ವೆಂಕಟರಮಣ ದೇವಸ್ಥಾನದಲ್ಲಿ ಓಕುಳಿ ಮಹೋತ್ಸವ

ವೆಂಕಟರಮಣ ದೇವಸ್ಥಾನದಲ್ಲಿ ಓಕುಳಿ ಮಹೋತ್ಸವ


ಮಂಗಳೂರು: ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳೂರು ರಥೋತ್ಸವ ಪ್ರಯುಕ್ತ ಇಂದು ಶ್ರೀ ದೇವರ ಓಕುಳಿ  ಮಹೋತ್ಸವ ನೆರವೇರಿತು.

ಸಮಾಜದ ಸಾವಿರಾರು ಭಕ್ತರು ಹಾಗೂ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ  ಉಪಸ್ಥಿತಿಯಲ್ಲಿ ಓಕುಳಿ ಉತ್ಸವ ನಡೆಯಿತು. ವೆಂಕಟರಮಣ ದೇವಸ್ಥಾನದ ವರ್ಷಾವಧಿ ರಥೋತ್ಸವ ಕಾರ್ಯಕ್ರಮದ ಕೊನೆಯ ದಿನದಂದು ಓಕುಳಿ ಉತ್ಸವ ಆಚರಿಸಲಾಗುತ್ತದೆ. ಓಕುಳಿ ಹಬ್ಬದಲ್ಲಿ ಜಾತಿ, ಬೇಧ ಮರೆತು ಒಬ್ಬರಿಗೊಬ್ಬರು ಬಣ್ಣ ಹಚ್ಚುತ್ತಾ ಸಂತಸ ಹಂಚಿಕೊಳ್ಳುವ ಮೂಲಕ ಪ್ರೀತಿ, ಸಹೋದರತ್ವ, ಬಾಂಧವ್ಯವನ್ನು ವ್ಯಕ್ತಪಡಿಸಿದರು.

ದೇವಸ್ಥಾನದ ಮುಂಭಾಗದಲ್ಲಿ ನಾಸಿಕ್ ಬ್ಯಾಂಡ್ ಲಯಕ್ಕೆ ಪೂರಕವಾಗಿ ಬಣ್ಣಗಳನ್ನು ಪರಸ್ಪರ ಹಚ್ಚಿಕೊಳ್ಳುತ್ತಾ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿದರು. ಒಂದೆಡೆ ಯುವಕರು ಬಣ್ಣಗಳ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ, ಅಲ್ಲಲ್ಲಿ ಮಕ್ಕಳು ಪಿಚಕಾರಿಗಳಲ್ಲಿ ಬಣ್ಣ ನೀರು ತುಂಬಿಸಿ, ಪರಸ್ಪರ ಚಿಮ್ಮಿಸುತ್ತಾ ಖುಷಿ ಪಟ್ಟರು. ಮತ್ತೆ ಹಲವರು ದೂರದಲ್ಲಿ ಈ ಸಂಭ್ರಮದ ಓಕುಳಿಯನ್ನು ಕಣ್ತುಂಬಿಕೊಂಡರು.

ಗುಲಾಬಿ, ಅರಸಿನ ಬಣ್ಣದ ನೀರಿನೊಂದಿಗೆ ಯುವ ಜನತೆ, ಮಕ್ಕಳು ಆಟವಾಡುತ್ತಿರುವ ದೃಶ್ಯ ರಥಬೀದಿಯಲ್ಲಿ ಕಂಡು ಬಂತು.

ಶ್ರೀ ದೇವರ ಪೇಟೆ ಉತ್ಸವ ರಥಬೀದಿ, ಉಮಾ ಮಹೇಶ್ವರ ದೇವಸ್ಥಾನ ರಸ್ತೆ, ಕೆಳಗಿನ ರಥ ಬೀದಿ, ಡೋಂಗೇರಕೇರಿ, ಚಾಮರಗಲ್ಲಿ ಮೂಲಕ ವಿ.ಟಿ ರಸ್ತೆಯಾಗಿ ಟ್ಯಾಂಕ್ ಕಾಲೋನಿಯಲ್ಲಿರುವ ಶ್ರೀನಿವಾಸ ಪಾಠಶಾಲೆಯಲ್ಲಿರುವ ಪುಷ್ಕರಣಿಯಲ್ಲಿ ಶ್ರೀ ದೇವರ ಅವಭೃತ ಸ್ನಾನ ನಡೆಯಿತು. ಶ್ರೀ ದೇವಳಕ್ಕೆ ಉತ್ಸವ ಮರಳಿದ ಬಳಿಕ ಧ್ವಜಾಅವರೋಹಣ ಬಳಿಕ ಮಹೋತ್ಸವ ಸಮಾಪನ ಗೊಂಡಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article