
ವೆನ್ಲಾಕ್ ಮಾಸ್ಟರ್ ಪ್ಲ್ಯಾನ್‌ಗೆ ಸಿದ್ಧತೆ: ದಿನೇಶ್ ಗುಂಡೂರಾವ್
Saturday, February 15, 2025
ಮಂಗಳೂರು: ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ನಿರ್ಮಿಸುವ ಸಲುವಾಗಿ ತಜ್ಞರೊಬ್ಬರನ್ನು ಇದೇ ತಿಂಗಳಲ್ಲಿ ಮಂಗಳೂರಿಗೆ ಕಳುಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಅಭಿವೃದ್ಧಿ ಮಾಡಬೇಕೆನ್ನುವುದು ಹಲವು ವರ್ಷಳ ಬೇಡಿಕೆ ಇದೆ. ಈ ನಿಟ್ಟಿನಲ್ಲೂ ಚಿಂತನೆ ನಡೆಯುತ್ತಿದೆ. ಸರ್ಕಾರ ಬಂದ ಮೇಲೆ ಡಯಾಲಿಸಿಸ್ ಸೌಲಭ್ಯ ಸುಧಾರಣೆ ಮಾಡಲಾಗಿದೆ. ಸೂಪರ್ ಸ್ಪೆಷಾಲಿಟಿ ವ್ಯವಸ್ಥೆ ಆರಂಭಿಸಿದ್ದು, ಬೇಕಾದ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಕೆಲವು ತಾಲೂಕು ಆಸ್ಪತ್ರೆಗಳಿಗೆ ಸೀಮಿತವಾಗಿದ್ದ ಪುನೀತ್ ರಾಜ್ ಹೃದಯ ಜ್ಯೋತಿ ಯೋಜನೆಯನ್ನು ಇಡೀ ರಾಜ್ಯದ ಎಲ್ಲ ತಾಲೂಕುಗಳಿಗೆ ವಿಸ್ತರಿಲಾಗುವುದು ಎಂದು ಪ್ರಕಟಿಸಿದ ಸಚಿವರು, ದಕ್ಷಿಣ ಕನ್ನಡ ಮತ್ತು ಮಂಗಳೂರು ನಗರದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಬೇಕಾದ ಯೋಜನೆಗಳ ಬಗ್ಗೆ ಸೋಮವಾರ ಕೆಡಿಪಿ ಸಭೆಯಲ್ಲಿ ಚರ್ಚಿಸಲಿದ್ದೇನೆ, ಅದಕ್ಕೆ ಎಲ್ಲ ಶಾಸಕರನ್ನು ಆಹ್ವಾನಿಸಿದ್ದೇನೆ ಎಂದು ಹೇಳಿದರು.