
ಸೋಲಾರ್ ಸಂಪರ್ಕಕ್ಕೂ ಅಭಿವೃದ್ಧಿ ಶುಲ್ಕ ಬರೆ!
ಮಂಗಳೂರು: ಗೃಹ ಬಳಕೆಗೆ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಗ್ರಾಹಕರಿಂದ 770 ರು. ಠೇವಣಿ ಹಾಗೂ 5,750 ರು. ಅಭಿವೃದ್ಧಿ ಶುಲ್ಕವ ನ್ನು ಸಂಗ್ರಹಿಸುತ್ತದೆ. ಅಭಿವೃದ್ಧಿ ಶುಲ್ಕದ ಮೊತ್ತವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು ಎನ್ನುವುದು ಇದರ ಮಾನದಂಡ. ಆದರೆ ಕೇಂದ್ರ ಸರ್ಕಾರದ ಬೆಳಕು ಯೋಜನೆಯ ಅನುದಾನದಲ್ಲೇ ಮೆಸ್ಕಾಂಗೆ ಹೊಸ ವಿದ್ಯುತ್ ಸಂಪರ್ಕ ನೀಡುತ್ತದೆ. ಆಗ ಮೆಸ್ಕಾಂಗೆ ಹೆಚ್ಚುವರಿ ಹೊರೆ ಯಾವುದೂ ಇರುವುದಿಲ್ಲ. ವಿಚಿತ್ರ ಎಂದರೆ, ಕೇಂದ್ರ ಸರ್ಕಾರದ ಸೂರ್ಯ ಘರ್ ಯೋಜನೆಯಡಿ ಮನೆಗೆ ಸೋಲಾರ್ ವಿದ್ಯುತ್ ಸಂಪರ್ಕ ಪಡೆದವರಿಂದಲೂ ಅಭಿವೃದ್ಧಿ ಶುಲ್ಕ ವಸೂಲಿ ಮಾಡುತ್ತಿದೆ. ಸೋಲಾರ್ ವಿದ್ಯುತ್ ಬಳಕೆಗೆ ಪ್ರೋತ್ಸಾಹಿಸಬೇಕೇ ವಿನಃ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಗ್ರಾಹಕರಿಗೆ ತೊಂದರೆ ನೀಡಬಾರದು ಎಂದು ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಮನವಿ ಮಾಡಿದರು.
ಮಂಗಳೂರಿನ ಮೆಸ್ಕಾಂ ಪ್ರಧಾನ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೆಇಆರ್‌ಸಿ ಅಧ್ಯಕ್ಷ ಪಿ. ರವಿ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಿದ್ಯುತ್ ದರ ಪರಿಷ್ಕರಣೆ ಕುರಿತ ಸಾರ್ವಜನಿಕ ವಿಚಾರಣೆ ವೇಳೆ ಅವರು ಮನವಿ ಮಾಡಿದರು.
ಕಂಬದಲ್ಲೂ ಮೋಸ!:
ಮೆಸ್ಕಾಂ ಹೊರಗುತ್ತಿಗೆ ಕಾಮಗಾರಿಗಳಲ್ಲಿ ಮೋಸ ನಡೆಯುತ್ತಿದೆ. 1 ಕಿ.ಮೀ. ವಿದ್ಯುತ್ ಲೈನ್ ಎಳೆಯಲು ಮೆಸ್ಕಾಂ ತನ್ನದೇ ಎಸ್‌ಆರ್ ದರಕ್ಕಿಂತ ಹೆಚ್ಚಿನ ದರದಲ್ಲಿ ಟೆಂಡರ್ ಕರೆದು ಕಾಮಗಾರಿ ನಡೆಸುತ್ತಿದೆ. ಇದರ ಬದಲು ಸ್ಥಳೀಯ ನೋಂದಾಯಿತ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿದರೂ ಮೆಸ್ಕಾಂಗೆ ಉಳಿತಾಯವಾಗುತ್ತದೆ. ಕಂಬ-ವಯರ್‌ಗಳ ಅಂತರ ಕಡಿಮೆ ಮಾಡಿ ಹೆಚ್ಚಿನ ಕಂಬ ಹಾಕುವ ಮೂಲಕ ಅದರಲ್ಲೂ ಮೆಸ್ಕಾಂ ಲಾಭ ಪಡೆಯುವ ಹುನ್ನಾರ ಹೊಂದಿದೆ. ಈ ಬಗ್ಗೆ ಮೆಸ್ಕಾಂಗೆ ಸೂಕ್ತ ನಿರ್ದೇಶ ನೀಡಬೇಕು. ಇಂತಹ ಸೋರಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ದರ ಏರಿಕೆ ಮಾಡಲೇ ಬಾರದು ಎಂದು ಶಾಸಕ ಅರಗ ಜ್ಞಾನೇಂದ್ರ ಆಗ್ರಹಿಸಿದರು.
ಗ್ರಾಹಕರಿಗೆ ತರಬೇತಿ ನೀಡಿ:
ಮೆಸ್ಕಾಂನಲ್ಲಿ 27 ಲಕ್ಷ ಗ್ರಾಹಕರಿದ್ದು, 6,100 ಕೋಟಿ ರು. ವಹಿವಾಟು ನಡೆಸುತ್ತಿದೆ. ಇದರಲ್ಲಿ ಶೇ.65 ಮಂದಿ ಸಬ್ಸಿಡಿ ಹಾಗೂ ಶೇ.35 ಮಂದಿ ನೇರ ಶುಲ್ಕ ಪಾವತಿಸುವವರು ಇದ್ದಾರೆ. ದರ ಪರಿಷ್ಕರಣೆ ಕುರಿತಂತೆ ಗ್ರಾಹಕರಿಗೆ ಜ್ಞಾನದ ಕೊರತೆ ಇದ್ದು, ಇದಕ್ಕಾಗಿ ಗ್ರಾಹಕರಿಗೆ ತರಬೇತಿ ನೀಡುವ ಅವಸ್ಯಕತೆ ಇದೆ ಎಂದು ಕ ನ್ಸೂಮರ್ ಫಾರಂನ ವೆಂಕಟಗಿರಿ ರಾವ್ ಅಭಿಪ್ರಾಯಪಟ್ಟರು.
ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಮುಖಂಡ ರಾಮಕೃಷ್ಣ ಭಟ್ ಮಾತನಾಡಿ, ಮೆಸ್ಕಾಂನ ವಿತರಣಾ ನಷ್ಟವನ್ನು ಕಡಿಮೆಗೊಳಿಸಬೇಕು. ಸಿಬ್ಬಂದಿಯ ಕಾರ್ಯದಕ್ಷತೆ ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ದರ ಏರಿಕೆ ಮಾಡಬಾರದು ಎಂದರು. ಹಗಲು ಹೊತ್ತು ವಿನಾ ಕಾರಣ ಕಚೇರಿಗಳಲ್ಲಿ, ಬೀದಿಗಳಲ್ಲಿ ವಿನಾ ಕಾರಣ ದೀಪ ಉರಿಯುವುದನ್ನು ತಡೆಗಟ್ಟಬೇಕು. ಇದಕ್ಕೆ ಆಯಾ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ರವೀಂದ್ರ ಗುಜ್ಜರಬೆಟ್ಟು ಸಲಹೆ ನೀಡಿದರು.