
ಶಿವಾಜಿ ಮಹಾರಾಜ ವ್ಯಕ್ತಿಯಲ್ಲ ಆತ ಮಹಾನ್ ಶಕ್ತಿ: ಶಾಸಕ ವೇದವ್ಯಾಸ ಕಾಮತ್
ಮಂಗಳೂರು: ಶಿವಾಜಿ ಮಹಾರಾಜ ಬರಿಯ ವ್ಯಕ್ತಿಯಲ್ಲ. ಆತ ಮಹಾನ್ ಶಕ್ತಿ, ಹಿಂದೂ ಸಮಾಜಕ್ಕಾಗಿ ಆತ ಮಾಡಿದ ತ್ಯಾಗ ಬಲಿದಾನವನ್ನು ದಿನನಿತ್ಯ ಸ್ಮರಿಸಬೇಕಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಕುದ್ಮುಲ್ ರಂಗರಾವ್ ಪುರಭವನದಲ್ಲಿ ದ.ಕ. ಜಿಲ್ಲಾಡಳಿತ, ದ.ಕ. ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್(ಕೆಕೆಎಂಪಿ) ನ ದ.ಕ. ಜಿಲ್ಲಾ ವಿಭಾಗ, ಆರ್ಯ ಯಾನೆ ಮರಾಠ ಸಮಾಜ ಸಂಘದ ಆಶ್ರಯದಲ್ಲಿ ಬುಧವಾರ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಾಜಿ ದೂರದೃಷ್ಟಿಯ ರಾಜನಾಗಿದ್ದ ಕಾರಣ ಇತಿಹಾಸದಲ್ಲಿ ದೀರ್ಘಕಾಲದಿಂದ ನೆನಪಿನಲ್ಲಿ ಉಳಿದಿದ್ದಾರೆ. 400 ವರ್ಷಗಳ ಅವಧಿಯಲ್ಲೂ ಅವರ ಸಾಧನೆಗಳನ್ನು ನೆ ನಪಿಸುತ್ತಿರುವುದು ಅವರ ಗಾಂಭೀರ್ಯತೆಯ ವಿಶೇಷ ಸಂಕೇತ ಎಂದು ಅವರು ಹೇಳಿದರು.
ಶಿವಾಜಿಯವರ ತಂದೆಯ ಸ್ಮಾರಕ ಚೆನ್ನಗಿರಿ ತಾಲೂಕಿನಲ್ಲಿದ್ದು, ಅದನ್ನು ರಾಷ್ಟ್ರೀಯ ಸ್ಮಾರಕವಾಗಿಸುವ ಕಾರ್ಯ ಆಗಬೇಕಿದೆ ಎಂಬ ಮರಾಠ ಪರಿಷತ್‌ನ ಜಿಲ್ಲಾಧ್ಯಕ್ಷ ಎ.ವಿ. ಸುರೇಶ್‌ರಾವ್ ಕರ್‌ಮೋರೆ ಅವರ ಬೇಡಿಕೆಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ ವೇದವ್ಯಾಸ ಕಾಮತ್, ಮುಂದಿನ ಮೂರು ವರ್ಷಗಳಲ್ಲಿ ಈ ಕಾರ್ಯ ಕಷ್ಟಸಾಧ್ಯ. ಮುಂದೆ ನಮ್ಮ ಸರಕಾರ ಆಡಳಿತಕ್ಕೆ ಬಂದಾಗ ಮಾಡುತ್ತೇವೆ ಎಂದರು.
ಹಿಂದೂ ಮತ್ತು ಕ್ರೈಸ್ತ ವಿರೋಧಿಯಾಗಿದ್ದ ಟಿಪ್ಪುವಿನ ಜಯಂತಿ ಆಚರಣೆಗೂ ವೇದಿಕೆ, ಸಭಾಂಗಣ ತುಂಬಿರುತ್ತದೆ. ಆದರೆ ಶಿವಾಜಿ ಮಹಾರಾಜರ ಕಾರ್ಯಕ್ರಮದಲ್ಲಿ ಜ ನರು ವಿರಳವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಸೇರಿಸಿಕೊಂಡು ಮಾಡುವಲ್ಲಿ ತಾವು ಸಹಕಾರ ನೀಡುವುದಾಗಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆಕೆಎಂಪಿ ಜಿಲ್ಲಾಧ್ಯಕ್ಷ ಎ.ವಿ. ಸುರೇಶ್‌ರಾವ್ ಕರ್‌ಮೋರೆ, ಬೊದೇಲ್‌ನಲ್ಲಿ ಮರಾಠ ಸಮುದಾಯ ಭವನದಲ್ಲಿ 2 ಅಂತಸ್ತಿನ ಕಾಮಗಾರಿಗೆ 1 ಕೋಟಿ ರೂ. ಅನುದಾನಕ್ಕೆ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಅಂತಿಮ ಹಂತದಲ್ಲಿದೆ. 50 ಲಕ್ಷ ರೂ. ಅನದುಆನದ ನಿರೀಕ್ಷೆ ಇದ್ದು, ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಬೇಕು. ಆರ್ಯ ಯಾನೆ ಮರಾಠ ಜಾತಿಯನ್ನು 3ಬಿಯಿಂದ 2ಎಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಸಂಘದಿಂದ ಹೋರಾಟ ನಡೆಯುತ್ತಿದೆ. ಶಂಕರಪ್ಪ ಆಯೋಗವೂ ಶಿಫಾರಸು ಮಾಡಿದೆ ಎಂದರು.
ಶಿವಾಜಿ ಮೂರ್ತಿ ಸ್ಥಾಪಿಸಿಯೇ ಸಿದ್ಧ:
ಪಂಪ್‌ವೆಲ್‌ನಲ್ಲಿ ಶಿವಾಜಿ ಮೂರ್ತಿ ಸ್ಥಾಪನೆಯ ಕುರಿತಂತೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಚುನಾವಣೆ ಹಾಗೂ ಬಳಿಕ ನಡೆದ ಬೆಳವಣಿಗೆಯಿಂದ ಈ ಕಾರ್ಯ ಹಿಂದಕ್ಕೆ ಸರಿದಿದೆ. ಇದೀಗ ಸರಕಾರ ಕೊಟ್ಟರೆ ಸರಿ, ಕೊಡದಿದ್ದರೆ ನಾವೇ ಶಿವಾಜಿ ಮೂರ್ತಿ ಸ್ಥಾಪಿಸಿಯೇ ಸಿದ್ಧ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ರಾಜೇಶ್ ಸ್ವಾಗತಿಸಿದರು. ವೇದಿಕೆಯಲ್ಲಿ ಆರ್ಯ ಯಾನೆ ಮರಾಠ ಸಮಾಜ ಸಂಘದ ಉಪಾಧ್ಯಕ್ಷ ಗಿರೀಶ್ ರಾವ್ ಬೋಸ್ಲೆ, ಕೆಕೆಎಂಪಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಸವಿತಾ ನಾಗೇಶ್ ಪಾಟೀಲ್, ರಾಜ್ಯ ಮಹಿಳಾ ಘಟಕದ ಭಾಗ್ಯಲಕ್ಷ್ಮಿ ಸುಧಾಕರ್ ಸಿಂಧ್ಯಾ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಆರ್ಯ ಯಾನೆ ಮರಾಠ ಸಂಘದ ಕಾರ್ಯದರ್ಶಿ ನಿಖಿಲ್ ಜಾದವ್ ಮೊದಲಾದವರು ಉಪಸ್ಥಿತರಿದ್ದರು.