
ಮೆಸ್ಕಾ: ಯೂನಿಟ್‌ಗೆ 37 ಪೈಸೆಯಿಂದ 70 ಪೈಸೆ ಏರಿಕೆ ಪ್ರಸ್ತಾವನೆ
ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ(ಮೆಸ್ಕಾಂ) ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಯೂನಿಟ್‌ಗೆ 37 ಪೈಸೆಯಿಂದ 70 ಪೈಸೆ ವರೆಗೆ ವಿದ್ಯುತ್ ದರ ಏರಿಕೆ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‌ಸಿ) ಎದುರು ಪ್ರಸ್ತಾವನೆ ಮಂಡಿಸಿದೆ.
ಮಂಗಳೂರಿನ ಮೆಸ್ಕಾಂ ಪ್ರಧಾನ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೆಇಆರ್‌ಸಿ ಅಧ್ಯಕ್ಷ ಪಿ. ರವಿ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಿದ್ಯುತ್ ದರ ಪರಿಷ್ಕರಣೆ ಕುರಿತ ಸಾರ್ವಜನಿಕ ವಿಚಾರಣೆ ವೇಳೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜಿ ಜಯ ಕುಮಾರ್ ಈ ಪ್ರಸ್ತಾಪ ಮಂಡಿಸಿದರು. ದರ ಏರಿಕೆ ಪ್ರಸ್ತಾವನೆಗೆ ಗ್ರಾಹಕರು ಅದಾಲತ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಐದು ವರ್ಷಕ್ಕೊಮ್ಮೆ ದರ ಏರಿಕೆ ಪ್ರಸ್ತಾವನೆ ಸಲ್ಲಿಸಬಹುದಾಗಿದೆ. ಹೀಗಾಗಿ ಮೆಸ್ಕಾಂ ಐದರ ಬದಲು ಮೂರು ವರ್ಷಗಳಿಗೆ ಅಂದಾಜು ಆದಾಯ ಹಾಗೂ ವೆಚ್ಚವನ್ನು ಉಲ್ಲೇಖಿಸಿ ಶೇಕಡಾವಾರು ದರ ಏರಿಕೆಯ ಪ್ರಸ್ತಾವನೆ ಸಲ್ಲಿಸಿದೆ.
2025-26ನೇ ಸಾಲಿಗೆ ಸರಾಸರಿ 70 ಪೈಸೆ, 2026-27ನೇ ಸಾಲಿಗೆ 37 ಪೈಸೆ ಹಾಗೂ 2027-28ನೇ ಸಾಲಿಗೆ 54 ಪೈಸೆ ದರ ಏರಿಕೆಯ ಪ್ರಸ್ತಾಪ ಮಾಡಲಾಗಿದೆ. 2025-26ನೇ ಸಾಲಿನಲ್ಲಿ ನಿರೀಕ್ಷಿತ ಒಟ್ಟು ವೆಚ್ಚ 5,997 ಕೋಟಿ ರು. ಅಂದಾಜಿಸಲಾಗಿದ್ದು, 6,329.29 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಇದರ ಹೊರತೂ 478.48 ಕೋಟಿ ರು. ಕೊರತೆ ಕಾಣಿಸಲಾಗಿದೆ. ನಿರೀಕ್ಷಿತ ವಿದ್ಯುತ್ ಮಾರಾಟ 6,859.29 ಮೆಗಾ ಯೂನಿಟ್ ಆಗಿದ್ದು, ವಿದ್ಯುತ್ ಪೂರೈಕೆ ವೆಚ್ಚ 9.23 ರು. ಆಗಿರಲಿದೆ. ಹಾಲಿ ದರಗಳಲ್ಲಿ 8.53 ರು. ಆದಾಯ ನಿರೀಕ್ಷಿಸಲಾಗಿದ್ದು, 0.70 ಪೈಸೆ ದರ ಹೆಚ್ಚಳ ಅನಿವಾರ್ಯಮ ಎಂದು ಪ್ರಸ್ತಾಪಿಸಲಾಗಿದೆ.
2026-27ನೇ ಸಾಲಿನಲ್ಲಿ 6,446.20 ಕೋಟಿ ರು. ನಿರೀಕ್ಷಿತ ವೆಚ್ಚವಾಗಲಿದ್ದು, 6,430.89 ಕೋಟಿ ರು. ಆದಾಯದ ನಿರೀಕ್ಷೆ ಇದೆ. 270.17 ಕೋಟಿ ರು.ಗಳ ಕೊರತೆ ಕಾಣಿಸಲಾಗಿದೆ. 7,205.98 ಮೆಗಾವ್ಯಾಟ್ ವಿದ್ಯುತ್ ಮಾರಾಟದ ನಿರೀಕ್ಷೆ ಇದ್ದು, ಈಗಿನ ದರಗಳಲ್ಲಿ ಯೂನಿಟ್‌ಗೆ 8.92 ರು. ಸರಬರಾಜು ವೆಚ್ಚವಾಗಲಿದೆ. ಆದಾಯ 8.55 ರು. ಆಗಿದ್ದು, ಆದಾಯ ಸರಿದೂಗಿಸಲು 0.37 ಪೈಸೆ ದರ ಹೆಚ್ಚಳದ ಅಗತ್ಯತೆ ಇದೆ ಎಂದು ಪ್ರಸ್ತಾಪಿಸಲಾಗಿದೆ.
2027-28ನೇ ಸಾಲಿನಲ್ಲಿ 6,881.80 ಕೋಟಿ ರು. ನಿರೀಕ್ಷಿತ ವೆಚ್ಚ ಇರಲಿದ್ದು, 6,890.64 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಹಾಗಿದ್ದರೂ 405.94 ಕೋಟಿ ರು.ಗಳ ಕೊರತೆ ಕಾಣಿಸಲಾಗಿದೆ. 7,572.20 ಮೆಗಾವ್ಯಾಟ್ ಯುನಿಟ್ ವಿದ್ಯುತ್ ಮಾರಾಟದ ನಿರೀಕ್ಷೆ ಇದೆ. 9.10 ರು. ಯೂನಿಟ್ ಪೂರೈಕೆ ವೆಚ್ಚವಾಗಿದ್ದು, 8.56 ರು. ಹಾಲಿ ದರದಲ್ಲಿ ಆದಾಯ ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ 0.54 ಪೈಸೆ ದರ ಏರಿಕೆಯನ್ನು ಪ್ರಸ್ತಾಪಿಸಲಾಗಿದೆ. ಇದರ ಹೊರತು ಯಾವುದೇ ಹೊಸ ಯೋಜನೆ ಅಥವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿಲ್ಲ ಎಂದು ಮೆಸ್ಕಾಂ ಎಂಡಿ ಜಯ ಕುಮಾರ್ ಹೇಳಿದರು.
ಕೆಇಆರ್‌ಸಿ ಸದಸ್ಯರಾದ ಎಚ್.ಕೆ.ಜಗದೀಶ್, ಜಾವೇದ್ ಅಖ್ತರ್ ಇದ್ದರು.