ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಹೊಸ ಶಕೆ ಆರಂಭ: ಸಂಸದ ಕ್ಯಾ. ಚೌಟ

ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಹೊಸ ಶಕೆ ಆರಂಭ: ಸಂಸದ ಕ್ಯಾ. ಚೌಟ


ಮಂಗಳೂರು: ದೆಹಲಿಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು, ರಾಷ್ಟ್ರ ರಾಜಧಾನಿಯ ಉಜ್ವಲ, ಪ್ರಗತಿಪರ ಭವಿಷ್ಯಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ‘ವಿಕಸಿತ ಭಾರತ-ವಿಕಸಿತ ದೆಹಲಿ’ ದೃಷ್ಟಿಕೋನದ ಮೇಲೆ ಜನತೆಯ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ಇಂದು ಬೆಳ್ತಂಗಡಿ ಬಿಜೆಪಿ ಕಚೇರಿಯ ಬಳಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ ಪಾಲ್ಗೊಂಡು ಮಾತನಾಡಿದ ಅವರು, ಸುಳ್ಳು, ವಂಚನೆ ಮತ್ತು ಭ್ರಷ್ಟಾಚಾರದ ಮೂಲಕ ಕಟ್ಟಿದ್ದ ‘ಶೀಶ್ ಮಹಲ್’ ಅನ್ನು ನುಚ್ಚುನೂರು ಮಾಡುವ ಮೂಲಕ ದೆಹಲಿ ಜನತೆ ‘ಆಪ್’ ಮುಕ್ತ ಮಾಡಿರುವುದಲ್ಲದೇ, ದೆಹಲಿಯಲ್ಲಿ ಅಭಿವೃದ್ಧಿ ಮತ್ತು ವಿಶ್ವಾಸದ ಹೊಸ ಯುಗದ ಆರಂಭಕ್ಕೆ ನಾಂದಿ ಹಾಡಿದ್ದಾರೆ ಎಂದು ತಿಳಿಸಿದ್ದಾರೆ.


ಈ ಗೆಲುವಿನ ಪ್ರಮುಖ ಕಾರಣ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ಜನರಿಗಿರುವ ಭರವಸೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಜನರಿಗೆ ಮಂಕುಬೂದಿ ಎರಚಿದ್ದ ಕೇಜ್ರಿವಾಲ್ ಮುಂದಾಳತ್ವದ ಪಕ್ಷವನ್ನು ದೆಹಲಿಯ ಜನರೇ ಅಕ್ಷರಶಃ ಪೊರಕೆಯಿಂದ ಸ್ವಚ್ಚಗೊಳಿಸಿದ್ದಾರೆ. ಹರಿನಗರ, ಕಸ್ತೂರ್ಬಾ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ವಾರ ನಾನು ಕೂಡಾ ಖುದ್ದು ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ವೇಳೆ ಬಿಜೆಪಿ ಪರ ಅಲೆ ಸೃಷ್ಟಿಯಾಗಿತ್ತು, ಇದು ಇಂದಿನ ಫಲಿತಾಂಶದಲ್ಲಿ ದೃಢಪಟ್ಟಿದೆ ಎಂದು ಹೇಳಿದರು.


ದೇಶದ ಸಮಗ್ರ ವಿಕಾಸದ ದೃಷ್ಟಿಯಿಂದ ದೆಹಲಿಯಲ್ಲಿ ಬಿಜೆಪಿಗೆ ಜನಾದೇಶ ನೀಡಿರುವುದು ಗಮನಾರ್ಹ. ಏಕೆಂದರೆ ಮತದಾರರು ರಾಷ್ಟ್ರ ರಾಜಧಾನಿಯಲ್ಲಿಯೇ ಪ್ರಧಾನಿ ಮೋದಿಯವರ ಕೈಯನ್ನು ಬಲಪಡಿಸಿರುವುದು ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ವರದಾನವಾಗಲಿದೆ. ಆ ಮೂಲಕ ಸತತ 27 ವರ್ಷಗಳಿಂದ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸಿದ್ದ ರಾಷ್ಟ್ರ ರಾಜಧಾನಿಯನ್ನು ‘ಡಬಲ್ ಎಂಜಿನ್’ ಬಿಜೆಪಿ ಸರ್ಕಾರವು ಅಭಿವೃದ್ಧಿಯಲ್ಲಿ ಉತ್ತುಂಗಕ್ಕೆ ಕೊಂಡೊಯ್ಯುಲಿದೆ. ಸುದೀರ್ಘ ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿರುವ ಪಾರ್ಟಿಯ ಎಲ್ಲಾ ನಾಯಕರು, ಕಾರ್ಯಕರ್ತರಿಗೆ ಸಂಸದನಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article