
ನಿವೃತ್ತ ಸಿಬ್ಬಂದಿ ಪಿಂಚಣಿ ಮೊತ್ತ ಗ್ರಾಹಕರಿಂದ ವಸೂಲಿ!
ಮಂಗಳೂರು: ತನ್ನ ನಿವೃತ್ತ ಸಿಬ್ಬಂದಿಗೆ ನೀಡಬೇಕಾದ ಪಿಂಚಣಿ ಮೊತ್ತವನ್ನು ಮೆಸ್ಕಾಂ ಗ್ರಾಹಕರಿಂದಲೇ ವಸೂಲಿ ಮಾಡುತ್ತಿರುವ ಅಘಾತಕಾರಿ ಸಂಗತಿಯನ್ನು ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಸಾರ್ವಜನಿಕ ವಿಚಾರಣೆ ವೇಳೆ ಬಹಿರಂಗಪಡಿಸಿದರು.
ಮಂಗಳೂರಿನ ಮೆಸ್ಕಾಂ ಪ್ರಧಾನ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೆಇಆರ್‌ಸಿ ಅಧ್ಯಕ್ಷ ಪಿ. ರವಿ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಿದ್ಯುತ್ ದರ ಪರಿಷ್ಕರಣೆ ಕುರಿತ ಸಾರ್ವಜನಿಕ ವಿಚಾರಣೆ ವೇಳೆ ಅವರು ಮನವಿ ಮಾಡಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಕೆಇಆರ್‌ಸಿ ಅಧ್ಯಕ್ಷ ರವಿ ಕುಮಾರ್, 2001ರಲ್ಲಿ ಪಿಂಚಣಿ ಮೊತ್ತವನ್ನು ಗ್ರಾಹಕರಿಂದ ವಸೂಲಿಗೆ ಅನುಮತಿ ನೀಡುವಂತೆ ಮೆಸ್ಕಾಂ ಪ್ರಸ್ತಾವನೆ ಸಲ್ಲಿಸಿತ್ತು. ಇದು ಸರಿಯಾದ ಕ್ರಮವಲ್ಲ ಎಂದು ಕೆಇಆರ್‌ಸಿಯೇ ತಡೆದಿತ್ತು. ಆದರೆ ಗ್ರಾಹಕರ ಪರವಾಗಿ ವ್ಯಕ್ತಿಯೊಬ್ಬರು ಕೋರ್ಟ್ ಮೊರೆ ಹೋಗಿ, ಮೆಸ್ಕಾಂ ನಿವೃತ್ತ ಸಿಬ್ಬಂದಿಯ ಪಿಂಚಣಿ ಮೊತ್ತವನ್ನು ಗ್ರಾಹಕರಿಂದಲೇ ಭರಿಸುವಂತೆ ಅರ್ಜಿ ಸಲ್ಲಿಸಿದ್ದರು.
2023ರಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸಿದ ಕೋರ್ಟ್, ಪಿಂಚಣಿ ಮೊತ್ತವನ್ನು ಗ್ರಾಹಕರಿಂದಲೇ ಭರಿಸುವಂತೆ ನಿರ್ದೇಶನ ನೀಡಿತ್ತು. ಅಲ್ಲಿಂದ ಪಿಂಚಣಿ ಮೊತ್ತ ಗ್ರಾಹಕರಿಂದಲೇ ವಸೂಲಿಯಾಗುತ್ತಿದೆ. ಮೆಸ್ಕಾಂ ವಿದ್ಯುತ್ ದರ ಏರಿಕೆ ಮಾಡಿದರೂ, ಮಾಡದಿದ್ದರೂ ಪಿಂಚಣಿ ಮೊತ್ತ ಮಾತ್ರ ಪ್ರತಿ ಬಾರಿಯೂ ಗ್ರಾಹಕರ ಬಿಲ್‌ನಿಂದಲೇ ಕಡಿತಗೊಳ್ಳುತ್ತಿದೆ. ಈ ವಿಚಾರ ಎಲ್ಲ ಗ್ರಾಹಕರಿಗೆ ಗೊತ್ತೇ ಇಲ್ಲ. ಕೋರ್ಟ್ ಹೇಳಿದ್ದರಿಂದ ನಾವೂ ಏನೂ ಮಾಡುವಂತಿಲ್ಲ ಎಂದರು.