸ್ತುತಿ, 12ಕ್ಕೆ ಸುಮನಸ ಕೊಡವೂರು ತಂಡದಿಂದ ವಿದ್ದು ಉಚ್ಚಿಲ ನಿರ್ದೇಶನದ ಈದಿ ತುಳು ನಾಟಕ, 3ರಿಂದ ಪುತ್ತೂರು ಸಂಸಾರ ತಂಜದಿಂದ ‘ನಾವು ಯಾವಾಗ ಬದಲಾಗುತ್ತೇವೆ’ ಹಾಗೂ ಜೋಡುಮಾರ್ಗ ಸಂಸಾರ ತಂಡದಿಂದ ‘ಈಗ ಹೇಳಿ.. ನಾವೇನ್ಮಾಡೋಣ..? ’ ಬೀದಿ ನಾಟಕಗಳ ಪ್ರದರ್ಶನ, 4ಕ್ಕೆ ವಿದ್ದು ಉಚ್ಚಿಲರಿಂದ ‘ವರ್ತಮಾನದ ಕರಾವಳಿ ರಂಗಭೂಮಿ’ ವಿಷಯ ಪ್ರಸ್ತುತಿ ನಡೆಯಲಿದೆ. ಫೆ.1ರಿಂದ 3ರವರೆಗೆ ಪ್ರತಿದಿನ ಬೆಳಗ್ಗೆ 9.30ಕ್ಕೆ ಹಿಂದಿನ ದಿನದ ನಾಟಕಗಳ ಬಗ್ಗೆ ಚರ್ಚೆ ಆಯೋಜಿಸಲಾಗಿದೆ ಎಂದರು.
ಮಾ. 3ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಲಯಾಳಂ ನಟಿ ಪಾರ್ವತಿ ತಿರುವೊತ್ತು ಪ್ರಮುಖ ಆಕರ್ಷಣೆಯಾಗಿ ಭಾಗವಹಿಸಲಿದ್ದಾರೆ. ಇದಲ್ಲದೆ, ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ನಾರ್ತ್ ಈಸ್ಟ್ ಬ್ರಾಸ್ ಬ್ಯಾಂಡ್ ವೇಷ ಕುಣಿತವನ್ನು ಆಯೋಜಿಸಲಾಗಿದೆ. ರಾತ್ರಿ 7 ಗಂಟೆಗೆ ನಿರ್ದಿಗಂತ ತಂಡದಿಂದ ಅಮಿತ್ ರೆಡ್ಡಿ ನಿರ್ದೇಶನದ ‘ಮೈ ಮನಗಳ ಸುಳಿಯಲ್ಲಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ರಂಗ ನಿರ್ದೇಶಕ ವಿದು ಉಚ್ಚಿಲ್, ಸಂತ ಅಲೋಶಿಯಸ್ ಪರಿಗಣಿತಿ ವಿವಿಯ ರಂಗ ಅಧ್ಯಯನ ಕೇಂದ್ರದ ಕ್ರಿಸ್ಟೋಫರ್, ರಂಗ ನಿರ್ದೇಶಕ ಅನುಷ್ ಶೆಟ್ಟಿ ಉಪಸ್ಥಿತರಿದ್ದರು.