
'ಪದ್ಮಶ್ರೀ' ವಿಜೇತರ ಪತ್ನಿಗೆ ಚಿಕಿತ್ಸೆ ನೀಡಲು ಹಣವಿಲ್ಲ: ಸಹಾಯ ಹಸ್ತಕ್ಕೆ ಕೈ ಜೋಡಿಸಿದ ಪುರಸ್ಕೃತರು
ಮಂಗಳೂರು: ಹೇಳಿಕೇಳಿ ಇವರು 'ಪದ್ಮಶ್ರೀ' ವಿಜೇತರು. ದೇಶವೇ ಇವರನ್ನು ನೋಡಿ ಬೆರಗು ಪಟ್ಟಿತು. ಆದರೆ ಈಗಲೂ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಸದ್ಯ ದೈನೇಸಿ ಸ್ಥಿತಿಯಲ್ಲಿರುವ ಇವರು ಪತ್ನಿಯ ಆಸ್ಪತ್ರೆಯ ವೆಚ್ಚ ಭರಿಸಲಾಗದೆ ಪಾಡುಪಡುತ್ತಿದ್ದಾರೆ.
ಇದು ಪ್ರಗತಿಪರ ಕೃಷಿಕರಾಗಿ ದೇಶದ ಅತ್ಯುನ್ನತ ಪ್ರಶಸ್ತಿ 'ಪದ್ಮಶ್ರೀ'ಗೆ ಭಾಜನರಾದ ಅಮೈ ಮಹಾಲಿಂಗ ನಾಯ್ಕರ ಸದ್ಯದ ಪಾಡು. ಇಳಿವಯಸ್ಸು ದೇಹದ ಕಸುವು ಕುಂದಿದೆ. ಕೃಷಿಯ ಉತ್ಪತ್ತಿಯಲ್ಲಿಯೇ ದಿನ ದೂಡುತ್ತಿರುವ ಕಾಲ. ಈ ಸಮಯದಲ್ಲಿಯೇ ಅಮೈ ಅವರ ಪತ್ನಿ ಏಕಾಏಕಿ ತಲೆಯ ನರದ ಸಮಸ್ಯೆಗೆ ತುತ್ತಾಗಿದ್ದಾರೆ. ಮೊದಲಿಗೆ ವಾರಗಳ ಕಾಲ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಅಲ್ಲಿನ ಹೆಚ್ಚಿನ ವೈದ್ಯರು ಮಂಗಳೂರಿನ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ.
ಅದರಂತೆ ಕಣ್ಣೂರು ಕೊಡಕ್ಕಲ್‌ನಲ್ಲಿರುವ ಫಸ್ಟ್ ನ್ಯೂರೊ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಈಗಾಗಲೇ ಕೈಯಲ್ಲಿರುವ ದುಡ್ಡು, ಅವರಿವರಲ್ಲಿ ಕಾಡಿಬೇಡಿ 2.65ಲಕ್ಷ ರೂ. ಚಿಕಿತ್ಸೆಯ ವೆಚ್ಚ ಭರಿಸಿದ್ದಾರೆ. ಇದೀಗ ಮತ್ತೆ ಚಿಕಿತ್ಸೆಯ ವೆಚ್ಚ 2.50 ಲಕ್ಷ ರೂ. ಭರಿಸಬೇಕಿದೆ. ಕೈಯಲ್ಲಿ ಬಿಡಿಗಾಸು ಇಲ್ಲದ ಅಮೈ ಮಹಾಲಿಂಗ ನಾಯ್ಕರು ಇದರಿಂದ ಕಂಗಾಲಾಗಿದ್ದಾರೆ. ಗುಡ್ಡದಲ್ಲೇ ಸುರಂಗ ತೋಡಿ ನೀರಿನ ಕೋಡಿಯನ್ನೇ ಹರಿಸಿದ್ದ ಅಮೈ ಮಹಾಲಿಂಗ ನಾಯ್ಕರು ಆಸ್ಪತ್ರೆ ವೆಚ್ಚ ಭರಿಸಲಾಗದೆ ತೊಂದರೆಗೆ ಒಳಗಾಗಿದ್ದಾರೆ.
ದಾನಿಗಳು ಇವರ ಸಹಾಯಕ್ಕೆ ದಾವಿಸಬೇಕಿದೆ. ಪದ್ಮಶ್ರೀ ವಿಜೇತನ ಸಂಕಷ್ಟಕ್ಕೆ ಕೈಜೋಡಿಸಬೇಕಾಗಿದೆ.
ಬ್ಯಾಂಕ್ ಖಾತೆಯ ಮಾಹಿತಿ:
ಮಹಾಲಿಂಗ ನಾಯ್ಕ್.
ಕೆನರಾ ಬ್ಯಾಂಕ್, ವಿಟ್ಲ
A/C No: 110037237088
IFSC Code: CNRB0010141