.jpeg)
ದಲಿತ ಸಮಾವೇಶ ಬೇಡ ಎಂದು ಯಾರೂ ಹೇಳಿಲ್ಲ: ದಿನೇಶ್ ಗುಂಡೂರಾವ್
ಮಂಗಳೂರು: ದಲಿತ ಸಮಾವೇಶ ಮಾಡೋದು ಬೇಡ ಎಂದು ಯಾರೂ ಹೇಳಿಲ್ಲ. ಯಾವ ರೀತಿ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಬಹಳ ದೊಡ್ಡ ಕಾರ್ಯಕ್ರಮ ಮಾಡಬೇಕು ಎನ್ನುವ ಉತ್ತಮ ಉದ್ದೇಶ ಇದೆ. ಆದರೆ ಅದು ಯಾವ ರೂಪದಲ್ಲಿ ಆಗಬೇಕು ಎನ್ನುವ ಬಗ್ಗೆ ತೀರ್ಮಾನವಾಗಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಈ ಹಿಂದೆಯೂ ದಲಿತ ಸಿಎಂ ಚರ್ಚೆ ಇತ್ತು. ಅವತ್ತು ನಮ್ಮ ಸರ್ಕಾರ ರಚನೆಯಾಗಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗುತ್ತಿದ್ದರು. ಜಿ.ಪರಮೇಶ್ವರ್ ಅವರಿಗೂ ಸಿಎಂ ಆಗುವ ಅವಕಾಶ ಇತ್ತು. ಚುನಾವಣೆಯಲ್ಲಿ ಅವರು ಗೆಲ್ಲಲು ಸಾಧ್ಯವಾಗಲಿಲ್ಲ. ಹಿಂದುಳಿದ ವರ್ಗ, ಸಣ್ಣ ವರ್ಗದವರೂ ಮುಖ್ಯಮಂತ್ರಿಯಾಗಿರೋದು ಕಾಂಗ್ರೆಸ್‌ನಲ್ಲಿ ಮಾತ್ರ, ಬೇರೆ ಪಕ್ಷದಲ್ಲಿ ಒಂದು ಪ್ರಬಲ ವರ್ಗಕ್ಕೆ ಮಾತ್ರ ಸಿಎಂ ಆಗೋ ಅವಕಾಶವಿದೆ ಎಂದರು.
ದೆಹಲಿ ಭೇಟಿ ಆಂತರಿಕ ವಿಚಾರ:
ಸಚಿವ ಸತೀಶ್ ಜಾರಕಿಹೊಳಿ ಹಾಗೂ ರಾಜಣ್ಣ, ದೆಹಲಿ ನಾಯಕರ ಭೇಟಿ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡಲು ಯಾವ ನಿರ್ಬಂಧವೂ ಇಲ್ಲ. ನಾನೂ ಇತ್ತೀಚೆಗಷ್ಟೆ ಹೋಗಿದ್ದೆ. ಇದೆಲ್ಲ ನಮ್ಮ ಆಂತರಿಕ ವಿಚಾರ. ರಾಜಕೀಯ ಪಕ್ಷದಲ್ಲಿ ಇದೆಲ್ಲ ಇದ್ದದ್ದೇ. ಸಾಧ್ಯತೆಗಳ ನಡೆಯೇ ರಾಜಕಾರಣ. ಪೈಪೋಟಿ ಇರಬೇಕು, ಅದು ಆರೋಗ್ಯಕರವಾಗಿರಬೇಕು. ನಮ್ಮದು ಆರೋಗ್ಯಕರ ಪೈಪೋಟಿ, ಬಿಜೆಪಿದ್ದು ಅನಾರೋಗ್ಯಕರ. ಬಿಜೆಪಿಯಲ್ಲಿ ಒಬ್ಬರ ಮೇಲೊಬ್ಬರು ಕೆಸರೆರಚಾಟ, ಆಪಾದನೆ, ಸುದ್ದಿಗೋಷ್ಠಿ ಮಾಡುವಂಥ ಕೆಟ್ಟ ಪರಿಸ್ಥಿತಿಗೆ ನಾವು ಹೋಗಿಲ್ಲ ಎಂದು ಟೀಕಿಸಿದರು.