
ದೇಶದ ಯಾವ ಮನಪಾ ನೀಡದ ಕಾರ್ಯಕ್ರಮವನ್ನು ನಾವು ನೀಡಿದ್ದೇವೆ: ಮನೋಹರ ಶೆಟ್ಟಿ ಕದ್ರಿ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ವಿಶೇಷ ಕಾರ್ಯಕ್ರಮಗಳನ್ನು ಪಾಲಿಕೆಯ ಇತಿಹಾಸದಲ್ಲಿ ಈವರೆಗೆ ಜಾರಿ ಮಾಡಿಲ್ಲ. ಮಾತ್ರವಲ್ಲದೆ, ರಾಜ್ಯದ ಯಾವ ಮಹಾನಗರ ಪಾಲಿಕೆಯೂ ನೀಡದೆ ಇರುವಂಥ ಕಾರ್ಯಕ್ರಮಗಳನ್ನು ಇದೇ ಮೊದಲ ಬಾರಿಗೆ ಘೋಷಿಸಲಾಗಿದೆ ಎಂದು ಮಹಾನಗರ ಪಾಲಿಕೆ ತೆರಿಗೆ ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಮನೋಹರ ಶೆಟ್ಟಿ ಕದ್ರಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಘೋಷಿಸಿದ ಕೆಲವು ಕಾರ್ಯಕ್ರಮಗಳ ಕುರಿತು ನಾಗರಿಕರಿಗೆ ಮಾಹಿತಿ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಪೂರಕ ಮಾಹಿತಿಯನ್ನು ನೀಡಿದರು.
ವಿಶೇಷ ಯೋಜನೆಗಳು:
ಸಶಕ್ತ ಮಹಿಳೆ-ಆರೋಗ್ಯ ಸಂರಕ್ಷಣೆ ಕಾರ್ಯಕ್ರಮದಲ್ಲಿ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 11ರಿಂದ 14 ವರ್ಷದ ಬಾಲಕಿಯರಿಗೆ ಉಚಿತವಾಗಿ ಲಸಿಕೆ (ಹ್ಯೂಮನ್ ಪ್ಯಾಪಿಲೋಮಾ ವೈರಸ್) ನೀಡಲಾಗುವುದು. 2 ಲಸಿಕೆಗೆ 6 ಸಾವಿರ ರು. ವೆಚ್ಚ ತಗಲುತ್ತಿದ್ದು, ವಾರ್ಷಿಕ ಆದಾಯ 3 ಲಕ್ಷ ರು.ಗಿಂತ ಕಡಿಮೆ ಇರುವ ಕುಟುಂಬದ ಮಕ್ಕಳಿಗೆ ನೀಡಲಾಗುವುದು. ಇದಕ್ಕಾಗಿ 25 ಲಕ್ಷ ರು. ಕಾಯ್ದಿರಿಸಲಾಗಿದೆ ಎಂದರು.
ಅಟಲ್ ವಿದ್ಯಾನಿಧಿ ಯೋಜನೆಯಡಿ ಮಕ್ಕಳ ಫೀಸ್ ಕಟ್ಟಲು ಅಸಾಧ್ಯವಾದ ಪೋಷಕರು ಪಾಲಿಕೆಗೆ ಅರ್ಜಿ ಸಲ್ಲಿಸಿದರೆ ಆ ಫೀಸ್‌ನ್ನು ಪಾಲಿಕೆ ಭರಿಸುತ್ತದೆ. ಆದರೆ ಪಡೆದ ಮೊತ್ತವನ್ನು 2 ವರ್ಷದೊಳಗೆ ಮರುಪಾವತಿ ಮಾಡಲೇಬೇಕು. ಅತೀ ಸಂಕಷ್ಟದಲ್ಲಿರುವ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಯೋಜನೆಗಾಗಿ 5 ಕೋಟಿ ರು. ಕಾಯ್ದಿರಿಸಲಾಗಿದೆ ಎಂದು ಮನೋಹರ ಶೆಟ್ಟಿ ತಿಳಿಸಿದರು.
ಸ್ಟೀಲ್ ಬ್ಯಾಂಕ್:
ಮಂಗಳೂರನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಸಮಾರಂಭಗಳಿಗೆ ಪೂರಕವಾಗಿ ಪಾಲಿಕೆಯೇ ಸ್ಟೀಲ್ ಪಾತ್ರೆಗಳನ್ನು ಖರೀದಿಸಿ ಇಡುತ್ತದೆ. ಸಾರ್ವಜನಿಕರು ಕನಿಷ್ಠ ಮೊತ್ತ ಪಾವತಿಸಿ ಈ ಪಾತ್ರೆಗಳನ್ನು ತಮ್ಮ ಸಮಾರಂಭಗಳಿಗೆ ಕೊಂಡೊಯ್ದು, ಬಳಿಕ ತೊಳೆದು ವಾಪಸ್ ತಂದುಕೊಡಬೇಕು. ಇದು ಜನರಿಗೆ ಅತ್ಯಂತ ಉಪಯೋಗವಾಗಲಿದೆ ಎಂದರು.
ಎಸ್ಸಿ ಎಸ್ಟಿ ಪಂಗಡಕ್ಕೆ ಅಪಘಾತ ವಿಮೆಯನ್ನು ಅಂಚೆ ಇಲಾಖೆಯಲ್ಲಿ ಮಾಡಲಾಗುತ್ತದೆ. ಇದಕ್ಕಾಗಿ 1 ಕೋಟಿ ರು. ಮೀಸಲಿಡಲಾಗಿದೆ. ಅದೇ ರೀತಿ ಡೆಂಘೀ, ಮಲೇರಿಯಾ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಪ್ರತಿ ವಾರ್ಡ್‌ನಲ್ಲಿ ನಿರಂತರವಾಗಿ ಕೀಟನಾಶಕ ಸಿಂಪಡಿಸಲು ಹೆಚ್ಚುವರಿ 18 ಮಂದಿ ಸ್ಪ್ರೇಯರ್‌ಗಳನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ತಪ್ಪಿಸಲು ಜನರು ತಮ್ಮ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ಪಾಲಿಕೆ ವತಿಯಿಂದ ಉಚಿತವಾಗಿ ಮಾಡಿಸಿಕೊಳ್ಳುವ ವಿನೂತನ ಯೋಜನೆಯನ್ನೂ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದರು.
ಮಾಜಿ ಕಾರ್ಪೊರೇಟರ್‌ಗಳಾದ ಸಂದೀಪ್ ಗರೋಡಿ, ಕಿಶೋರ್ ಕೊಟ್ಟಾರಿ, ವನಿತಾ ಪ್ರಸಾದ್ ಇದ್ದರು.