‘ನಾನು ಪಾಳೆಗಾರ ಅಲ್ಲ, ಕ್ಷೇತ್ರದ ಕಾವಲುಗಾರ’ ಶಾಸಕರ ತಿರುಗೇಟು: ಶಾಸಕ ಕಾಮತ್

‘ನಾನು ಪಾಳೆಗಾರ ಅಲ್ಲ, ಕ್ಷೇತ್ರದ ಕಾವಲುಗಾರ’ ಶಾಸಕರ ತಿರುಗೇಟು: ಶಾಸಕ ಕಾಮತ್


ಮಂಗಳೂರು: ‘ಶಾಸಕ ವೇದವ್ಯಾಸ ಕಾಮತ್ ಏನು ಇಲ್ಲಿನ ಪಾಳೇಗಾರನ’ ಎಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಕೇಳಿದ್ದಕ್ಕೆ ನಾನು ಉತ್ತರ ಕೊಡುವುದಿಲ್ಲ. ಬದಲಿಗೆ “ಪಾಳೆಗಾರ ಅಲ್ಲ ಕಾವಲುಗಾರ” ಎಂದು ಕ್ಷೇತ್ರದ ಜನತೆಯೇ ಉತ್ತರ ಕೊಟ್ಟಿದ್ದಾರೆ. ಅದನ್ನು ಅವರು ಮೊದಲು ಅರಗಿಸಿಕೊಳ್ಳಲಿ ಸಾಕು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಪರಿಶಿಷ್ಟ ಸಮುದಾಯದ ಗೌರವಾನ್ವಿತ ಮೇಯರ್ ರವರು ಜಿಲ್ಲಾಡಳಿತ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ, ಮಾಹಿತಿ ನೀಡಿಯೇ ಮಂಗಳಾದೇವಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟನೆಯನ್ನು ನಡೆಸಿದ್ದು ಕಾಂಗ್ರೆಸ್ಸಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಮರು ಉದ್ಘಾಟನೆ ಮಾಡಿ ತಮ್ಮ ನಿಜ ಮಾನಸಿಕತೆಯನ್ನು ತೋರಿಸಿದ್ದಾರೆ. ಇದು ಇಡೀ ಪರಿಶಿಷ್ಟ ಸಮುದಾಯಕ್ಕಾದ ಅವಮಾನವಾಗಿದೆ ಎಂದರು.

ಆರೋಗ್ಯ ಕೇಂದ್ರದಲ್ಲಿದ್ದ ಬಡ ರೋಗಿಗಳನ್ನು ಹೊರದಬ್ಬಿ, ಕೇವಲ ನಾಲ್ಕೇ ದಿನಕ್ಕೆ ಬೀಗ ಹಾಕಿ, ಸ್ವಪ್ರತಿಷ್ಠೆ ಹಾಗೂ ರಾಜಕೀಯಕ್ಕಾಗಿ ಮರು ಉದ್ಘಾಟನೆ ಎಂಬ ಹೊಸ ಮತ್ತು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಕಾಂಗ್ರೆಸ್ಸಿಗೆ ಕಿಂಚಿತ್ತಾದರೂ ಶೋಭೆ ಇದೆಯೇ? ಈಗ ಈ ಗೊಂದಲಕ್ಕೆ ಶಾಸಕರೇ ಕಾರಣ ಎಂದು ಆರೋಪಿಸುವ ಬದಲು, ಹೇಗೂ ನಿಮ್ಮದೇ ಸರ್ಕಾರವಿದೆ, ಮಂಗಳಾದೇವಿಯ ಆರೋಗ್ಯ ಕೇಂದ್ರದ ಉದ್ಘಾಟನೆ ವಿಷಯದಲ್ಲಿ ನಾನು ಅಟೆಂಡರ್ ನಿಂದ ಹಿಡಿದು ಜಿಲ್ಲಾಧಿಕಾರಿಯವರೆಗೆ ಯಾವನೇ ಒಬ್ಬನಿಗೆ ಕರೆ ಮಾಡಿದ್ದರೂ ತನಿಖೆ ಮಾಡಿಸಿ ನೋಡೋಣ. ಇಲ್ಲದಿದ್ದರೆ ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ ಎಂದು ಸವಾಲು ಹಾಕಿದರು. 

ಶಿಷ್ಟಾಚಾರದ ಪ್ರಕಾರ ಮರು ಉದ್ಘಾಟನಾ ಕಾರ್ಯಕ್ರಮವನ್ನು ಮಾಡಿದ್ದೇವೆ ಎನ್ನುತ್ತಿರುವ ಕಾಂಗ್ರೆಸ್ಸಿಗರು ವೇದಿಕೆಯಲ್ಲಿ ಮಾಜಿ ಶಾಸಕರ ಸಹಿತ ಕಾಂಗ್ರೆಸ್ ಕಾರ್ಯಕರ್ತರನ್ನು ಕೂರಿಸಿದ್ದು ಯಾವ ಶಿಷ್ಟಾಚಾರ? ಇದೇ ಪ್ರಕಾರ ಹೋದರೆ, ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಜಿಲ್ಲೆಗೆ ಸಮಯವನ್ನು ಕೊಡುವುದಿಲ್ಲ. ಹಾಗಾದರೆ ನಾವು ಕೂಡ ಉಳಿದ ಕಾರ್ಯಕ್ರಮಗಳಿಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆ ತರಬಹುದೇ? ಎಂದು ತರಾಟೆಗೆ ತೆಗೆದುಕೊಂಡರು.

ಬಿಜೆಪಿ ನಾಯಕರಾದ ರಮೇಶ್ ಕಂಡೆಟ್ಟು, ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಭಾನುಮತಿ, ಮನಪಾ ಸದಸ್ಯೆ ಪೂರ್ಣಿಮಾ, ರವಿಶಂಕರ್ ಮಿಜಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article