
ಕೇಂದ್ರ ಸರಕಾರ ಜನಪರ ಯೋಜನೆ ರೋಪಿಸಲು ರಾಜ್ಯ ಸರ್ಕಾರ ಅಡ್ಡಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಕಾರ್ಕಳ: ಕೇಂದ್ರ ಸರಕಾರ ರೂಪಿಸಿದ ಜನಪರ ಯೋಜನೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಿದ್ದರಾಮಯ್ಯ ಸರಕಾರ ಅಡ್ಡಿಪಡಿಸುತ್ತಿದೆ. ಇಂತಹ ಒಂದು ಕೆಟ್ಟ ಸಂಪ್ರದಾಯಕ್ಕೆ ರಾಜ್ಯ ಸಾಕ್ಷಿಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಜ್ಯ ಸರಕಾರದ ವಿರುದ್ಧ ಚಾಟಿ ಬೀಸಿದರು.
ಅವರು ಫೆ.6ರಂದು ಕಾರ್ಕಳ ತಾಲೂಕು ಕಚೇರಿ ಮುಂಭಾಗ ಕಾರ್ಕಳ ಬಿಜೆಪಿ ವತಿಯಿಂದ ಶಾಸಕ ಸುನಿಲ್ ಕುಮಾರ್ ನೇತೃತ್ವದಲ್ಲಿ ರಾಜ್ಯ ಸರಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕೇಂದ್ರ ಸರಕಾರದ ಆಯುಷ್ಮಾನ್ ಕಾರ್ಡ್, ಜಲಜೀವನ್, ವಿಶ್ವಕರ್ಮ ಯೋಜನೆ ಸೇರಿದಂತೆ ಹಲವಾರು ಯೋಜನೆಗಳು ಕರ್ನಾಟಕದಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಲು ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ. ಸಿದ್ದರಾಮಯ್ಯ ಸರಕಾರದ ಆಡಳಿತದಲ್ಲಿ ರಾಜ್ಯ ಬಿಟ್ಟು ಹೋಗುವಂತಹ ಸ್ಥಿತಿ ಬಂದೊದಗಿದೆ ಎಂದು ಕೋಟ ಕಿಡಿಕಾರಿದರು.
ಮಂಕಾಳ ವೈದ್ಯ ಗೃಹಮಂತ್ರಿಯಾಗಲಿ, ಗೋಕಳ್ಳತನ ಮಾಡುವವರ ಮೇಲೆ ಸ್ಥಳದಲ್ಲೇ ಶೂಟೌಟ್ ಮಾಡಲಾಗುವುದು ಎಂದು ಹೇಳಿರುವ ಸಚಿವ ಮಂಕಾಳ ವೈದ್ಯ ಅವರನ್ನು ನಾನು ಅಭಿನಂದಿಸುತ್ತೇನೆ. ಸಿದ್ದರಾಮಯ್ಯ ಅವರು ಮಂಕಾಳ ವೈದ್ಯ ಅವರನ್ನು ಗೃಹ ಮಂತ್ರಿಯನ್ನಾಗಿ ಮಾಡಬೇಕೆಂದು ಕೋಟ ಸಲಹೆ ನೀಡಿದರು.
ಆಡಳಿತ ವೈಫಲ್ಯ ಬಿಚ್ಚಿಟ್ಟ ಸುನಿಲ್:
ಶಾಸಕ ಸುನಿಲ್ ಕುಮಾರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ 32 ಸಾವಿರ ಸೇರಿದಂತೆ ರಾಜ್ಯದಲ್ಲಿ ಒಟ್ಟು 22 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಲು ಸರಕಾರ ಮುಂದಾಗಿದೆ. ಏಕ ವಿನ್ಯಾಸ 9/11 ಸಮಸ್ಯೆಯಿಂದ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ. 500 ರೂ.ವಿನಲ್ಲಿ ಸಾಧ್ಯವಾಗುತ್ತಿದ್ದ ಪ್ರಾಧಿಕಾರದ ಕೆಲಸ ಕಾರ್ಯಗಳಿಗಾಗಿ ಪ್ರಸ್ತುತ 15 ಸಾವಿರ ರೂ. ಖರ್ಚು ಮಾಡಬೇಕಾದ ದುರಂತವಿದೆ ಎಂದು ಕಾಂಗ್ರೆಸ್ ಆಡಳಿತದ ವೈಫಲ್ಯದ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕಳೆದ ಎರಡು ವರ್ಷದಲ್ಲಿ ರಾಜ್ಯ ಸರಕಾರ ಮಂಗಳೂರು-ಉಡುಪಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ಸುಳ್ಯದಿಂದ ಕಾರವಾರದ ತನಕ ಮೂರು ಜಿಲ್ಲೆಯ ಜನ ರಾಜ್ಯ ಸರಕಾರಕ್ಕೆ ಸೇರಿಲ್ಲವೇ ಎಂದು ಪ್ರಶ್ನಿಸಿರುವ ಸುನಿಲ್ ಕುಮಾರ್ ಕಾಂಗ್ರೆಸ್ ಸರಕಾರ ಕರಾವಳಿ ವಿರೋಧಿ ಸರಕಾರ ಎಂದು ಆರೋಪಿಸಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಪ್ರಾಕೃತಿಕ ವಿಕೋಪ ಉಂಟಾದಾಗ ವೀಕ್ಷಣೆಗೆ ಬಂದಿರುವ ಸಿಎಂ ಬಳಿಕ ಯಾವುದೇ ಅನುದಾನ ಒದಗಿಸದಿರುವುದು ದುರಂತ. ಮರಳಿನ ಸಮಸ್ಯೆಗೆ ಪರಿಹಾರವಿಲ್ಲ. ಕೆಂಪುಕಲ್ಲು, ಜಲ್ಲಿಕಲ್ಲು ಸಿಗದಂತಾಗಿದೆ. ಮಾತೆತ್ತಿದರೆ ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಅದರ ಹೊರೆಯನ್ನು ಜನತೆ ಮೇಲೆ ಹೇರುತ್ತಿದ್ದಾರೆ. ಸರಕಾರಿ ಬಸ್ ಟಿಕೆಟ್ ದರ, ಹಾಲು, ಪೆಟ್ರೋಲ್, ಬಿಯರ್ ಬೆಲೆಯನ್ನು ವಿಪರೀತವಾಗಿ ಏರಿಸಲಾಗಿದೆ ಎಂದು ಸುನಿಲ್ ಕುಮಾರ್ ಟೀಕಿಸಿದರು.
ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಯಕ್ಷಗಾನವನ್ನು ತಡೆಯಲು ಮುಂದಾಗಿದೆ. ಗಣಪತಿ ಮೂರ್ತಿಯನ್ನು ಅರೆಸ್ಟ್ ಮಾಡಿದ ಸರಕಾರ ಗೋವಿನ ಕೆಚ್ಚಲು ಕೊಯ್ದವನನ್ನು ಹುಚ್ಚ ಎಂದು ಬಿಂಬಿಸಲು ಹೊರಟಿದೆ. ಕೆಚ್ಚಲು ಕೊಯ್ದವನಿಗೆ ಹುಚ್ಚಲ್ಲ. ರಾಜ್ಯ ಸರಕಾರಕ್ಕೆ ಹುಚ್ಚು ಎಂದು ಸುನಿಲ್ ಕುಮಾರ್ ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದರು.
ಹಾಡಿನ ಮೂಲಕ ಲೇವಡಿ:
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿಯವರ ಸಾಹಿತ್ಯದಲ್ಲಿ ರಚಿಸಿದ ಹಾಡನ್ನು ಮಹಿಳಾ ಮೋರ್ಚಾದ ಸದಸ್ಯರು ಹಾಡುವ ಮೂಲಕ ರಾಜ್ಯ ಸರಕಾರದ ವೈಫಲ್ಯಗಳ ಕುರಿತು ಲೇವಡಿ ಮಾಡಿದರು.
ರಾಜ್ಯವ್ಯಾಪಿ ವಿಸ್ತರಣೆ:
ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಮಾತನಾಡಿ, ಕಾಂಗ್ರೆಸ್ ಸರಕಾದ ನೀತಿಯಿಂದ ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಜನರ ಮುಂದೆ ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಇಲಾಖೆಯಲ್ಲಿ ಕೆಲಸವಾಗುತ್ತಿಲ್ಲ. ಗ್ರಾಮ-ಗ್ರಾಮದಲ್ಲಿ ಸರಕಾರದ ವೈಫಲ್ಯಗಳನ್ನು ತಿಳಿಸುವ ಕೆಲಸವಾಗಬೇಕು ಮಾತ್ರವಲ್ಲದೇ ಕಾರ್ಕಳದಲ್ಲಿ ಪ್ರಾರಂಭಗೊಂಡಿರುವ ಪ್ರತಿಭಟನೆ ರಾಜ್ಯವ್ಯಾಪಿ ವಿಸ್ತರಿಸಬೇಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ್ ಕಾಮತ್, ಶ್ರೀನಿವಾಸ್ ಕಾಮತ್ ಬೋಳ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರಾದ ಮಹಾವೀರ ಹೆಗ್ಡೆ, ಜಯರಾಮ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಕಾರ್ಯದರ್ಶಿ ಉದಯ ಎಸ್. ಕೋಟ್ಯಾನ್, ಮಂಡಲ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಶಿವಪುರ, ಸತೀಶ್ ಪೂಜಾರಿ ಬೋಳ ಮೊದಲಾದವರು ಉಪಸ್ಥಿತರಿದ್ದರು.