
ಅಡಿಕೆಗೆ ಪರ್ಯಾಯವಾಗಿ ಕಾಫಿ-ಸರಕಾರದಿಂದಲೇ ಪ್ರಾಯೋಗಿಕ ಬೆಳೆಗೆ ಚಿಂತನೆ: ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ಅಡಿಕೆ ಬೆಳೆಯನ್ನು ಕಾಡುವ ಕೊಳೆ ರೋಗ, ಹಳದಿ ರೋಗ, ಎಲೆಚುಕ್ಕಿ ರೋಗ ಮೊದಲಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿ ಪರ್ಯಾಯ ಬೆಳೆಯಾಗಿ ಕಾಫಿಯನ್ನು ಬೆಳೆಸುವ ರೈತರಿಗೆ ಪ್ರೋತ್ಸಾಹ ನೀಡುವ ಜತೆಗೆ ತೋಟಗಾರಿಕಾ ಇಲಾಖೆಯಿಂದ ಪ್ರಾಯೋಗಿಕವಾಗಿ ಕಾಫಿಯನ್ನು ಬೆಳೆಸುವ ಚಿಂತನೆ ಅಗತ್ಯವಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿಯ ಮುಂದುವರಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಅಡಿಕೆ ಬೆಳೆಯ ಸಮಸ್ಯೆ ಕುರಿತಾದ ಚರ್ಚೆಯ ವೇಳೆ ಈ ಪ್ರತಿಕ್ರಿಯೆ ನೀಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿಯವರು ಸಭೆಯಲ್ಲಿ ಅಡಿಕೆ ಬೆಳೆಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು. ಅಡಿಕೆ ಬೆಳೆಯನ್ನು ಕಾಡುವ ರೋಗಗಳ ಬಗ್ಗೆ ಕಳೆದ 30 ವರ್ಷಗಳಿಂದ ಚರ್ಚೆಯಾಗುತ್ತಿದ್ದರೂ ಪರಿಹಾರವಾಗುತ್ತಿಲ್ಲ ಎಂದರು.
ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್ ಪ್ರತಿಕ್ರಿಯಿಸಿ, ಮಡಿಕೇರಿ, ಚಿಕ್ಕಮಗಳೂರು ಮಾತ್ರವಲ್ಲದೆ, ದ.ಕ. ಜಿಲ್ಲೆಯಲ್ಲಿಯೂ ಅಡಿಕೆಗೆ ಪರ್ಯಾಯವಾಗಿ ಕಾಫಿ
ಬೆಳೆಯಲು ಪ್ರದೇಶ ವಿಸ್ತರಣೆಯಡಿ ಅನುದಾನ ನೀಡುವ ಬೇಡಿಕೆ ಬೇಡಿಕೆ ವ್ಯಕ್ತವಾಗಿದೆ.
ದ.ಕ. ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ಭಾಗದಲ್ಲಿ ಕಾಫಿ ಬೆಳೆಯಲು ರೈತರು ಆಸಕ್ತಿ ತೋರಿದ್ದಾರೆ. ಕಾಫಿ ಮಂಡಳಿಯೂ ಈ ಬಗ್ಗೆ ಅಧ್ಯಯನ ನಡೆಸುತ್ತಿದೆ ಎಂದರು.
ಈ ಸಂದರ್ಭ ಶಾಸಕಿ ಭಾಗೀರಥಿ ಮುರಳ್ಯ ಪ್ರತಿಕ್ರಿಯಿಸಿ, ಪ್ರಾಯೋಗಿಕವಾಗಿ ಸರಕಾರದ ವತಿಯಿಂದ ಜಿಲ್ಲೆಯಲ್ಲಿ ಕಾಫಿ ಬೆಳೆ ಸಾಧುವೇ ಎಂಬುದನ್ನು ಬೆಳೆದು ನೋಡುವುದು ಸೂಕ್ತ. ಜತೆಗೆ ಬೆಂಬಲವನ್ನೂ ಕೃಷಿಕರಿಗೆ ಒದಗಿಸಬೇಕು ಎಂದಾಗ ಉಸ್ತುವಾರಿ ಸಚಿವರು ಸಹಮತ ವ್ಯಕ್ತಪಡಿಸಿದರು.
ರಾಜ್ಯದೆಲ್ಲೆಡೆ ರೈತರು ತಮ್ಮ ಬೆಳೆಗಳಿಗೆ ಅಧಿಕ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಸುತ್ತಿರುವುದರಿಂದ ಮಣ್ಣಿನ ಮೂಲಕ ಅಲ್ಯುಮಿನಿಯಂ ಅಂಶ ನದಿಗಳಿಗೆ ಸೇರ್ಪಡೆಯಾಗುತ್ತಿದೆ. ಈಗಾಗಲೇ ತುಂಗಾ ನದಿಯ ಅಧ್ಯಯನ ಸಂದರ್ಭ ಈ ವಿಷಯ ಪತ್ತೆಯಾಗಿದೆ. ಹಾಗಾಗಿ ರಸಗೊಬ್ಬರ ಬಳಕೆಗೆ ಸಂಬಂಧಿಸಿ ರೈತರ ಕೃಷಿ ಭೂಮಿಯ ಮಣ್ಣಿನ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯಡಾ. ಧನಂಜಯ ಸರ್ಜಿ ಸಭೆಯ ಗಮನ ಸೆಳೆದರು.
ದ.ಕ. ಜಿಲ್ಲೆಯಲ್ಲಿ ಮಂಜೂರಾದ 2131೨ ಅಂಗನವಾಡಿ ಕೇಂದ್ರಗಳಲ್ಲಿ 1923 ಅಂಗನವಾಡಿಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಂಗಳೂರು ನಗರದಲ್ಲಿ 48 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಈಗಾಗಲೇ 3 ಅಂಗನವಾಡಿಗಳಿಗೆ ನಿವೇಶನ ಗುರುತಿಸಲಾಗಿದೆ. ಉಳಿದಂತೆ 45 ಅಂಗನವಾಡಿಗಳಿಗೆ ನಿವೇಶನದ ಅಗತ್ಯವಿದೆ. ಮಂಗಳೂರು ಗ್ರಾಮಾಂತರದಲ್ಲಿ 5 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿದ್ದು ಒಂದು ಕೇಂದ್ರಕ್ಕೆ ನಿವೇಶನ ದೊರಕಿದೆ ಎಂದು ಸಭೆಯಲ್ಲಿ ಚರ್ಚೆಯ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್ ತಿಳಿಸಿದರು.
ಜಿಲ್ಲೆಯಲ್ಲಿ 27,000 ವಾರ್ಷಿಕ ಹೆರಿಗೆಗಳಾಗುತ್ತಿದ್ದರೂ, ಮಾತೃ ವಂದನೆಯಡಿ 11,000ದಷ್ಟು ಮಾತ್ರವೇ ಫಲಾನುಭವಿಗಳು ಪ್ರಯೋಜನ ಪಡೆದಿರುವ ಬಗ್ಗೆ ಇಲಾಖಾ ಅಧಿಕಾರಿಗಳ ಮಾಹಿತಿಗೆ ಬೇಸರ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಫಲಾನುಭವಿಗಳಿಗೆ ಸೂಕ್ತ ಮಾಹಿತಿ ಇಲ್ಲದ ಕಾರಣ ರಾಜ್ಯದಲ್ಲಿ ಸುಮಾರು 65 ಕೋಟಿ ರೂ. ಕೇಂದ್ರಕ್ಕೆ ವಾಪಾಸು ಹೋಗುತ್ತಿದೆ. ಈ ಬಗ್ಗೆ ಮಾಹಿತಿ ಒದಗಿಸುವ ಕಾರ್ಯ ಆಗಬೇಕು ಎಂದು ಆಗ್ರಹಿಸಿದರು.
ಶಾಸಕರಾದ ರಾಜೇಶ್ ನಾಕ್, ವೇದವ್ಯಾಸ ಕಾಮತ್, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ನಾಮ ನಿರ್ದೇಶಿತ ಸದಸ್ಯರಾದ ಮೆಲ್ವಿನ್ ಡಿಸೋಜಾ, ಹಮೀದ್ ಕಿನ್ಯಾ, ಸಂತೋಷ ಕುಮಾರ್, ರಾಜೇಶೇಖರ ಜೈನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಪಂ ಸಿಇಒ ಡಾ. ಆನಂದ್, ಎಸ್ಪಿ ಯತೀಶ್ ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಉಪಸ್ಥಿತರಿದ್ದರು.