ಯುಎಸ್‌ಎದಲ್ಲಿರುವ ಭಾರತೀಯ ನಾಗರೀಕರನ್ನು ವಲಸಿಗ ಹೆಸರಿನಲ್ಲಿ ಅಮಾನವೀಯವಾಗಿ ಗಡೀಪಾರು ಮಾಡುತ್ತಿರುವ ಟ್ರಂಪ್ ಸರಕಾರದ ಕ್ರಮಕ್ಕೆ ಡಿವೈಎಫ್‌ಐ ಖಂಡನೆ

ಯುಎಸ್‌ಎದಲ್ಲಿರುವ ಭಾರತೀಯ ನಾಗರೀಕರನ್ನು ವಲಸಿಗ ಹೆಸರಿನಲ್ಲಿ ಅಮಾನವೀಯವಾಗಿ ಗಡೀಪಾರು ಮಾಡುತ್ತಿರುವ ಟ್ರಂಪ್ ಸರಕಾರದ ಕ್ರಮಕ್ಕೆ ಡಿವೈಎಫ್‌ಐ ಖಂಡನೆ

ಮಂಗಳೂರು: 104 ಭಾರತೀಯ ನಾಗರಿಕರನ್ನು ಯುನೈಟೆಡ್ ಸ್ಟೇಟ್ಸ್‌ನಿಂದ ಗಡೀಪಾರು ಮಾಡಲಾಗಿರುವ ಅಮಾನವೀಯ ನಡೆಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಪ್ರಕಟಣೆಯಲ್ಲಿ ಬಲವಾಗಿ ಖಂಡಿಸಿದೆ.

ಭಾರತೀಯ ನಾಗರೀಕರಿಗೆ ಮಿಸುಕಾಡಲೂ ಸಾಧ್ಯವಾಗದಂತೆ ಕೈಕೊಳ ಹಾಕಿ, ಅವರನ್ನು ಒತ್ತಾಯಪೂರ್ವಕವಾಗಿ ನಿರ್ಬಂಧಿಸಿ ಸುದೀರ್ಘವಾಗಿ ಯುಎಸ್ ಮಿಲಿಟರಿ ವಿಮಾನ  ಮತ್ತು ಹಡಗಿನಲ್ಲಿ ಪ್ರಾಣಿಗಳಿಗಿಂತ ಕಡೆಯಾಗಿ ಸಾಗಿಸಿರುವುದು ಮಾನವ ಘನತೆ ಮತ್ತು ಮಾನವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಅಮೇರಿಕಾದ ಈ ಕ್ರೂರ ನಡೆಯು ಶೋಚನೀಯವಾಗಿದ್ದು ಪ್ರತಿ ಭಾರತೀಯರು ಇದನ್ನು ಪ್ರಬಲವಾಗಿ ಖಂಡಿಸಬೇಕು.

ಭಾರತೀಯ ನಾಗರಿಕರ ಮೇಲಿನ ಈ ದೌರ್ಜನ್ಯದ ವಿರುದ್ದ ಧ್ವನಿ ಎತ್ತಿ ಆಕ್ಷೇಪಿಸುವಲ್ಲಿ ವಿಫಲವಾದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೌನವು ಅಷ್ಟೇ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಮೂಲಕ ಭಾರತೀಯ ವಲಸಿಗ ಜನರಿಗೆ ರಕ್ಷಣೆ ನೀಡುವಲ್ಲಿ ಮೋದಿ ಸರಕಾರದ ಉದ್ದೇಶಪೂರ್ವಕ ನಿರ್ಲಕ್ಷ್ಯ ಮನೋಭಾವವನ್ನು ಇದು ಬಹಿರಂಗಪಡಿಸಿದೆ. ಜಾಗತಿಕವಾಗಿ ಭಾರತೀಯ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಇಂತಹ ಸನ್ನಿವೇಶದಲ್ಲಿ ಕಠಿಣ ಗಡಿಪಾರು ಕ್ರಮಗಳಿಂದ ನಮ್ಮ ದೇಶದ ಜನರಿಗೆ ಕನಿಷ್ಠ ಗೌರವ ಮತ್ತು ಘನತೆಯನ್ನು ಖಚಿತಪಡಿಸಲು ವಿಫಲವಾಗಿರುವುದನ್ನು ಸಹಿಸಲು ಸಾಧ್ಯವಿಲ್ಲ.

ಭಾರತೀಯ ವಲಸಿಗರ ಹೆಚ್ಚಿನ ಬ್ಯಾಚ್‌ಗಳನ್ನು ಗಡಿಪಾರು ಮಾಡುತ್ತಿರುವ ಈ ಸಂದರ್ಭದಲ್ಲಿ ಭಾರತ ಸರ್ಕಾರವು ಯುಎಸ್ ಆಡಳಿತದೊಂದಿಗೆ ಮಧ್ಯೆಪ್ರವೇಶಿಸಿ, ನಮ್ಮ ದೇಶದ ನಾಗರಿಕರನ್ನು ಮಾನವೀಯ ಮತ್ತು ಗೌರವಾನ್ವಿತ ರೀತಿಯಲ್ಲಿ ಪರಿಗಣಿಸುವಂತಾಗಲು ಹಾಗೂ ಗಡಿಪಾರಿಗೊಳಗಾಗುವ ಜನರಿಗೆ ಅಗತ್ಯ ನ್ಯಾಯೋಚಿತ ಚಿಕಿತ್ಸೆಯನ್ನು ಒದಗಿಸಲು ಸೂಕ್ತ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು.

ಅಮೇರಿಕೆಯಲ್ಲಿ ನೆಲೆಸಿರುವ ನಮ್ಮ ದೇಶದ ನಾಗರಿಕರ ಮೇಲೆ ಯುಎಸ್‌ಎ ನಿಂದಾಗುತ್ತಿರುವ ಈ ಅನ್ಯಾಯಕಾರಿ ಕ್ರಮವನ್ನು ಭಾರತ ದೇಶವು ಸಹಿಸುವುದಿಲ್ಲ ಎಂಬ ಪ್ರಬಲವಾದ ಸಂದೇಶವನ್ನು ಭಾರತ ಸರಕಾರ ಕೂಡಲೇ ಟ್ರಂಪ್ ಸರಕಾರಕ್ಕೆ ನೀಡಬೇಕು. ಇಲ್ಲವಾದಲ್ಲಿ ಭಾರತೀಯ ವಲಸಿಗರ ಹಕ್ಕುಗಳು ಮತ್ತು ಘನತೆಯನ್ನು ರಕ್ಷಿಸಲು ತಕ್ಷಣದ ಸರ್ಕಾರದ ಕ್ರಮಕ್ಕಾಗಿ ಒತ್ತಾಯಿಸಲು, ಎಲ್ಲಾ ಪ್ರಜಾಪ್ರಭುತ್ವ ಮತ್ತು ಪ್ರಗತಿಪರ ಶಕ್ತಿಗಳು ಐಕ್ಯ ಚಳುವಳಿಗೆ ಮುಂದಾಗಬೇಕಾಗುವುದು ಅನಿವಾರ್ಯವಾಗುತ್ತದೆಂದು ಡಿವೈಎಫ್‌ಐ ಪ್ರಕಟಣೆಯಲ್ಲಿ ಎಚ್ಚರಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article