
ಡಾ. ಎಂ.ಎನ್.ಆರ್. ಮೊಳಹಳ್ಳಿ ಶಿವರಾಯರು, ಬಂಟ್ವಾಳ ನಾರಾಯಣ ನಾಯಕ್ ಅವರ ಸಾಲಿಗೆ ಸೇರುವ ಸಾಧನೆ ಮಾಡಿದ್ದಾರೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಡಾ. ಎಂ.ಎನ್. ರಾಜೇಂದ್ರ ಕುಮಾರ್ 76ನೇ ಹುಟ್ಟುಹಬ್ಬ ಆಚರಣೆ
ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ಗರಿಷ್ಠ ಸಂಖ್ಯೆಯ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಎಸ್‌ಸಿಡಿಸಿಸಿ ಬ್ಯಾಂಕ್ ವಿತರಿಸುವ ಸಾಧನೆ ಮಾಡಿದೆ. ಕಾರ್ನಾಡ್ ಸದಾಶಿವರಾಯರಂತಹ ಸ್ವಾತಂತ್ರ್ಯ ಹೋರಾಟಗಾರ, ಸಹಕಾರ ರಂಗದ ಮೇರು ವ್ಯಕ್ತಿತ್ವ, ಅದೇ ರೀತಿ ಮೊಳಹಳ್ಳಿ ಶಿವರಾಯರು, ಬಂಟ್ವಾಳ ನಾರಾಯಣ ನಾಯಕ್ ಅವರ ಸಾಲಿಗೆ ಸೇರುವ ಸಾಧನೆ ಮಾಡಿದ ಇವರು ಬ್ಯಾಂಕ್ ಅನ್ನು 15 ಸಾವಿರ ಕೋಟಿ ರೂ. ವ್ಯವಹಾರ ಮಾಡುವ ಬ್ಯಾಂಕ್ ಆಗಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಪರಿವರ್ತಿಸಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆದ ‘ಸಹಕಾರ ರತ್ನ’ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ 76ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಅಭಿನಂದನಾ ಭಾಷಣ ಮಾಡಿದರು.
ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸಹಕಾರಿ ಕ್ಷೇತ್ರದ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ ಎಂದ ಅವರು ಇದಕ್ಕಿಂತಲೂ ಹೆಚ್ಚಾಗಿ ಬಡವರ ಬಗ್ಗೆ ರಾಜೇಂದ್ರ ಕುಮಾರ್ ಹೊಂದಿರುವ ಕಳಕಳಿಯ ಕಾರಣ ಅವರ ಪ್ರೀತಿ ವಿಶ್ವಾಸ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಅವರ ಈ ರೀತಿಯ ಸಮಾಜಮುಖಿ ಕೆಲಸಗಳು ಇನ್ನಷ್ಟು ನಡೆಯಲಿ ಸಹಕಾರಿ ರಂಗವನ್ನು ಇನ್ನಷ್ಟು ಎತ್ತರಕ್ಕೆ ಏರಿಸುವಂತಾಗಲಿ ಎಂದು ಶುಭ ಹಾರೈಸಿದರು.
ಹುಟ್ಟು ಹಬ್ಬದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್, ನಾನು ಒಬ್ಬ ಸಾಮಾನ್ಯ ಮನುಷ್ಯ. ಮಾನವ ಜಾತಿ ದೊಡ್ಡ ಜಾತಿ, ಎಲ್ಲರನ್ನೂ ಮೇಲಕ್ಕೆತ್ತುವ ಕೆಲಸ ಮಾನವ ಜಾತಿಯ ಕೆಲಸ. ಮೊಳಹಳ್ಳಿ ಶಿವರಾಯರು ಗಟ್ಟಿ ತಳಹದಿ ಹಾಕಿದ ಸಹಕಾರಿ ಕ್ಷೇತ್ರ ಬೆಳೆದಿದೆ ಎಂದು ಹೇಳಿದರು.
ರೈತರ ಸಾಲ ನೂರಕ್ಕೆ ನೂರು ಮರುಪಾವತಿಯಾಗುತ್ತಿದೆ. ಸ್ವ-ಸಹಾಯ ಗುಂಪುಗಳಿಗೆ ಸಾಮೂಹಿಕ ಜವಾಬ್ದಾರಿಯಿಂದ ನೀಡುವ ಕಿರು ಸಾಲದಿಂದ ಗುಂಪಿನ ಸದಸ್ಯರಿಗೆ ಸಾಕಷ್ಟು ಸಹಾಯವಾಗಿದೆ. ಮೈಕ್ರೋ ಫೈನಾನ್ಸ್ ನಿಂದ ಎಲ್ಲಿ ಹಾನಿಯಾಗುತ್ತಿದೆ ಎನ್ನುವ ಬಗ್ಗೆ ಸರಕಾರ ಪರಿಶೀಲಿಸಬೇಕು. ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಹೊರರಾಜ್ಯದಿಂದ ಬಂದು ವೈಯಕ್ತಿಕವಾಗಿ ಗರಿಷ್ಠ ಬಡ್ಡಿಗೆ ನೀಡುವ ಮೈಕ್ರೋ ಫೈನಾನ್ಸ್‌ನಿಂದ ತೊಂದರೆಯಾಗಿದೆ.ಈ ಬಗ್ಗೆ ಪರಿಶೀಲನೆ ಮಾಡಬೇಕು ಆಗ ನಿಜವಾಗಿ ತೊಂದರೆ ಮಾಡುವವರು ಸಿಕ್ಕಿಬೀಳುತ್ತಾರೆ ಎಂದು ರಾಜೇಂದ್ರ ಕುಮಾರ್ ಹೇಳಿದರು.
ಎಲ್ಲಾ ಸೇರಿ ಸಹಕಾರಿ ತತ್ವದ ಮೂಲಕ ಜಿಲ್ಲೆಯ ಸಹಕಾರಿ ರಂಗ ಬೆಳೆದಿದೆ.ಜವಾಬ್ದಾರಿ ವಹಿಸಿಕೊಂಡ ನಂತರ ಅದನ್ನು ಸಮರ್ಥ ವಾಗಿ ನಿಭಾಯಿಸುವುದು ಮುಖ್ಯ. ಸಹಕಾರಿ ರಂಗ ಪವಿತ್ರ ಕ್ಷೇತ್ರ. ದೇಶದ ಖ್ಯಾತ ಬ್ಯಾಂಕ್ ಗಳು ಹುಟ್ಟಿದ ಕ್ಷೇತ್ರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಸಹಕಾರಿ ರಂಗ ತ್ವರಿತವಾಗಿ ಗ್ರಾಹಕರಿಗೆ ನೆರವು ನೀಡುತ್ತಿರುವ ಕಾರಣ ಸಹಕಾರಿ ಬ್ಯಾಂಕುಗಳು ಬೆಳೆದಿವೆ. ಎಲ್ಲರೂ ಬೆಳೆಯಬೇಕು ಎನ್ನುವುದು ಗುರಿ. ಮಹಿಳಾ ಸ್ವಾವಲಂಬನೆಗಾಗಿ ನವೋದಯ ಸ್ವ ಸಹಾಯ ಗುಂಪು ಸ್ಥಾಪನೆಯಾಗಿದೆ ಅಂತಿಮವಾಗಿ ಸಮಾಜ ಮುಖಿ ಕೆಲಸಗಳೊಂದಿಗೆ ಸಹಕಾರಿ ರಂಗ ಬೆಳೆಸೋಣ ಎಂದು ರಾಜೇಂದ್ರ ಕುಮಾರ್ ನುಡಿದರು.
ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಭಿನಂದನಾ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ ಮಾತನಾಡುತ್ತಾ, ಸಹಕಾರ ಕ್ಷೇತ್ರವನ್ನು ಸದೃಢಗೊಳಿಸುವ ಚಿಂತನೆಯೊಂದಿಗೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರಿಗಳೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಸಹಕಾರ ಕ್ಷೇತ್ರದ ಬೆಳವಣಿಗೆಗೆ ವಿಶೇಷ ಕಾರ್ಯಯೋಜನೆಯನ್ನು ಆಯೋಜಿಸಿ, ನಮಗೆಲ್ಲರಿಗೂ ಮಾರ್ಗದರ್ಶಕರಾದ ಡಾ. ರಾಜೇಂದ್ರ ಕುಮಾರ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ 76 ಮಂದಿ ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮವು ಈ ಸಂದರ್ಭದಲ್ಲಿ ಆಯೋಜನೆಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಸಹಕಾರಿ ರಂಗದ ಚಾಣಕ್ಯ,ಅಜಾತ ಶತ್ರು ರಾಜೇಂದ್ರ ಕುಮಾರ್, ಮೂವತ್ತು ವರ್ಷ ಒಂದು ಕ್ಷೇತ್ರದಲ್ಲಿದ್ದು, ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರ ನೀಡಿದವರು. ನನಗೆ ಮಾರ್ಗದರ್ಶಕರಾಗಿ ಹಲವಾರು ಮಂದಿಗೆ ಮಾರ್ಗದರ್ಶಕರಾಗಿ ಸಹಕಾರ ಮಾಡಿದ್ದಾರೆ. ಸಹಕಾರ ರಂಗದ ಸ್ವ-ಸಹಾಯ ಸಂಘಗಳ ಮೂಲಕ ಸರಕಾರ ಮಾಡದೇ ಇರುವ ಕೆಲಸ ರಾಜೇಂದ್ರ ಕುಮಾರ್ ಮಾಡಿದ್ದಾರೆ. ಜನ ಸಾಮಾನ್ಯರ ಬಗ್ಗೆ ಕಾಳಜಿ ಹೊಂದಿರುವ ಸೇವಾ ಮನೋಭಾವ ಹೃದಯ ಶ್ರೀಮಂತಿಕೆ ಯಿಂದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದು ಶುಭ ಹಾರೈಸಿದರು.
ಶಾಸಕರಾದ ಡಾ. ವೈ.ಭರತ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಉಡುಪಿ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕ ಭಾಸ್ಕರ ಕೋಟ್ಯಾನ್, ಶ್ರೀರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಜಯರಾಜ್ ರೈ, ಸಹಕಾರಿ ಸಂಘಗಳ ಉಪ ನಿರ್ದೇಶಕ ರಮೇಶ್ ಕುಮಾರ್, ಉದ್ಯಮಿ ಮೇಘರಾಜ್ ಜೈನ್, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.
ರಾಜೇಶ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತ ಸಮಿತಿಯ ಕಾರ್ಯಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು ವಂದಿಸಿದರು.