
ಧಾರ್ಮಿಕ ವಿಚಾರದಲ್ಲೂ ರಾಜಕೀಯ ಮಾಡುವವರು ನಿಜವಾದ ಹಿಂದೂಗಳಲ್ಲ: ನಟ ಪ್ರಕಾಶ್ ರಾಜ್
ಮಂಗಳೂರು: ಕುಂಭ ಮೇಳದಂತಹ ಧಾರ್ಮಿಕ ವಿಚಾರದಲ್ಲೂ ರಾಜಕೀಯ ಮಾಡುವವರು ನಿಜವಾದ ಹಿಂದೂಗಳು ಅಲ್ಲ. ಪೂಜೆ, ಪವಿತ್ರ ಸ್ನಾನದಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ ಕುಂಭಮೇಳದಲ್ಲಿ ಭಾಗಿಯಾದಂತೆ ನಟ ಪ್ರಕಾಶ್ ರಾಜ್ ಫೋಟೋ ಎಡಿಟ್ ಮಾಡಿ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಧರ್ಮ ವಿರೋಧಿ ಅಲ್ಲ. ಅದು ಅವರವರ ನಂಬಿಕೆಗಳು. ನನಗೆ ನಂಬಿಕೆಯಿಲ್ಲ, ಎಲ್ಲರಿಗೂ ಅವರವರ ಅನಿಸಿಕೆಗಳು ಇರುತ್ತದೆ ಅಲ್ಲವೇ ಎಂದು ಪ್ರಶ್ನಿಸಿದರು.
ಒಂದು ಸರ್ಕಾರ, ಧರ್ಮವನ್ನು ಪ್ರಶ್ನಿಸಿದ್ದಾನೆಂದು ವಾಟ್ಸಪ್ ಯೂನಿವರ್ಸಿಟಿಯಲ್ಲಿ ತಪ್ಪು ಕಲ್ಪನೆ ಹರಡುತ್ತಿದ್ದಾರೆ. ಈ ಪ್ರಶಾಂತ್ ಸಂಬರಗಿಯಂತವರು ಈ ಕೆಲಸ ಮಾಡುತ್ತಿದ್ದಾರೆ. ಅವರು ಪ್ರಖ್ಯಾತರೋ ಕುಖ್ಯಾತರೋ ಗೊತ್ತಿಲ್ಲ. ಈ ಬಗ್ಗೆ ದೂರು ನೀಡಿದ್ದೇನೆ. ವ್ಯಕ್ತಿಯ ಇಚ್ಛೆಯಿಲ್ಲದೆ ಫೋಟೋ ತಿರುಚುವುದು ಸರಿಯಲ್ಲ. ಇದು ಅಕ್ಷಮ್ಯ ಅಪರಾಧ ಅಲ್ಲವೇ? ಯಾವುದನ್ನು ಯಾವುದಕ್ಕೆ ಉಪಯೋಗಿಸುತ್ತೇವೆಂದು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಗ್ಯಾರಂಟಿ ಯೋಜನೆಯಿಂದ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣಾ ಪ್ರಕ್ರಿಯೆಯಲ್ಲಿ ವಿರೋಧ ಪಕ್ಷಗಳು ಗೆಲ್ಲಲ್ಲ, ಆಳುವ ಪಕ್ಷ ಸೋಲುತ್ತದೆ. ಈಗ ಕಾಂಗ್ರೆಸ್ ಬಂದಿದೆ ಅಂದರೆ ಮುಂದೆ ಸೋಲುವ ಸರದಿ ಅವರದ್ದು. ನಷ್ಟವಾಗಿದೆ ಅಂದರೆ ನೀವು ಬ್ಯುಸಿನೆಸ್ ಮಾಡ್ತಿದ್ದೀರಾ? ನೀವು ಎಲ್ಲಿ ತಪ್ಪುತ್ತಿದ್ದೀರಾ? ಸರ್ಕಾರ, ದೇಶ ನಡೆಯುವುದು ಪ್ರಜೆಗಳ ದುಡ್ಡಿಂದ. ದೇವಸ್ಥಾನ ನಡೆಯುವುದು ಪ್ರಜೆಗಳ ಹುಂಡಿಯಿಂದ. ಸರ್ಕಾರ ಎಲ್ಲಿ ಸೋತಿದೆ ಅದನ್ನು ನಾವು ಪ್ರಶ್ನೆ ಮಾಡಬೇಕು. ಯಾಕೆ ಸಾಲವಾಗುತ್ತಿದೆ. ನಾವು ಪ್ರಜೆಗಳು ಆ ಪಕ್ಷ ಈ ಪಕ್ಷ ಎಂದು ನೋಡಬಾರದು. ನಮ್ಮ ದುಡ್ಡನ್ನು ಸರ್ಕಾರಗಳು ಹೇಗೆ ನಡೆಸಿಕೊಳ್ಳುತ್ತಿದೆ. ನಮ್ಮ ತೆರಿಗೆಯ ದುಡ್ಡಿನಿಂದ ಅವರ ಬಟ್ಟೆ, ಸೆಕ್ಯುರಿಟಿ, ಊಟ, ಸಂಬಳ ಕೊಡುತ್ತಿದ್ದೇವೆ. ಇದು ನಮ್ಮ ದುಡ್ಡಿನಿಂದ ಕೊಡುತ್ತಿರುವುದು. ಅದನ್ನು ಏನು ಮಾಡುತ್ತಿದ್ದಾರೆಂಬ ಕುರಿತು ನಾವು ಎಚ್ಚೆತ್ತುಕೊಳ್ಳುಬೇಕಾಗಿದೆ. ಆ ರೀತಿಯ ಪ್ರಶ್ನೆಗಳನ್ನು ನಾವು ಕೇಳಬೇಕಾಗಿದೆ ಎಂದು ಹೇಳಿದರು.
ಧರ್ಮ, ಬಣ್ಣದ ಹಿಂದೆ ಹೋಗದೆ ಇವರನ್ನು ಪ್ರಶ್ನೆ ಮಾಡಬೇಕು. ನಾವು ಸರಿಯಾಗಿ ಆಡಳಿತ ಮಾಡುತ್ತೇವೆ ಎಂದು ಹೇಳಿಕೊಂಡಿದ್ದೀರಿ. ನೀವು ಗೆದ್ದ ತಕ್ಷಣ ರಾಜರಲ್ಲ. ಪ್ರಜಾ ಸೇವಕರು ಎಂದು ನಿಮ್ಮನ್ನು ನೀವು ಕರೆದುಕೊಳ್ಳುತ್ತೀರಿ. ಇನ್ನು ಮೇಲೆ ಪ್ರಜೆಗಳು ಯೋಚನೆ ಮಾಡಬೇಕಿದೆ ಎಂದರು.
ರಾಜ್ಯದಲ್ಲಿ ದಲಿತ ಸಿ.ಎಂ ಚರ್ಚೆ ವಿಚಾರಕ್ಕೆ ಮಾತನಾಡಿದ ಪ್ರಕಾಶ್ ರಾಜ್, ಅಂಬೇಡ್ಕರ್ ಅವರನ್ನು ಕೊಲ್ಲಬೇಕೆಂದು ಬಿಜೆಪಿ ಯೋಚನೆ ಮಾಡುತ್ತದೆ. ಅಂಬೇಡ್ಕರ್ ಅವರನ್ನು ಉಪಯೋಗಿಸಿಕೊಳ್ಳಬೇಕೆಂದು ಕಾಂಗ್ರೆಸ್ ಯೋಚನೆ ಮಾಡುತ್ತದೆ. ಇವರಿಬ್ಬರ ಮಾತಿನ ನಡುವಿನ ಮೌನವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲರೂ ದಲಿತ ಸಿ.ಎಂ ಆಗಬೇಕೆಂದಷ್ಟೆ ಹೇಳುತ್ತಿದ್ದಾರೆ. ಯಾಕೆ ಆಗಬೇಕು, ಅದರ ಹಿಂದಿನ ಹುನ್ನಾರ ಏನೆಂದು ಹೇಳುತ್ತಿಲ್ಲ. ರೈತರು, ದಲಿತರು, ಬಡವರು ಇವರುಗಳಿಗೆ ವೋಟ್ ಹಾಕುವ ಮೆಷಿನ್ ಅಲ್ಲದೆ ಬೇರೆನೂ ಆಗಿಲ್ಲ. ಇದನ್ನು ನಾವು ಪ್ರಶ್ನೆ ಮಾಡಬೇಕು, ಯೋಚನೆ ಮಾಡಬೇಕು. ನಿಮ್ಮ ನಿಮ್ಮ ಪ್ರತಿನಿದಿಗಳು ನಿಮ್ಮನ್ನು ಸರಿಯಾಗಿ ಪ್ರತಿನಿಧಿಸಬೇಕು. ನೀವು ಪಕ್ಷ ನೋಡಬಾರದು, ಪ್ರತಿನಿಧಿಗಳನ್ನು ನೋಡಬೇಕು. ನಿಮ್ಮ ಸಮಸ್ಯೆ, ಕಷ್ಟವನ್ನು ಅರ್ಥ ಮಾಡಿಕೊಳ್ಳುವವರನ್ನು ಆರಿಸಬೇಕು. ಹಾಗಾದಾಗ ಈ ಪ್ರಶ್ನೆಗಳು ಬರುವುದಿಲ್ಲ ಎಂದರು.
ಭಾರತ ದೇಶದಲ್ಲಿ ಒಂದು ದೊಡ್ಡ ಭ್ರಷ್ಟಾಚಾರ ಅಂದರೆ ಚುನಾವಣೆ. ಜಾತಿ, ಹಣ, ನನಗೆ ಎಲ್ಲಾ ಗೊತ್ತು ಎಂಬ ಆಧಾರದಲ್ಲೇ ಚುನಾಯಿತರಾಗುತ್ತಾರೆ. ಸಮನ್ವಯತೆ, ಸೌಹಾರ್ದತೆ, ದೇಶವನ್ನು ನಡೆಸುವ ಕಡೆ ಆಗುತ್ತಿಲ್ಲ. ಅವರುಗಳು ಬಂದು ಹೋಗುತ್ತಾರೆ. ನಾವು ಪರ್ಮನೆಂಟ್, ಕಷ್ಟ ಅನುಭವಿಸುತ್ತಿದ್ದೇವೆ. ಎಲ್ಲಾ ನಿಟ್ಟಿನಿಂದಲೂ ಯೋಚನೆ ಮಾಡಬೇಕು ಎಂದು ಹೇಳಿದರು.