ಅನೇಕ ಕಾಮಗಾರಿಗಳನ್ನು ಉದ್ಘಾಟಿಸಿದ ಸಚಿವ ಗುಂಡುರಾವ್

ಅನೇಕ ಕಾಮಗಾರಿಗಳನ್ನು ಉದ್ಘಾಟಿಸಿದ ಸಚಿವ ಗುಂಡುರಾವ್


ಮಂಗಳೂರು: ನಗರದ ಮಂಗಳಾದೇವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ, ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡ, ಪಾಲಿಕೆ ಸಿಬ್ಬಂದಿ ವಸತಿ ಗೃಹ, ಬಸ್ ತಂಗುದಾಣ ಮತ್ತಿತರ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಉದ್ಘಾಟಿಸಿದರು.

ಈ ಕಾಮಗಾರಿಗಳನ್ನು ಬಿಜೆಪಿ ಜನಪ್ರತಿನಿಧಿಗಳು ಕಳೆದ ಭಾನುವಾರ ಉದ್ಘಾಟಿಸಿದ್ದರು. ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಥವಾ ಸಚಿವರ ಕಚೇರಿಗೂ ಮಾಹಿತಿ ನೀಡದೆ ಉದ್ಘಾಟಿಸಿದ್ದನ್ನು ಪ್ರಶ್ನಿಸಿ, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಸಚಿವರು ಸ್ವತಃ ಆಗಮಿಸಿ ಉದ್ಘಾಟನೆ ನೆರವೇರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕರು, ಸಂಸದರು, ಮೇಯರ್, ಸ್ಥಳೀಯ ಕಾರ್ಪೊರೇಟರ್ ಗೈರು ಹಾಜರಾಗಿದ್ದರು.


ಹೇಳದೆ ಉದ್ಘಾಟಿಸಲು ಸ್ವಂತ ಆಸ್ತಿಯಲ್ಲ:

ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಈ ಕಾಮಗಾರಿಗಳನ್ನು ತರಾತುರಿಯಲ್ಲಿ ಯಾರಿಗೂ ಹೇಳದೆ ಬಿಜೆಪಿಯವರು ಉದ್ಘಾಟನೆ ಮಾಡಿದ್ದು ಖಂಡನೀಯ. ಇದು ಸರ್ಕಾರದ ಆಸ್ತಿ ಹಾಗೂ ಸರ್ಕಾರದ ಹಣದಿಂದ ಮಾಡಿದ ಕಾಮಗಾರಿ. ಹೇಳದೆ ಕೇಳದೆ ಉದ್ಘಾಟಿಸಲು ಬಿಜೆಪಿಯವರ ಸ್ವಂತ ಆಸ್ತಿಯಲ್ಲ. ಸರ್ಕಾರದ ಆಸ್ತಿ ಆಗಿರುವುದರಿಂದ ಉದ್ಘಾಟನೆಯೂ ಶಿಷ್ಟಾಚಾರ ಪ್ರಕಾರವೇ ಆಗಬೇಕು. ಎಲ್ಲರೂ ಸೇರಿ ಜನರ ಕೆಲಸ ಮಾಡುವ ಕಾರ್ಯ ಆಗಬೇಕು. ನಾನು ೨-೩ ತಿಂಗಳಿಗೊಮ್ಮೆ ಬರುವ ಉಸ್ತುವಾರಿ ಸಚಿವನಲ್ಲ. ಆಗಾಗ ಬರುತ್ತಿರುತ್ತೇನೆ. ಉದ್ಘಾಟನೆಗೆ ದಿನಾಂಕ ಗೊತ್ತುಪಡಿಸುವಂತೆ ಕೇಳುವ ಸೌಜನ್ಯವೂ ಇಲ್ಲದಿದ್ದರೆ ನಾಗರಿಕ ವರ್ತನೆ ಅನ್ನಿಸಿಕೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದಲ್ಲಿ ಕೇಂದ್ರ ಬಿಜೆಪಿ ಸಚಿವರೂ ಭಾಗವಹಿಸಿದ್ದರು. ಅಭಿವೃದ್ಧಿ ಕಾರ್ಯಗಳು ಕೇವಲ ಒಬ್ಬರಿಗೆ ಸೇರಿದ್ದಲ್ಲ. ಅದರ ಹೆಗ್ಗಳಿಕೆ ನಮಗಷ್ಟೇ ಸಿಗಬೇಕು ಎಂದು ಬಯಸುವುದು ಕೀಳು ರಾಜಕಾರಣ. ಇನ್ಮುಂದೆ ಯಾವುದೇ ಕಾರಣಕ್ಕೂ ಇಂಥ ಅನಗತ್ಯ ಗೊಂದಲ, ಮುಜುಗರ ಸೃಷ್ಟಿಸುವ ಕೆಲಸ ಪುನರಾವರ್ತನೆಯಾಗಲು ಅಧಿಕಾರಿಗಳು ಅವಕಾಶ ಕಲ್ಪಿಸಬಾರದು ಎಂದು ಕಿಡಿ ಕಾರಿದರು.


ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ಯೋಜನೆ ಉದ್ಘಾಟನೆ ಆಗಬೇಕಾದರೆ ಉಸ್ತುವಾರಿ ಸಚಿವರನ್ನು ಕರೆಯೋದು ಶಿಷ್ಟಾಚಾರ. ಅದನ್ನು ಮುರಿಯುವ ಕೆಲಸವನ್ನು ಬಿಜೆಪಿಯವರು ಮಾಡಿದ್ದಾರೆ. ಆರೋಗ್ಯ ಸಚಿವರ ಇಲಾಖೆಗೇ ಸೇರಿದ ಕಾಮಗಾರಿಯನ್ನು ಅವರಿಗೇ ಹೇಳದೆ ಉದ್ಘಾಟಿಸೋದು ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಹರೀಶ್ ಕುಮಾರ್, ಜೆ.ಆರ್. ಲೋಬೊ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ಅನಿಲ್ ಕುಮಾರ್, ಎ.ಸಿ. ವಿನಯರಾಜ್, ಲತೀಫ್, ಅಬ್ದುಲ್ ರವೂಫ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ಮತ್ತಿತರರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article