
ಹೆದ್ದಾರಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿಗಳಿಂದ ಖಾಸಗಿ ಜಮೀನು ವಶಕ್ಕೆ ಹುನ್ನಾರ: ಆರೋಪ
Friday, February 14, 2025
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಕಾರ್ಕಳದಿಂದ ಮಂಗಳೂರುವರೆಗೆ ನಡೆಸುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಯನ್ನು ಕಾನೂನು ರೀತಿಯಲ್ಲಿ ನಡೆಸದೆ ಅನ್ಯಾಯವೆಸಗುತ್ತಿರುವುದರ ಬಗ್ಗೆ ಮೂಡುಬಿದಿರೆ ಅಲಂಗಾರು ಉಳಿಯದ ಭದ್ರ ಸಾ ಮಿಲ್‌ನ ಆಡಳಿತದಾರರು ಅಬ್ದುಲ್ ಖಾದರ್, ಮಹಮ್ಮದ್ ಹನೀಫ್ ಹಾಗೂ ಸ್ಥಳೀಯರಾದ ವಿಶ್ವಮೂರ್ತಿ ಆಚಾರ್ಯ ಆರೋಪಿಸಿದ್ದಾರೆ.
ಅವರು ಶುಕ್ರವಾರ ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿ ನಿರ್ಮಾಣಕ್ಕೆ ಸ್ವಾಧೀನವಾಗಿರುವ ಸರ್ವೇ ನಂಬ್ರ 204, 206, 207, 240/2ಎ ಜಮೀನುಗಳನ್ನು ಬಳಸಿಕೊಳ್ಳದೆ ಹೆದ್ದಾರಿ ವ್ಯಾಪ್ತಿಗೆ ಬಾರದ ಭದ್ರ ಸಾ ಮಿಲ್ ಹಾಗೂ ಸ್ಥಳೀಯ ಓರ್ವರ ಮನೆಯ ಜಾಗವನ್ನು ಅತಿಕ್ರಮಿಸಲು ಹುನ್ನಾರ ನಡೆಸುತ್ತಿರುವ ಬಗ್ಗೆ ದೂರಿದರು.
ಇದೇ ಪರಿಸರದಲ್ಲಿ ಭೂಸ್ವಾಧೀನವಾದ ಜಾಗಕ್ಕೆ ಪರಿಹಾರ ನೀಡಲಾಗಿದೆ, ಆದರೆ ಅಲ್ಲಿಯ ಜಾಗವನ್ನು ರಸ್ತೆಗೆ ಬಳಸಲಾಗುತ್ತಿಲ್ಲ, ಹಾಗಾದರೆ ಸುಮಾರು ಒಂದೂವರೆ ಕೋಟಿಯಷ್ಟು ಬಿಡುಗಡೆಯಾದ ಪರಿಹಾರ ಮೊತ್ತದ ಲಾಭವನ್ನು ಯಾರು ಪಡೆದುಕೊಂಡಿರಬಹುದು ಎಂದು ಪ್ರಶ್ನಿಸಿದ ಅವರು ಕೇವಲ ಎರಡು ಸೆನ್ಸ್ ಜಾಗ ಇರುವ ವಿಶ್ವಮೂರ್ತಿ ಆಚಾರ್ಯ ಎಂಬವರ ಜಾಗವನ್ನೂ ಅಧಿಕಾರಿಗಳು ಬಿಡುತ್ತಿಲ್ಲವೆಂದು ಆಪಾದಿಸಿದ್ದಾರೆ.
ಭೂಸ್ವಾಧೀನದ ಹಿಂದಿನ ನಕ್ಷೆಯಂತೆ ರಸ್ತೆ ಕೆಲಸವಾಗುತ್ತಿಲ್ಲ, ಕೆಲವರ ಜಮೀನುಗಳನ್ನು ಉಳಿಸಲು ಹೋಗಿ ಓರೆಕೋರೆಯಾಗಿ ರಸ್ತೆ ನಿರ್ಮಾಣವಾಗಲಿದೆ, ರಾಷ್ಟ್ರೀಯ ಹೆದ್ದಾರಿ ಈ ರೀತಿ ಓರೆಕೋರೆಯಾಗಿ ನಿರ್ಮಾಣವಾದರೆ ಅಪಘಾತಗಳ ಅಪಾಯವೂ ಇದೆ ಎಂದರು.
ಭದ್ರಾ ಸಾ ಮಿಲ್‌ಗೆ ಭೂ ಸ್ವಾಧೀನಾಧಿಕಾರಿಗಳಿಂದ ಅನ್ಯಾಯವಾಗುತ್ತಿದೆ, ಇದರಿಂದ ಹಲವು ಉದ್ಯೋಗಿಗಳು, ವ್ಯಾಪಾರಿಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ, ಪ್ರಸ್ತಾಪದಲ್ಲೇ ಇರದ ಭದ್ರಾ ಸಾ ಮಿಲ್ ಇರುವ ಜಾಗವನ್ನು ಬಿಟ್ಟು ಈಗಾಗಲೇ ಸ್ವಾಧೀನಪಡಿಸಿಕೊಂಡ ಜಾಗದಲ್ಲೇ ರಸ್ತೆ ನಿರ್ಮಾಣವಾಗಲಿ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ನಾವು ಕಾನೂನು ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಆತಂಕ ವ್ಯಕ್ತ ಪಡಿಸಿದರು. ಅಧಿಕಾರಿಗಳು ಈ ಮೂಲಕ ಕಮಿಷನ್ ದಂಧೆ ನಡೆಸುವ ಬಗ್ಗೆಯೂ ಗುಮಾನಿ ವ್ಯಕ್ತ ಪಡಿಸಿದರು.