
ಪುತ್ತೂರು ದೇವಳದಲ್ಲಿ ತಾಂಬೂಲ ಪ್ರಶ್ನಾಚಿಂತನೆ: ಜಾಗ ಬಿಟ್ಟುಕೊಡದವರಿಗೆ ಕಾದಿದೆ ಅನಿಷ್ಠ..!
ಪುತ್ತೂರು: ದೇವಳದ ಜಾಗದಲ್ಲಿ ವಾಸ್ತವ್ಯವಿದ್ದವರು ಬಿಟ್ಟು ಹೋಗುವ ಸಂದರ್ಭ ಅವರೇ ಪರಿಹಾರ ನೀಡಬೇಕಾಗಿತ್ತು. ದೇವಳದ ಆಸ್ತಿಯಲ್ಲಿದ್ದವರಿಗೆ ದುಪ್ಪಟ್ಟು ಹಣ ನೀಡಿರುವುದು ದೇವರಿಗೆ ಕೋಪ ತಂದಿದೆ. ಜಾಗ ಬಿಟ್ಟುಕೊಡದೇ ಇರುವವರಿಗೆ ಅನಿಷ್ಠ ಕಾದಿದೆ. ಇದು ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ತಾಂಬೂಲಪ್ರಶ್ನಾ ಚಿಂತನೆ ಕಂಡು ಬಂದ ವಿಚಾರ.
ಪುತ್ತೂರು ದೇವಳದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ನಿಟ್ಟೆ ಪ್ರಸನ್ನ ಆಚಾರ್ಯ ಅವರ ನೇತೃತ್ವದಲ್ಲಿ ಭಾನುವಾರ ತಾಂಬೂಲ ಪ್ರಶ್ನಾಚಿಂತನೆ ನಡೆಯಿತು. ಮೊದಲು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಬಳಿಕ ಅನ್ನಛತ್ರದಲ್ಲಿ ಪ್ರಶ್ನಾಚಿಂತನೆ ನಡೆಸಲಾಯಿತು.
ಪುತ್ತೂರು ದೇವಳದ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡು ಮುನ್ನುಡಿ ಇಟ್ಟ ಸಂದರ್ಭ ಸುಮಾರು 9 ಮನೆಗಳನ್ನು ತೆರವು ಮಾಡಬೇಕಾಯಿತು. ಈ ಸಂದರ್ಭ ಕೆಲವರು ಪ್ರತಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂತು. ದೇವಳದಿಂದ ಪರಿಹಾರ ಪಡೆದುಕೊಂಡವರು ದೇವರಿಗೆ ಋಣಿಯಾಗಿರಬೇಕು. ಕೆಲಸ ಕಾರ್ಯಕ್ಕೆ ಹೊರಡುವಾಗ ಅನಿಷ್ಠ ಎದುರಾಗುತ್ತದೆ. ಇದಕ್ಕಾಗಿ ಮೃತ್ಯುಂಜಯ ಶಾಂತಿಹೋಮ ಮಾಡಬೇಕು ಎಂದು ಚಿಂತನೆಯಲ್ಲಿ ಕಂಡುಬಂತು.
ದೇವರಿಗೆ ಈ ಜಾಗವನ್ನು ಬಿಟ್ಟುಕೊಡಬೇಕು ಎಂದು ಮೊದಲಿನಿಂದಲೂ ಇದೆ. ಅದನ್ನು ದೇವರಿಗೆ ಉಚಿತವಾಗಿ ಬಿಟ್ಟುಕೊಡಬೇಕಿತ್ತು. ಸಂಪತ್ತನ್ನು ಬೇರೆಯವರಿಗೆ ನೀಡುವುದಕ್ಕೆ ದೇವರ ಒಪ್ಪಿಗೆ ಇಲ್ಲ. ಈ ಮೊತ್ತವನ್ನು ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಿತ್ತು. ದೇವರ ಸಪ್ತಪ್ರಾಕಾರವನ್ನು ಸಂರಕ್ಷಿಸುವ ಅಗತ್ಯವಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ದೇವಸ್ಥಾನಕ್ಕೆ ಹಿಂತಿರುಗಿಸುವುದು ಉತ್ತಮ. ಸರ್ಪಭಾದೆಗೆ ಅಗತ್ಯ ಕ್ರಮ ಹಾಗೂ ಮೃತ್ಯುಂಜಯ ಶಾಂತಿ ಮಾಡಬೇಕು ಎಂಬುವುದು ಪ್ರಶ್ನಾಚಿಂತೆಯಲ್ಲಿ ಕಂಡುಬಂದಿದೆ.
ಅಶುದ್ಧ-ಪರಿಹಾರ:
ದೇವಳದ ಪರಿಸರದಲ್ಲಿ ಮಾಡಿರುವ ಕೆಲವು ಕೆಲಸ ಕಾರ್ಯಗಳಿಂದ ದೇವಳದ ಪಾವಿತ್ರ್ಯತೆಗೆ ಅಶುದ್ಧವಾಗಿದೆ. ದೇವಸ್ಥಾನದ ಪರಿಸರ ಮನುಷ್ಯ ವಾಸಕ್ಕಿರುವ ಪ್ರದೇಶವಲ್ಲ. ಆ ಸ್ಥಳ ದೇವಸ್ಥಾನದ ಉತ್ಸವಗಳಿಗೆ ಬಳಕೆಯಾಗಬೇಕಾಗಿದೆ. ಇದಕ್ಕೆಲ್ಲಾ ಸರಿಯಾದ ಪರಿಹಾರ ಕಾರ್ಯ ನಡೆಸಬೇಕು ಎಂದು ಪ್ರಶ್ನೆಯಲ್ಲಿ ಕಂಡುಬಂತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಶಾಸಕ ಅಶೋಕ್ ರೈ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು ತಾಂಬೂಲಪ್ರಶ್ನಾ ಚಿಂತನಾ ಕಾರ್ಯದಲ್ಲಿ ಭಾಗಿಯಾಗಿದ್ದರು.