
ದ.ಕ. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ: ಕೊನೆಯಾಗದ ಸಮಸ್ಯೆ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಸೇರಿದಂತೆ ಮರಳುಗಾರಿಕೆ ಸಮಸ್ಯೆ ನಿವಾರಿಸುವ ಬಗ್ಗೆ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತಾದರೂ ಕೊನೆಗೂ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಪ್ರಸ್ತಾಪಿಸಿ, ಅವ್ಯಾಹತ ಮರಳುಗಾರಿಕೆಯಿಂದ ಸೇತುವೆಗಳ ಕಂಬವೇ ಹಾನಿಗೀಡಾಗುವಂತೆ ಆಗಿದೆ. ಗ್ರಾಮೀಣ ಭಾಗದಲ್ಲೂ ಇದೇ ಪರಿಸ್ಥಿತಿ ಇದೆ. ಪೊಲೀಸರಿಗೆ ಮಾಹಿತಿ ಇದ್ದೇ ಮರಳುಗಾರಿಕೆ ನಡೆಯುತ್ತಿದೆ. ಇದು ಹಗಲು ದರೋಡೆ ಆಗಿದೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಇದೊಂದು ಮುಗಿಯದ ಸಮಸ್ಯೆಯಾಗಿದ್ದು, ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.
ಸಿಆರ್‌ಝೆಡ್ ಅಧಿಕಾರಿ ಮಾತನಾಡಿ, ಸಿಆರ್‌ಝೆಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಅವಕಾಶ ಕೋರಿ ಕೇಂದ್ರ ಇಲಾಖೆಗೆ ಕಳುಹಿಸಲಾಗಿದೆ. ಅಲ್ಲಿಂದ ಅನುಮತಿ ಲಭಿಸಬೇಕಾಗಿದೆ ಎಂದರು.
ಮಧ್ಯಪ್ರವೇಶಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬೇರೆ ರಾಜ್ಯಗಳಲ್ಲಿ ಸಿಆರ್‌ಝೆಡ್‌ನಲ್ಲಿ ಮರಳುಗಾರಿಕೆಗೆ ಅನುಮತಿಸಲಾಗಿದೆ. ಇಲ್ಲಿಗೆ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ಉತ್ತರಿಸಿದರು.
ಗಣಿ ಅಧಿಕಾರಿಗೆ ತರಾಟೆ..
ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಸ್ಪಷ್ಟ ಉತ್ತರ ನೀಡಿದ ಇಲಾಖೆ ಅಧಿಕಾರಿಯನ್ನು ಉಸ್ತುವಾರಿ ಸಚಿವರು ತರಾಟೆಗೆ ಗುರಿಪಡಿಸಿದ ವಿದ್ಯಮಾನ ನಡೆಯಿತು.
ಸಿಆರ್‌ಝೆಡ್‌ಯೇತರ ಪ್ರದೇಶದಲ್ಲಿ 27 ಮರಳು ದಿಬ್ಬಗಳಿದ್ದು, 18 ದಿಬ್ಬಗಳಲ್ಲಿ ಮರಳುಗಾರಿಕೆ ನಡೆಯುತ್ತಿದೆ. 35 ಲಕ್ಷ ರು. ಆದಾಯ ಸಂಗ್ರಹವಾಗಿದೆ. ಮರಳು ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಅಕ್ರಮ ಮರಳುಗಾರಿಕೆ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಸಹಕಾರ ಸಿಗುತ್ತಿಲ್ಲ. ಅಲ್ಲದೆ ಜಿಲ್ಲಾಡಳಿತವೂ ಕಡತಗಳ ವಿಲೇವಾರಿಯಲ್ಲಿ ಸಹಕರಿಸುತ್ತಿಲ್ಲ ಎಂದು ಆರೋಪ ಮಾಡಿದರು. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಪೊಲೀಸ್ ಕಮಿಷನರ್ ಸ್ಪಷ್ಟನೆ ನೀಡಿದರೂ ಮತ್ತೆ ಮತ್ತೆ ಅಧಿಕಾರಿ ವಾದ ಮುಂದುವರಿಸಿದಾಗ ಸಿಟ್ಟಾದ ಉಸ್ತುವಾರಿ ಸಚಿವರು ತರಾಟೆಗೆ ತೆಗೆದುಕೊಂಡರು.
ಕೃಷಿಭೂಮಿ ಮುಳುಗಡೆ...
ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ನಿರ್ಮಿಸಲಾದ ಡ್ಯಾಂನಲ್ಲಿ 5.5 ಮೀಟರ್ ಬದಲಿಗೆ ಈ ಬಾರಿ 4.5 ಮೀಟರ್ಗೆ ನೀರು ನಿಲ್ಲಿಸಲಾಗಿದೆ, ಇದರಲ್ಲೇ ಬಂಟ್ವಾಳದ ಹಲವು ಎಕ್ರೆ ಕೃಷಿಭೂಮಿ ಜಲಾವೃತವಾಗಿದೆ ಎಂದು ಶಾಸಕ ರಾಜೇಶ್ ನಾಕ್ ಉಳಿಪಾಡಿ ಗಮನ ಸೆಳೆದರು. ಈ ಕುರಿತು ಕೃಷಿ ಅಧಿಕಾರಿಗಳಿಗೂ ಯಾವುದೇ ಮಾಹಿತಿ ಇಲ್ಲದ ಕಾರಣ ಸ್ಥಳಕ್ಕೆ ಭೇಟಿ ನೀಡುವಂತೆ ಹಾಗೂ ಎರಡು ದಿನದೊಳಗೆ ವರದಿ ನೀಡುವಂತೆ ಸಚಿವರು ಸೂಚಿಸಿದರು.
ಎಲ್ಲೆಲ್ಲಿ ಕೃಷಿ ಭೂಮಿಗೆ ನೀರು ನುಗ್ಗುತ್ತದೆಯೋ ಆ ಭಾಗಗಳಲ್ಲಿ ರಿಟೇನಿಂಗ್ ವಾಲ್ ನಿರ್ಮಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಸಮೀಕ್ಷೆ ನಡೆಸಿ ಡ್ಯಾಂ ನಿರ್ಮಿಸಿರುವಾಗಿ ನೀರು ಕೃಷಿಭೂಮಿಗೆ ನುಗ್ಗಿದರೆ ನೀರಾವರಿ ಇಲಾಖೆಯಿಂದಲೇ ಸೂಕ್ತ ಪರಿಹಾರ ಒದಗಿಸಬೇಕಾಗುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಎಸ್ಪಿ ಯತೀಶ್.ಎನ್, ಉಪಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ ಉಪಸ್ಥಿತರಿದ್ದರು.