
ಉರುಳಿದ ಕೋಳಿ ಸಾಗಾಟದ ವಾಹನ: ಚಿಕನ್ ಪ್ರಿಯರಿಗೆ ಸುಗ್ಗಿ
Saturday, February 8, 2025
ವಿಟ್ಲ: ಕೋಳಿ ಸಾಗಾಟದ ಪಿಕಪ್ ವಾಹನವೊಂದು ಪಲ್ಟಿಯಾದ ಘಟನೆ ಕನ್ಯಾನ-ಕುಳಾಲು-ಸಾಲೆತ್ತೂರು ಸಂಪರ್ಕದ ಕಳೆಂಜಿಮಲೆ ರಕ್ಷಿತಾರಣ್ಯದ ಒಳರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಮಿಳುನಾಡು ನೋಂದಣಿಯ ಪಿಕಪ್ ಟೆಂಪೋ ಇದಾಗಿದ್ದು, ಕನ್ಯಾನ ಜಂಕ್ಷನ್‌ನಿಂದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಹಾದು ಹೋಗುವ ತೀರಾ ಕಡಿದಾದ ಏರು ರಸ್ತೆಯಲ್ಲಿ, ಮುಂದಿನಿಂದ ಬರುತ್ತಿದ್ದ ಇನ್ನೊಂದು ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ರಸ್ತೆ ಬದಿಗೆ ಪಲ್ಟಿಯಾಗಿದೆ.
ವಾಹನದಲ್ಲಿದ್ದ ಕೋಳಿಗಳಲ್ಲಿ ಕೆಲವು ಸಾವನ್ನಪ್ಪಿದ್ದು, ಸ್ಥಳೀಯರು ಮುಗಿಬಿದ್ದು ಕೋಳಿಗಳ ಹೊತ್ತೊಯ್ದ ದೃಶ್ಯಗಳು ಕಂಡು ಬಂದವು. ಚಿಕನ್ ಪ್ರಿಯರಿಗೆ ಅನಾಯಾಸವಾಗಿ ಹಬ್ಬದೂಟ ಸಿಕ್ಕಿದೆ. ಕ್ರೇನ್ ಮೂಲಕ ವಾಹನವನ್ನು ಮೇಲಕ್ಕೆತ್ತಲಾಗಿದೆ.