
ಉದ್ಘಾಟನೆಗೊಂಡಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿ ಮರು ಉದ್ಘಾಟನೆಗೆ ಹುನ್ನಾರ: ಶಾಸಕ ಕಾಮತ್ ಆಕ್ರೋಶ
ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಮಂಗಳಾದೇವಿಯಲ್ಲಿ ನಾಲ್ಕೈದು ದಿನಗಳ ಹಿಂದೆ ಶಿಷ್ಟಾಚಾರದ ಪ್ರಕಾರವೇ ಉದ್ಘಾಟನೆಗೊಂಡಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿ, ಮರು ಉದ್ಘಾಟನೆ ನಡೆಸಲು ಹುನ್ನಾರ ನಡೆದಿರುವ ಕ್ರಮಕ್ಕೆ ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ವತಿಯಿಂದ ಗೌರವಾನ್ವಿತ ಮೇಯರ್ ಅವರು ಶಿಷ್ಟಾಚಾರದ ಪ್ರಕಾರವೇ ನಡೆದುಕೊಂಡಿದ್ದು ಯಾವುದೇ ಲೋಪವಾಗಿಲ್ಲ. ಶಿಷ್ಟಾಚಾರ ಉಲ್ಲಂಘನೆ ನೆಪದಲ್ಲಿ ಬಡಪಾಯಿ ನೌಕರರ ಮೇಲೆ ಕ್ರಮ ಕೈಗೊಳ್ಳುವಂತೆ ಹಾಗೂ ಕೆಲಸದಿಂದ ತೆಗೆದು ಹಾಕುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿರುವುದು ಅಧಿಕಾರದ ಮದವಾಗಿದೆ. ಅಲ್ಲದೇ ಆರೋಗ್ಯ ಸಚಿವರಾದವರು ಆರೋಗ್ಯ ಕೇಂದ್ರವನ್ನು ತೆರೆಸಬೇಕು ಹೊರತು ಮುಚ್ಚುವುದಲ್ಲ. ಕೇವಲ ತಮ್ಮ ಸ್ವಪ್ರತಿಷ್ಠೆಗಾಗಿ ಒಂದು ಆರೋಗ್ಯ ಕೇಂದ್ರವನ್ನೇ ಬಂದ್ ಮಾಡಿ, ಸಾರ್ವಜನಿಕರನ್ನು ಹೊರ ಹಾಕಿ ಮರು ಉದ್ಘಾಟನೆ ಮಾಡುತ್ತೇವೆ ಎನ್ನುತ್ತಿರುವ ಪ್ರಕರಣ ಇಡೀ ರಾಜ್ಯದ ಇತಿಹಾಸದಲ್ಲೇ ಮೊದಲು. ಅಂತಹ ಕೆಟ್ಟ ದಾಖಲೆಯೊಂದು ಕಾಂಗ್ರೆಸ್ ಸರ್ಕಾರದಲ್ಲಿ ದಾಖಲಾಗುತ್ತಿದೆ ಎಂದರು.
ಇಲ್ಲಿನ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಕ್ಷೇತ್ರದ ಜವಾಬ್ದಾರಿಯುತ ಶಾಸಕನಾಗಿ ಕಾಮಗಾರಿಗೆ ಸಂಬಂಧಪಟ್ಟ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಸ್ಥಳಕ್ಕೆ ಕರೆತಂದು ಮುತುವರ್ಜಿ ವಹಿಸಿದ್ದೆ. ಅಲ್ಲದೇ ಸ್ಥಳೀಯ ಪಾಲಿಕೆ ಸದಸ್ಯ ಪ್ರೇಮಾನಂದ ಶೆಟ್ಟಿ, ಹಾಗೂ ಅಂದಿನ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ರವರು ಸಹ ವಿಶೇಷ ಆಸಕ್ತಿ ವಹಿಸಿದ್ದರ ಫಲವಾಗಿ ಇಂದು ಕ್ಷೇತ್ರದ ಜನತೆಗೆ ಅನುಕೂಲವಾಗಿದೆ. ಆದರೆ ಇದರಲ್ಲೂ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿರುವುದಕ್ಕೆ ಸಾರ್ವಜನಿಕರೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಾಳೆಯಿಂದ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಈವರೆಗೂ ಯಾವೆಲ್ಲಾ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿಲ್ಲವೋ ಆ ಎಲ್ಲಾ ಕಾರ್ಯಕ್ರಮಗಳೂ ಮರು ಉದ್ಘಾಟನೆಯಾಗಲಿ, ಆ ಮೂಲಕ ಜಿಲ್ಲೆಯಲ್ಲಿ ಕೆಟ್ಟ ಸಂಪ್ರದಾಯ ಆರಂಭವಾಗಲಿ ಎಂದು ಆಕ್ರೋಶದಿಂದ ನುಡಿದರು.