
ಡಾ. ಪಿ. ದಯಾನಂದ ಪೈ ಎಸ್‌ಬಿಎಫ್ ಯುವ ಮಹೋತ್ಸವ್‌ಗೆ ಪದ್ಮಶ್ರೀ ಪುರಸ್ಕೃತ ರೋನು ಮುಜುಂದಾರ್ ಚಾಲನೆ
ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ ಆಯೋಜನೆಯ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆ, ವಿಜೇತರಿಗೆ ಪುರಸ್ಕಾರ ಪ್ರದಾನ ಕಾರ್ಯಕ್ರಮ ‘ಡಾ.ಪಿ ದಯಾನಂದ ಪೈ ಎಸ್‌ಬಿಎಫ್ ಯುವ ಮಹೋತ್ಸವ್-2025’ಕ್ಕೆ ಶನಿವಾರ ನಗರದ ಡಾನ್‌ಬಾಸ್ಕೊ ಸಭಾಂಗಣದಲ್ಲಿ ಪದ್ಮಶ್ರೀ ಪುರಸ್ಕೃತ ಹಿರಿಯ ಬಾನ್ಸುರಿ ಕಲಾವಿದ ಪಂ. ರೋನು ಮುಜುಂದಾರ್ ಚಾಲನೆ ನೀಡಿದರು.
ಯುವಜನರಲ್ಲಿ ಹಿಂದುಸ್ತಾನಿ ಶಾಸೀಯ ಸಂಗೀತವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಸಂಗೀತ ಭಾರತಿ ಫೌಂಡೇಶನ್ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಯುವ ಕಲಾವಿದರು ಉತ್ತಮ ಪ್ರದರ್ಶನ ನೀಡಿರುವುದು ಸಂತಸ ತಂದಿದೆ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಬಾನ್ಸುರಿ ಕಲಾವಿದ ಪಂ. ರೋನು ಮುಜುಂದಾರ್ ಹೇಳಿದರು.
ಸಂಗೀತ ಭಾರತಿ ಪ್ರತಿಷ್ಠಾನ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್.ನಾಯಕ್, ಅಂತಾರಾಷ್ಟ್ರೀಯ ಕಲಾವಿದರಾದ ಪಂ. ಜಯತೀರ್ಥ ಮೇವುಂಡಿ, ಯುವ ತಬ್ಲಾ ವಾದಕ ಪಂ. ಯಶವಂತ್ ವೈಷ್ಣವ್, ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ, ಡಾ. ಶಶಾಂಕ್ ಮಕ್ತೇದಾರ್, ಉಜ್ಜೈನ್ ಸ್ಮಾಲ್ ಫೈನಾನ್ಸ್‌ನ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಕರೋಲ್ ಲೈಡಿಯಾ ಪಿಂಟೋ, ಬ್ಯಾಂಕ್ ಆಫ್ ಮಹಾರಾಷ್ಟ್ರದ ಹೌಸಿಂಗ್ ಫಿನಾನ್ಸ್ ಬ್ರಾಂಚ್‌ನ ಚೀಫ್ ಮ್ಯಾನೇಜರ್ ಅಭಿನವ ಕುಮಾರ್ ಶ್ರೀವಾಸ್ತವ, ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಂಗಳೂರು ಬ್ರಾಂಚ್ ಸೀನಿಯರ್ ಮ್ಯಾನೇಜರ್ ಮಹೇಶ್ ಎಂ. ನಾಯರ್, ಸಂಗೀತ ಭಾರತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್. ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಸಂಗೀತ ಭಾರತಿ ಪ್ರತಿಷ್ಠಾನದ ಟ್ರಸ್ಟಿ ಅಂಕುಶ್ ಎನ್. ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಉಪನ್ಯಾಸಕಿ ಉಜ್ವಲ್ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ಭಾರತಿ ಪ್ರತಿಷ್ಠಾನದ ಖಜಾಂಚಿ ಕರುಣಾಕರ ಬಳ್ಕೂರು, ಟ್ರಸ್ಟಿಗಳಾದ ಮುರುಳೀಧರ ಜಿ. ಶೆಣೈ, ಡಾ. ರಮೇಶ್ ಕೆ.ಜಿ. ಮತ್ತಿತರರು ಸಹಕರಿಸಿದರು.
ಪ್ರತಿಭಾನ್ವಿತರ ಪೈಪೋಟಿ:
ನೋಂದಾಯಿತ ಸ್ಪರ್ಧಿಗಳ ಪೈಕಿ ಕೊನೆಯ ಸುತ್ತಿಗೆ ಆನ್‌ಲೈನ್‌ನಲ್ಲಿ ಆಯ್ಕೆ ಮಾಡಲಾಗಿದ್ದ 18-30 ವರ್ಷದೊಳಗಿನ 24 ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಪ್ರತಿಭಾವಂತ ಕಲಾವಿದರು ಪರಸ್ಪರ ಪೈಪೋಟಿಯ ಕಲಾಪ್ರದರ್ಶನ ನೀಡಿದರು. ವಾದ್ಯ ವಾದನ(ತಬ್ಲಾ ಮತ್ತು ಪಕವಾಜ್ ಹೊರತುಪಡಿಸಿ) ಹಾಗೂ ಹಾಡುಗಾರಿಕೆ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಸಲಾಯಿತು.
ಬಾನ್ಸುರಿ-ಗಾಯನ-ಸಿತಾರ್ ಜುಗಲ್‌ಬಂದಿ:
ಫೆ.9ರಂದು ಸಂಜೆ 4ಗಂಟೆಗೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಗುವುದು. ಪ್ರಥಮ 60 ಸಾವಿರ ರೂ., ದ್ವಿತೀಯ 40 ಸಾವಿರ ರೂ. ಹಾಗೂ ತೃತೀಯ ಸ್ಥಾನಿಗೆ 20 ಸಾವಿರ ರೂ. ಬಹುಮಾನ ನೀಡಲಾಗುವುದು. ಪ್ರಥಮ ಸ್ಥಾನ ವಿಜೇತರಿಗೆ ಭಾನುವಾರ ‘ಸ್ವರ ಭಾರತಿ’ ಬಿರುದು ಪ್ರದಾನ ಮಾಡಲಾಗುವುದು. ಬಳಿಕ ಪಂ. ರೋನು ಮುಜುಂದಾರ್, ಹುಬ್ಬಳ್ಳಿಯ ಪಂ. ಜಯತೀರ್ಥ ಮೇವುಂಡಿ ಮತ್ತು ಉಸ್ತಾದ್ ರಫೀಕ್ ಖಾನ್ ಅವರ ಬಾನ್ಸುರಿ-ಗಾಯನ-ಸಿತಾರ್ ಜುಗಲ್‌ಬಂದಿ ಕಛೇರಿ ನಡೆಯಲಿದೆ. ಮುಂಬೈಯ ಪಂ. ಯಶವಂತ್ ವೈಷ್ಣವ್ ತಬ್ಲಾ ಹಾಗೂ ಪ್ರೊ. ನರೇಂದ್ರ ಎಲ್. ನಾಯಕ್ ಹಾರ್ಮೋನಿಯಂನಲ್ಲಿ ಸಹಕಾರ ನೀಡಲಿದ್ದಾರೆ.