
ಷೇರು ಮಾರುಕಟ್ಟೆ ಹೆಸರಿನಲ್ಲಿ ವಂಚನೆ: ಓರ್ವನ ಬಂಧನ
ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂದು ನಂಬಿಸಿ ಹಣ ವರ್ಗಾಯಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಕೋಯಿಕ್ಕೋಡು ಜಿಲ್ಲೆಯ ಅಚನ್ ಕಂಡಿಯಿಲ್ ಮಡವೂರು ಕುನ್ನಮಂಗಲಂ ಪೇರಿಂಗಲಂ ನಿವಾಸಿ ಜುನೈದ್ ಎ.ಕೆ. (32) ಎಂಬಾತನ್ನು ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೂರುದಾರರಿಂದ ಅಪರಿಚಿತ ವ್ಯಕ್ತಿಯೊಬ್ಬ ಹಂತಹಂತವಾಗಿ ಷೇರು ಮಾರುಕಟ್ಟೆಯ ಲಾಭದ ಬಗ್ಗೆ ಆಮಿಷ ನೀಡಿ, 46 ಲಕ್ಷ ರೂ. ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆದಾರರ ವಿವರವನ್ನು ಪರಿಶೀಲಿಸಿದಾಗ ಪಶ್ಚಿಮ ಬಂಗಾಲ ಮೂಲದ ವ್ಯಕ್ತಿಗೆ 10 ಲಕ್ಷ ರೂ. ವರ್ಗಾವಣೆಯಾಗಿರುವುದು ಕಂಡು ಬಂದಿದೆ. ಅನಂತರ ಕೇರಳದ ಕಲ್ಲಿಕೋಟೆ ಜಿಲ್ಲೆ ಕೊಡುವಲ್ಲಿ ಅಂಚೆ ಚಂದುಪರಪತ್ ನಿವಾಸಿ ಆಯಿಷಾ ಅವರ ಖಾತೆಗೆ 5 ಲಕ್ಷ ರೂ. ಜಮೆಯಾಗಿರುವುದು ತಿಳಿದು ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಆಕೆಯ ಗಂಡ ಜುನೈದ್ ಈ ಹಣವನ್ನು ವಿತ್‌ಡ್ರಾ ಮಾಡಿ ದುಬಾಯಲ್ಲಿರುವ ಬಾಬು ಎಂಬಾತನ ನಿರ್ದೇಶನದಂತೆ ಮನೀಬ್ ಎಂಬಾತನಿಗೆ ನೀಡಿದ್ದಾನೆ. ಆದಕ್ಕೆ ಪ್ರತಿಯಾಗಿ ೫ ಸಾ. ರೂ. ಕಮಿಷನ್ ಪಡೆದಿರುವುದು ತಿಳಿದು ಬಂದಿದೆ. ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಠಾಣಾಧಿಕಾರಿ ಎಸಿಪಿ ರವೀಶ್ ನಾಯಕ, ನಿರೀಕ್ಷಕ ಸತೀಶ್ ಎಂ.ಪಿ. ಮತ್ತು ಉಪ ನಿರೀಕ್ಷಕ ಮೋಹನ್ ನೇತೃತ್ವದಲ್ಲಿ ಪ್ರಕರಣದಲ್ಲಿ ಇನ್ನುಳಿದ ಆರೋಪಿತರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.