
ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ: ಡಾ. ಎಂ. ಪ್ರಭಾಕರ ಜೋಶಿ ಕಳವಳ
ಮಂಗಳೂರು: ಇತ್ತೀಚನ ದಿನಗಳಲ್ಲಿ ಪುಸ್ತಕಗಳು ಹೆಚ್ಚಾಗುತ್ತಿದ್ದು, ಓದುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ ಎಂದು ಹಿರಿಯ ವಿದ್ವಾಂಸ, ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ ಕಳವಳ ವ್ಯಕ್ತಪಡಿಸಿದರು.
ಅವರು ಇಂದು ನಗರದ ಖಾಸಗಿ ಹೊಟೇಲ್‌ನ ಸಭಾಂಗಣದಲ್ಲಿ ರಮಾಬಾಯಿ ಚಾರಿಟೇಬಲ್ ಫೌಂಡೇಶನ್(ರಿ) ಮೈಸೂರು ಇದರ ಆಶ್ರಯದಲ್ಲಿ ‘ಎರಡು ನೆರೆಗಳ ನಡುವೆ’ ಮಂಗಳೂರು ಗಣೇಶ ಬೀಡಿ ಕಥನ ಪುಸ್ತಕದ ಪರಿಚಯ ಮಾಡಿ ಮಾತನಾಡಿದರು.
ಎರಡು ನೆರೆಗಳ ನಡುವೆ ಪುಸ್ತಕವು ರೋಮಾಂಚಕ ಕಲ್ಪನೆಯನ್ನು ನೀಡಿದ್ದು, ಗಣೇಶ್ ಬೀಡಿ ಮಾಲಿಕರ ನಾಲ್ಕು ತಲೆಮಾರಿನ ವಿಷಯವನ್ನು ತಿಳಿಸುತ್ತದೆ. ಇದರೊಂದಿಗೆ ಗೊತ್ತಾಗದ ರೀತಿಯಲ್ಲಿ 100 ಕೋಟಿಗೂ ಅಧಿಕ ಮೊತ್ತವನ್ನು ದಾನವಾಗಿ ನೀಡಿರುವುದು, ಇತ್ತೀಚೆಗೆ ನಷ್ಟದಲ್ಲಿ ನಡೆಯುತ್ತಿದ್ದರೂ, ಸಾವಿರಾರು ಕಾರ್ಮಿಕರಿಗಾಗಿ ಕಂಪೆನಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಚಿತ್ರಣ ಕಣ್ಣಮುಂದೆ ಬರುತ್ತದೆ ಎಂದರು.
ವ್ಯಾಪಾರ ಎಂಬುವುದು ತಪಸ್ಸು ಇದ್ದಹಾಗೆ ಅದನ್ನು ಜಿಎಸ್‌ಬಿ ಸಮುದಾಯದವರು ಉತ್ತಮ ರೀತಿಯಲ್ಲಿ ಮಾಡಿಕೊಂಡು ಬಂದಿದ್ದಾರೆ. ಬಿದ್ದರೂ ಮತ್ತೆ ಎದ್ದು ತಲೆ ಎತ್ತಿ ನಿಲ್ಲುವ ಸಾಮಾರ್ಥ್ಯ ಜಿಎಸ್‌ಬಿ ಸಮುದಾಯಕ್ಕೆ ಇದೆ. ಆದುದರಿಂದ ಇಡೀ ಜಗತ್ತೇ ಜಿಎಸ್‌ಬಿ ಮಯವಾಗಿದೆ ಎಂದು ಹೇಳಿದರು.
ಈ ಪುಸ್ತಕದಲ್ಲಿ ಸಾಹಿತ್ಯ, ಬರವಣಿಗೆ ಹಾಗೂ ಅನುಭವ ಎದ್ದು ಕಾಣುತ್ತಿದ್ದು, ಈ ಕುಸ್ತಕವು ಸಂಶೋಧನೆ, ಜನಪ್ರಿಯತೆ ಹಾಗೂ ಕುಟುಂಬ ಗ್ರಂಥವಾಗಿ ಮೂರು ಆಯಾಮಗಳಲ್ಲಿ ನೋಡಬಹುದಿದ್ದು, ಇದರ ಹಿಂದೆ ಮಹಮ್ಮದ್ ರಫಿ ಹಾಗೂ ಮಂಜುನಾಥ ಕಾಮತ್ ಅವರ ಪರಿಶ್ರಮ ಕಾಣುತ್ತಿದೆ ಎಂದ ಅವರು ಒಬ್ಬ ಯುನಿಯನ್ ನಾಯಕ ತಮ್ಮ ಮಾಲಕರ ಬಗ್ಗೆ ಪುಸ್ತಕ ಬರೆಯುತ್ತಾರೆ ಎಂದಾದರೆ ಮಾಲಕರ ಪರಿಶ್ರಮ ಮತ್ತು ಕಾರ್ಮಿಕರನ್ನು ಕಂಡಂತಹ ಕರಿಕಲ್ಪನೆ ಗೊತ್ತಗುತ್ತದೆ ಎಂದು ಜೋಶಿ ಹೇಳಿದರು.
ಹಾಸನ ಜಿಲ್ಲೆಯ ಉಪ ಕಾರ್ಮಿಕ ಆಯುಕ್ತ ಗುರುಪ್ರಸಾದ್ ಹೆಚ್.ಎಲ್. ಮಾತನಾಡಿ, ಗ್ರಾಮೀಣ ಪ್ರದೇಶದ 3-4 ಲಕ್ಷ ಮಹಿಳೆಯರನ್ನು ಸಬಲರನ್ನಾಗಿಸುವುದರೊಂದಿಗೆ ಭಾರತದ ಸಂಸ್ಕೃತಿಯನ್ನು ಬೆಳೆಸುವಲ್ಲಿಯೂ ಗಣೇಶ್ ಬೀಡಿ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದರು.
ಭಾರತ್ ಬೀಡಿ ಸಮೂಹ ಸಂಸ್ಥೆಗಳ ಸುಬ್ಬರಾಯ ಎಂ. ಪೈ ಮಾತನಾಡಿ, 1906ರಲ್ಲಿ ಮಂಗಳೂರಿನಲ್ಲಿ ಮೊದಲ ಬಾರಿಗೆ ಪಿವಿಎಸ್ ಬೀಡಿ ಪ್ರಾರಂಭವಾಯಿತು. ಆಗಿನಿಂದ ಇಲ್ಲಿಯ ತನಕ ಮಂಗಳೂರಿನಲ್ಲಿ ಯಾವುದೇ ರೀತಿಯ ಕಚ್ಚಾ ವಸ್ತು ಉತ್ಪನ್ನವಾಗುವುದಿಲ್ಲ. ಉತ್ತರ ಭಾರತದಿಂದ ಮಂಗಳೂರಿಗೆ ಕಚ್ಚಾ ವಸ್ತು ಬರುತ್ತದೆ ಆದರೂ ದೇಶದೆಲ್ಲೆಡೆ ಮಂಗಳೂರು ಬೀಡಿಗೆ ಅಪಾರ ಬೇಡಿಕೆ ಇದೆ ಎಂದು ಹೇಳಿದರು.
ಇತ್ತೀನ ದಿನಗಳಲ್ಲಿ ಸಿಗರೇಟ್ ಮಾರುಕಟ್ಟೆಗೆ ಬಂದ ನಂತರ ಬೀಡಿಗೆ ಬೇಡಿಕೆ ಕಡಿಮೆಯಾಗಿದೆ. ಸಿಗರೇಟ್‌ನ್ನು ಸಂಪೂರ್ಣವಾಗಿ ಮಿಷಿನ್‌ನಿಂದ ತಯಾರಿಸಲಾಗುತ್ತದೆ. ಆದರೆ ಬೀಡಿಯನ್ನು ಸಂಪೂರ್ಣವಾಗಿ ಜನರು ಮಾಡುತ್ತಾರೆ. ಸಿಗರೇಟ್‌ನಿಂದ ಕ್ಯಾನ್ಸರ್ ಬರಬಹುದು ಆದರೆ ಇಲ್ಲಿಯ ತನಕ ಬೀಡಿಯಿಂದ ಕ್ಯಾನ್ಸರ್ ಬಂದಂತಹ ಯಾವುದೇ ದಾಖಲೆ ಇಲ್ಲ. ಆದರೆ ಜನರನ್ನು ಮಾರುಕಟ್ಟೆಗಾಗಿ ತಪ್ಪು ಸಂದೇಶ ನೀಡಿ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಗಣೇಶ್ ಬೀಡಿ ವರ್ಕ್ಸ್‌ನ ಪಾಲುದಾರ ಗೋವಿಂದ ಜಗನ್ನಾಥ ಶೆಣೈ ಮಾತನಾಡಿ, ಗಣೇಶ್ ಬೀಡಿಯಲ್ಲಿ ಕೆಲಸ ಮಾಡುವ ಎಲ್ಲರನ್ನೂ ನಾವು ನಮ್ಮ ಕುಟುಂಬದವರಂತೆ ನೋಡುತ್ತೇವೆ. ನನ್ನ ತಂದೆ ಈ ಕಂಪೆನಿಯನ್ನು ಕಾರ್ಪೋರೇಟ್ ತರ ನೋಡದೇ ನಮ್ಮವರಂತೆ ನೋಡಿದ್ದಾರೆ. ಆದುದರಂದ ಇಂದಿಗೂ ಕಂಪೆನಿ ನಡೆಯುತ್ತಿದೆ ಎಂದು ಹೇಳಿದರು.
ಬೆಂಗಳೂರಿನ ಬಿ.ವಿ. ಕಾರಣತ ರಂಗ ಪ್ರತಿಷ್ಠಾನದ ಅಧ್ಯಕ್ಷ ಜಯರಾಮ ಪಾಟೀಲ, ಲೇಖಕ ಮಂಜುನಾಥ ಕಾಮತ್ ಮಾತನಾಡಿದರು. ಮಂಗಳೂರಿನ ಹಿಂದ್ ಮಜ್ದೂರ್ ಸಭಾದ ಅಧ್ಯಕ್ಷ, ಕೃತಿ ಪರಿಕಲ್ಪನೆಕಾರ ಮಹಮ್ಮದ್ ರಫಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಲ್ಲೂರು ನಾಗೇಶ್ ಸ್ವಾಗತಿಸಿ, ನಿರೂಪಿಸಿದರು.