
ಪರಿಶಿಷ್ಟ ಜಾತಿ/ಪಂಗಡಗಳ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸಾಥ್
ಮಂಗಳೂರು: ಸಮಾಜಮುಖಿ ಕಾರ್ಯಗಳಲ್ಲಿ ವಿಶಿಷ್ಟವಾಗಿ ತೊಡಗಿಸಿಕೊಂಡಿರುವ ರಾಷ್ಟ್ರದ ಹೆಮ್ಮೆಯ ಗ್ರಾಮೀಣ ಬ್ಯಾಂಕುಗಳಲ್ಲಿ ಒಂದಾದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಇದೀಗ ಪರಿಶಿಷ್ಟ ಜಾತಿ/ಪಂಗಡಗಳ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ನಗದು ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಹೆಚ್ಚಿನ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಮುಂದಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ ಎಂ ಭಂಡಿವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕು ಪ್ರಸ್ತುತ 9 ಜಿಲ್ಲೆಗಳಲ್ಲಿ 10 ಪ್ರಾದೇಶಿಕ ಕಾರ್ಯಾಲಯಗಳನ್ನು ಹೊಂದಿದ್ದು ಪ್ರತಿಯೊಂದು ಪ್ರಾದೇಶಿಕ ಕಾರ್ಯಾಲಯದ ವ್ಯಾಪ್ತಿಯಲ್ಲಿ 20 ಸರ್ಕಾರಿ ಪ್ರೌಢ ಶಾಲೆಗಳನ್ನು ಈ ಸಂಬಂಧ ಗುರುತಿಸಲಾಗುವುದು. ಅಂತಹ ಪ್ರತಿಯೊಂದು ಪ್ರೌಢ ಶಾಲೆಯಲ್ಲೂ ಎಂಟು, ಒಂಭತ್ತು ಮತ್ತು ಹತ್ತನೇ ತರಗತಿಯಲ್ಲಿ ಗರಿಷ್ಟ ಅಂಕ ಪಡೆದಿರುವ ಪರಿಶಿಷ್ಟ ಜಾತಿ/ಪಂಗಡಗಳ ಪ್ರತಿಭಾನ್ವಿತ ಓರ್ವ ವಿದ್ಯಾರ್ಥಿನಿಗೆ ಪ್ರತಿಯೊಂದು ವರ್ಗಕ್ಕೆ ಸಂಬಂಧಿಸಿ ತಲಾ 5000 ರೂ. ಪ್ರೋತ್ಸಾಹಧನ ನೀಡಲಾಗುವುದು ಮತ್ತು ಬ್ಯಾಂಕು ಈ ಆರ್ಥಿಕ ವರ್ಷದ ಸಾಲಿನಲ್ಲಿ ಈ ಸಂಬಂಧ 30 ಲಕ್ಷ ರೂ. ತೆಗೆದಿರಿಸಿದೆ ಎಂದು ಭಂಡಿವಾಡ ತಿಳಿಸಿದ್ದಾರೆ.
ದುರ್ಭಲ ವರ್ಗದ ಹೆಣ್ಣು ಮಕ್ಕಳು ಎಲ್ಲರಂತೆ ಕಡ್ಡಾಯವಾಗಿ ಶಿಕ್ಷಣ ಪಡೆಯುವಂತಾಗ ಬೇಕು ಮತ್ತು ಈ ನದದು ಪ್ರೋತ್ಸಾಹ ಅವರಿಗೆ ಬ್ಯಾಂಕಿನ ನೈತಿಕ ಬೆಂಬಲವಾಗಿದೆಯಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆಯಲು ಸ್ಪೂರ್ತಿಯಾಗಲಿದೆ.
ಪ್ರಸ್ತುತ ಬ್ಯಾಂಕು 9 ಜಿಲ್ಲೆಗಳ ವ್ಯಾಪ್ತಿಯಲ್ಲಿ 629 ಶಾಖೆಗಳನ್ನು ಹೊಂದಿದ್ದು 36,000 ಕೋಟಿ ವಹಿವಾಟು ನಡೆಸುತ್ತಲಿದೆ. ಗ್ರಾಮೀಣ ಜನರ ಬದುಕು ಪರಿವರ್ತನೆಯಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಬ್ಯಾಂಕು ಸುಮಾರು 77 ಲಕ್ಷ ಗ್ರಾಹಕರಿಗೆ ಸೇವೆ ನೀಡುತ್ತಲಿದೆ. ಗ್ರಾಮೀಣ ಬ್ಯಾಂಕುಗಳು 50ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಮಹತ್ತರ ಸಂದರ್ಭದಲ್ಲಿ ಬ್ಯಾಂಕು ಮುಂದಿನ ಆರ್ಥಿಕ ವರ್ಷದ ಅವಧಿಯಲ್ಲಿ ವರ್ಷಪೂರ್ತಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಭಂಡಿವಾಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.