ಪ್ರತಿಯೊಬ್ಬರೂ ಸಂಘಟಿತರಾದರೆ ಮಾತ್ರ ಸಮುದಾಯ ಬಲಗೊಳ್ಳುತ್ತದೆ: ಸದಾಶಿವ ಉಳ್ಳಾಲ್

ಪ್ರತಿಯೊಬ್ಬರೂ ಸಂಘಟಿತರಾದರೆ ಮಾತ್ರ ಸಮುದಾಯ ಬಲಗೊಳ್ಳುತ್ತದೆ: ಸದಾಶಿವ ಉಳ್ಳಾಲ್


ಮಂಗಳೂರು: ಲಂಬಾಣಿ ಸಮಾಜಕ್ಕೆ ಸೇವಾಲಾಲ್ ನೀಡಿದ ಕೊಡುಗೆ ಅಪಾರ. ಸೇವಾಲಾಲ್ ಉತ್ತಮ ಸಮಾಜದ ನಿರ್ಮಾಣಕ್ಕೆ, ಲಂಬಾಣಿ ಸಮಾಜಕ್ಕೆ ಸವಲತ್ತುಗಳನ್ನು ಒದಗಿಸುವಲ್ಲಿ, ಹಾಗೂ ಸಮುದಾಯವನ್ನು ಗುರುತಿಸುವಲ್ಲಿ ಅವರ ಕೊಡುಗೆ ಅಪಾರವಾದದ್ದು. ಪ್ರತಿಯೊಬ್ಬರೂ ಸಂಘಟಿತರಾದರೆ ಮಾತ್ರ ಸಮುದಾಯ ಇನ್ನಷ್ಟು ಬಲಿಷ್ಠಗೊಳ್ಳುತ್ತದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಶ್ರೀ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘದ ಸಹಕಾರದೊಂದಿಗೆ ಫೆ.16 ರಂದು ಶ್ರೀ ಸಂತ ಸೇವಾಲಾಲ್ ಜಯಂತಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.


ಉಪನ್ಯಾಸ ನೀಡಿದ ಪೆರ್ಮುದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ರಾಥೋಡ್ ಮಾತನಾಡಿ, ಬಂಜಾರ ಸಮುದಾಯಕ್ಕೆ ಸೇವಾಲಾಲ್ ಮಹತ್ತರ ಕೊಡುಗೆ ನೀಡಿದ್ದಾರೆ. ಸಮಾಜ ಸುಧಾರಕ ಶಕ್ತಿಪುರುಷ ಸಂತ ಸೇವಾಲಾಲ್ ಬಡವರ ಸೇವೆಗಾಗಿ ಶ್ರಮಿಸಿ, ಮೂಢನಂಬಿಕೆ ಕೆಟ್ಟ ವಿಚಾರಗಳ ವಿರುದ್ಧ ಧ್ವನಿ ಎತ್ತಿದವರು. ಬಂಜಾರ ಸಮುದಾಯದ ಶ್ರೇಯಸ್ಸಿಗಾಗಿ ಅಸ್ಪೃಶ್ಯತೆ, ಜಾತಿ ಪದ್ಧತಿ ವಿರುದ್ಧ ಹೋರಾಟ ಮಾಡಿದ್ದರು. ಬಂಜಾರ ಸಮುದಾಯಕ್ಕೆ ಶಿಕ್ಷಣದ ಮಹತ್ವವನ್ನು ಅರ್ಥ ಮಾಡಿಸುವಲ್ಲಿ ಸೇವಾಲಾಲ್‌ರ ಪಾತ್ರ ಅಪಾರ ಎಂದರು.

ಈ ನಾಡಿನಲ್ಲಿ ತನ್ನದೇ ಆದಂತಹ ಒಂದು ಸಂಸ್ಕೃತಿ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಸಮುದಾಯಗಳಲ್ಲಿ ಬಂಜಾರ ಸಮುದಾಯವೂ ಕೂಡ ಒಂದು. ಭವ್ಯ ಸಂಸ್ಕೃತಿ ಹೊಂದಿರುವ ಬಂಜಾರ ಸಮುದಾಯದವರು ಇತ್ತೀಚಿಗೆ ಕೇವಲ ವ್ಯಾಪಾರದ ಕಡೆಗೆ ಗಮನಹರಿಸುತ್ತಿದ್ದಾರೆ. ವ್ಯಾಪಾರದ ಜೊತೆಗೆ ಸಂಸ್ಕೃತಿಯನ್ನು ಉಳಿಸಲು ಹೆಚ್ಚಿನ ಗಮನ ಕೊಡುವುದು ಅಗತ್ಯ. ಸಂಘಟನಾತ್ಮಕವಾಗಿ ಸಮುದಾಯ ಇನ್ನಷ್ಟು ಬೆಳವಣಿಗೆಯಾಗಬೇಕು ಎಂದು ಹೇಳಿದರು.

ಕರಾವಳಿ ಶ್ರೀ ಸೇವಾಲಾಲ್ ಬಂಜಾರ ಸಂಘದ ಅಧ್ಯಕ್ಷ ರಾಜಪ್ಪ, ಕರಾವಳಿ ಶ್ರೀ ಸೇವಾಲಾಲ್ ಬಂಜಾರ ಸಂಘದ ಗೌರವಾಧ್ಯಕ್ಷ ಜಯಪ್ಪ ಲಮಾಣಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿ, ಬಬಿತಾ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article