
ಡಿಕೆಶಿ ಕೆಳಗಿಸಬೇಕೆಂದು ಹಠ ಇಲ್ಲ, ಮನವಿ ಮಾತ್ರ: ಸಚಿವ ಸತೀಶ್ ಜಾರಕಿಹೊಳಿ
ಮಂಗಳೂರು: ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎನ್ನುವ ಬಗ್ಗೆ ನಮ್ಮದೇನು ಹಠ ಇಲ್ಲ, ಮನವಿ ಮಾತ್ರ. ನಾವು ಹೋಗಿ ಹೈಕಮಾಂಡ್ ಬಳಿ ಪ್ರಾರ್ಥನೆ ಮಾಡೋದು ಮಾತ್ರ. ಅದರ ಬಗ್ಗೆ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಬಳಿ ಹೇಳಲು ನಮ್ಮ ಪಕ್ಷದಲ್ಲಿ ಎಲ್ಲರೂ ಸ್ವತಂತ್ರರಿದ್ದಾರೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ದೆಹಲಿ ಭೇಟಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ದೆಹಲಿ ಹೈಕಮಾಂಡ್ ಅಂದರೆ ದೇವಸ್ಥಾನ ಇದ್ದಂತೆ. ಅಲ್ಲಿಗೆ ಯಾರು ಬೇಕಾದರೂ ಹೋಗಬಹುದು, ಯಾರು ಹೋಗುವವುದಕ್ಕೂ ನಿರ್ಬಂಧ ಇಲ್ಲ. ನಾನು ದೆಹಲಿ ಹೋದಾಗ ಪಕ್ಷ ಬೆಳೆಯಬೇಕು, ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಹೈಕಮಾಂಡ್ ದೇವಾಲಯದಲ್ಲಿ ಬೇಡಿಕೊಂಡಿದ್ದೇನೆ. ಎಲ್ಲರೂ ಹೋಗಿ ಅದನ್ನೇ ಬೇಡೋದು. ಸಣ್ಣ ಪುಟ್ಟ ವ್ಯತ್ಯಾಸಗಳು ಇದ್ದರೆ ಅದನ್ನ ಸರಿ ಮಾಡೋ ಪ್ರಾರ್ಥನೆ ಕೂಡಾ ಅಲ್ಲಿಯೇ ಆಗುತ್ತೆ ಎಂದರು.
ಸಚಿವ ರಾಜಣ್ಣ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಹೈಕಮಾಂಡ್‌ಗೆ ದೂರು ನೀಡಿದ್ದಾರೆಂಬ ವಿಚಾರದ ಬಗ್ಗೆ, ಕಾರ್ಯಾಧ್ಯಕ್ಷರು ಇಲ್ಲೇ ಇರುತ್ತಾರೆ, ರಾಜಣ್ಣರನ್ನ ಅವರೇ ಕರೆಸಿ ಚರ್ಚೆ ನಡೆಸಬಹುದಿತ್ತು. ಸಮಸ್ಯೆಗೆ ಇಲ್ಲಿಯೇ ಪರಿಹಾರ ಸಿಗುತ್ತಿತ್ತು. ದೆಹಲಿಗೆ ಹೋಗುವ ಅವಶ್ಯಕತೆ ಇರಲಿಲ್ಲ. ಕಾರ್ಯಾಧ್ಯಕ್ಷರ ಅಧೀನದಲ್ಲೇ ರಾಜಣ್ಣ ಇರುವಂತದ್ದು. ದೆಹಲಿಗೆ ಪತ್ರ ಬರೆಯುವ ಅವಶ್ಯಕತೆ ಇರಲಿಲ್ಲ ಎಂದರು.
ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಲಿ ಎಂಬ ಡಿಕೆಶಿಯೇ ಹೇಳಿಕೆ ಕುರಿತಾಗಿ, ಅವರೇ ಹೇಳಿದ ನಂತರ ಮತ್ತೆ ಚರ್ಚೆ ಮಾಡುವ ಅಗತ್ಯ ಇಲ್ಲ ಎಂದರು.
ಗೃಹಲಕ್ಷ್ಮಿ ಹಣ ಬಿಡುಗಡೆಯಾಗದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಎರಡು ತಿಂಗಳಿನಿಂದ ಆಗಿಲ್ಲ, ಈಗ ಒಟ್ಟಿಗೇ ಬಿಡುಗಡೆ ಆಗುತ್ತೆ. ಈ ಹಿಂದೆಯೂ ಎರಡು ತಿಂಗಳಿಗೊಮ್ಮೆ ಬಿಡುಗಡೆ ಆಗುತ್ತಾ ಬಂದಿದೆ. ಒಟ್ಟಾರೆ ಹಣ ಕೂಡಿಸಿ ಕೊಡುತ್ತಿದ್ದೇವೆ, ಯೋಜನೆ ನಿಲ್ಲಿಸಿಲ್ಲ. ತಾತ್ಕಾಲಿಕ ತಡವಾಗಿದೆ, ಪೂರ್ತಿ ಕೊಡುವ ಪ್ರಯತ್ನ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ದಲಿತ ಸಮಾವೇಶ ನಡೆಸುವ ವಿಚಾರ ಸದ್ಯಕ್ಕೆ ಚರ್ಚೆ ಇಲ್ಲ. ಆ ಬಗ್ಗೆ ಖಚಿತವಾದಾಗ ಹೇಳ್ತೇನೆ. ಅದು ಗೃಹಸಚಿವ ಡಾ ಪರಮೇಶ್ವರ್ ನೇತೃತ್ವದಲ್ಲಿ ನಡೆಯುವ ಸಮಾವೇಶ. ಅವರು ಯಾವಾಗ ಹೇಳುತ್ತಾರೆ ಆವಾಗ ಸಮಾವೇಶ ನಡೆಯುತ್ತೆ ಎಂದು ಹೇಳಿದರು.