
ರೈಲ್ವೆ ಲೋಕೋ ಪೈಲಟ್ ಸಿಬ್ಬಂದಿ, ಕುಟುಂಬಸ್ಥರಿಂದ ಪ್ರತಿಭಟನೆ
ಮಂಗಳೂರು: ಕೆಲಸದ ಒತ್ತಡ, ರಜೆ ನಿರಾಕರಣೆ ಮುಂತಾದ ಗಂಭೀರ ಸಮಸ್ಯೆಗಳ ಪರಿಹಾರ ವಿಷಯದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್‌ಎಂ) ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ರೈಲ್ವೆ ಚಾಲಕರ ಸಂಘಟನೆ ಆಲ್ ಇಂಡಿಯಾ ಲೋಕೋ ರನ್ನಿಂಗ್ ಸ್ಟಾಫ್ ಅಸೋಸಿಯೇಶನ್ (ಎಐಎಲ್‌ಆರ್‌ಎಸ್‌ಎ) ನೇತೃತ್ವದಲ್ಲಿ ರೈಲ್ವೆ ಲೋಕೋ ಪೈಲಟ್ ಸಿಬ್ಬಂದಿ, ಕುಟುಂಬಸ್ಥರು ಶನಿವಾರ ಮಂಗಳೂರು ಜಂಕ್ಷನ್ ನಿಲ್ದಾಣ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಲೋಕೋ ಪೈಲಟ್‌ಗಳಿಗೆ ವಿಶ್ರಾಂತಿ ಎಂಬುದೇ ಇಲ್ಲ. ದಿನವಿಡೀ ದುಡಿಯುವುದು ಅನಿವಾರ್ಯವಾಗಿದೆ ಎಂದು ಆಪಾದಿಸಿದ ಪ್ರತಿಭಟನಾಕಾರರು ಮಂಗಳೂರು ದಕ್ಷಿಣ ರೈಲ್ವೆ ಸಿಸಿಆರ್‌ಎಂ ಅಧಿಕಾರಿಯನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.
ಲೋಕೋ ಪೈಲಟ್‌ಗಳು ರಾತ್ರಿ-ಹಗಲು ಎನ್ನದೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ತುರ್ತು ಸಂದರ್ಭ ರಜೆ ಕೇಳಿ ದಾಗ ಸಿಸಿಆರ್‌ಎಂ ಅಧಿಕಾರಿಗಳು ರಜೆ ನಿರಾಕರಿಸುತ್ತಾರೆ. ಸಂಬಳಕ್ಕೆ ಕತ್ತರಿ ಹಾಕುತ್ತಾರೆ. ಇದರಿಂದ ಕುಟುಂಬದ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಆಪಾದಿಸಿದರು.
ಇತ್ತೀಚೆಗೆ ಒಬ್ಬ ಲೋಕೋ ಪೈಲಟ್ ಸಿಬ್ಬಂದಿಯ ಮಗ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಅಧಿಕಾರಿಗಳು ರಜೆ ನಿರಾಕರಿಸಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ತಂದೆಯನ್ನು ಆಸ್ಪತ್ರೆಗೆ ಕರೆದು ಹೋದ ಸಿಬ್ಬಂದಿಗೆ 23 ದಿನದ ವೇತನ ಕಡಿತ ರಜೆ ಹಾಕಿದ್ದಾರೆ ಎಂದು ಆರೋಪಿಸಿದರು.
ನಾವು ಸಮಯ ಮತ್ತು ಶಕ್ತಿಮೀರಿ ದುಡಿಯುತ್ತಿದ್ದೇವೆ. ತುರ್ತು ರಜೆ ಕೇಳಿದಾಗ ಅಧಿಕಾರಿಗಳು ದರ್ಪದಿಂದ ಮಾತನಾಡುತ್ತಾರೆ. ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಮಾನಸಿಕ ಹಿಂಸೆ ನೀಡುತ್ತಾರೆ ಎಂದು ಪ್ರತಿಭಟನಾ ನಿರತರು ಭಿತ್ತಿಪತ್ರ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಆಲ್ ಇಂಡಿಯಾ ಲೋಕೊ ರನ್ನಿಂಗ್ ಸ್ಟಾಫ್ ಅಸೋಸಿಯೇಶನ್ ಡಿವಿಷನ್ ಅಧ್ಯಕ್ಷ ಪಿ.ಕೆ. ಅಶೋಕ್ ಮಾತನಾಡಿ, ರೈಲ್ವೆ ಡಿಆರ್‌ಎಂಗೆ ಈ ಅನ್ಯಾಯದ ವಿರುದ್ಧ ಮನವಿ ಸಲ್ಲಿಸಲಿದ್ದೇವೆ. ಇದಕ್ಕೆ ಸ್ಪಂದಿಸದಿದ್ದರೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.