ಹೀಟ್ ವೇವ್ - ಆರೋಗ್ಯ ಇಲಾಖೆಯಿಂದ ಅಗತ್ಯ ಕ್ರಮ: ಡಾ. ಎಚ್.ಆರ್. ತಿಮ್ಮಯ್ಯ

ಹೀಟ್ ವೇವ್ - ಆರೋಗ್ಯ ಇಲಾಖೆಯಿಂದ ಅಗತ್ಯ ಕ್ರಮ: ಡಾ. ಎಚ್.ಆರ್. ತಿಮ್ಮಯ್ಯ


ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀಟ್‌ವೇವ್ ಕಾಣಿಸಿಕೊಂಡಿರುವ ಕಾರಣದಿಂದ ಜನರ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೀಟ್ ವೇವ್ ನಿಂದಾಗಿ ಹೆಚ್ಚಾಗಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ತಾಲೂಕು ಮಟ್ಟದ ಅಧಿಕಾರಿಗಳ ಜತೆಯಲ್ಲಿ ವಿಶೇಷ ಸಭೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಇದರ ಜತೆಯಲ್ಲಿ ಡಿಡಿಪಿಐ, ಡಿಡಿಪಿಯುಗಳಿಗೂ ವಿದ್ಯಾರ್ಥಿಗಳ ಆರೋಗ್ಯ ಕಾಳಜಿಯ ಕುರಿತು ಹೆತ್ತವರು ಹೆಚ್ಚು ಜಾಗೃತಿ, ಮಾಹಿತಿ ನೀಡಲು ಸೂಚನೆ ನೀಡಲಾಗಿದೆ ಎಂದರು.

ಹೊರರಾಜ್ಯಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಹಕ್ಕಿಜ್ವರ ರಾಜ್ಯದ ಬಳ್ಳಾರಿ, ಚಿಕ್ಕಬಳ್ಳಾಪುರದಲ್ಲೂ ಕಾಣಿಸಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕುರಿತು ಪಶು ಇಲಾಖೆ ಹಾಗೂ ಆರೋಗ್ಯ ಇಲಾಖೆ ಜತೆ ಸಮನ್ವಯ ಸಮಿತಿ ಸಭೆ ಮಾರ್ಚ್ ೧ರಂದು ನಡೆಸಲಿದ್ದು, ಈ ಬಳಿಕ ಈ ಕುರಿತು ಅಗತ್ಯ ತೀರ್ಮಾನಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ತೆಗೆದುಕೊಳ್ಳಲಿದೆ ಎಂದವರು ತಿಳಿಸಿದರು.

ಹಕ್ಕಿಜ್ವರದ ಭೀತಿ ರಾಜ್ಯದಲ್ಲಿ ಕಾಣಿಸಿಕೊಂಡಿರುವುದರಿಂದ ಮಾಂಸ ಪ್ರಿಯರು ಮಾಂಸವನ್ನು ಅದಷ್ಟು ಉತ್ತಮವಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ಕಾಯಿಲೆಗಳು ಕಾಣಿಸಿಕೊಳ್ಳುವುದಿಲ್ಲ. ಹೆಚ್ಚಾಗಿ ಮಾಂಸವನ್ನು ಬೇಯಿಸಿ ತಿನ್ನುವುದು ಅಗತ್ಯವಿದೆ. ಅದರಲ್ಲೂ ಮುಖ್ಯವಾಗಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಈ ಕುರಿತು ಮಾಹಿತಿ ರವಾನೆ ಮಾಡಲಾಗಿದೆ. ಉಳಿದಂತೆ ಪಶು ಇಲಾಖೆಯ ಅಧಿಕಾರಿಗಳ ಜತೆಯಲ್ಲಿ ಸಭೆ ನಡೆಸಿದಾಗ ಅಲ್ಲೂ ಮುಂಜಾಗ್ರತಾ ಕ್ರಮಗಳನ್ನು ಆಧಾರಿಸಿಕೊಂಡು ಆರೋಗ್ಯ ಇಲಾಖೆ ಕೂಡ ಹೆಜ್ಜೆ ಇಡಲು ಸಹಕಾರಿಯಾಗುತ್ತದೆ. ಈ ವರೆಗೆ ಜಿಲ್ಲೆಯಲ್ಲಿ ಯಾವುದೇ ಹಕ್ಕಿಜ್ವರದ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ಆದರೆ ಮುಂಜಾಗ್ರತೆ ಕಟ್ಟೇಚ್ಚರವನ್ನು ಕೈಗೊಳ್ಳಲು ಇಲಾಖೆ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದರು.

ತಾಪಮಾನ ಹೆಚ್ಚು ಇರುವುದರಿಂದ ಜನತೆ ಆದಷ್ಟೂ ಹೆಚ್ಚು ನೀರಿನಾಂಶ ಇರುವ ತರಕಾರಿ, ಹಣ್ಣುಗಳನ್ನು ಸೇವಿಸಬೇಕು. ಕಾರ್ಬೊಹೈಡ್ರೇಡ್ ಇರುವ ತಂಪು ಪಾನೀಯಗಳನ್ನು ಕುಡಿಯಬಾರದು. ಇದರಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ ಇದರಿಂದ ಮತ್ತಷ್ಟು ಸಮಸ್ಯೆಗಳು ಸೃಷ್ಟಿಯಾಗಬಹುದು ಎಂದು ಡಿಎಚ್‌ಒ ಎಚ್ಚರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ವರ್ಷಗಳ ಹಿಂದೆ ಮಂಗನಕಾಯಿಲೆ ಪ್ರಕರಣವೊಂದು ಕಾಣಿಸಿಕೊಂಡಿತ್ತು. ಆದರೆ ಹೊರಜಿಲ್ಲೆಯಲ್ಲಿ ಪ್ರಕರಣಗಳು ಇದ್ದು ಚಿಕಿತ್ಸೆಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಮಂದಿ ಹೆಚ್ಚುತ್ತಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ಒಂದೆರಡು ಉಡುಪಿ ಕಡೆಯ ಪ್ರಕರಣಗಳು ಜಿಲ್ಲೆಗೆ ಬಂದಿತ್ತು. ವಿಶೇಷ ಎಂದರೆ ನಮ್ಮಲ್ಲಿ ಚಿಕಿತ್ಸೆಯಿದೆ ಆದರೆ ಇಂತಹ ಕಾಯಿಲೆಯ ಮಾದರಿಯನ್ನು ಶಿವಮೊಗ್ಗದ ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸುವುದರಿಂದ ಫಲಿತಾಂಶ ಪಡೆಯಲು ಒಂದೆರಡು ದಿನಗಳು ಕಾಯಬೇಕಾಗುತ್ತದೆ. ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಮಂಗನಕಾಯಿಲೆಗೆ  ಉತ್ತಮ ಚಿಕಿತ್ಸೆ ದೊರೆಯುತ್ತದೆ ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article