
ಸಾಹಿತ್ಯಿಕ ಚಟುವಟಿಕೆಗಳಿಗಾಗಿ ಮಿಟಾಕಣ್ ಸ್ಥಾಪನೆ
ಮಂಗಳೂರು: ಮಾಂಡ್ ಸೊಭಾಣ್ ಸಂಸ್ಥೆಯು ಸಾಹಿತ್ಯಿಕ ಚಟುವಟಿಕೆಗಳಿಗಾಗಿ ಮಿಟಾಕಣ್ (ಉಪ್ಪಿನ ಕಣ) ಅಂಗಸಂಸ್ಥೆಯನ್ನು ರಚಿಸಿದ್ದು ಇದರ ಉದ್ಘಾಟನೆ ಫೆ.23 ರಂದು ಶಕ್ತಿನಗರದ ಕಲಾಂಗಣದಲ್ಲಿ ಮಕ್ಕಳ ಸಾಹಿತಿ ಜೆ.ಎಫ್. ಡಿ’ಸೋಜ ಅತ್ತಾವರ್ ಇವರು ಕಡೆದ ಮಜ್ಜಿಗೆಗೆ ಉಪ್ಪು ಬೆರೆಸುವ ಮುಖಾಂತರ ಉದ್ಘಾಟಿಸಿ ಶುಭ ಹಾರೈಸಿದರು.
ಸಂಚಾಲಕ ಕವಿ ರೊನಿ ಕ್ರಾಸ್ತಾ ಪ್ರಸ್ತಾವಿಕ ಮಾತುಗಳಾನ್ನಾಡಿ, 1998ರಲ್ಲಿ ಮಾಂಡ್ ಸೊಭಾಣ್ ‘ಮಿಟಾಕಣ್ ಅಕಾಡೆಮಿ’ ರಚಿಸಿ ಕವಿಗೋಷ್ಟಿ, ಪುಸ್ತಕ ಪ್ರಕಟಣೆ, ಸಾಹಿತ್ಯಿಕ ಚಿಂತನೆ ಇತ್ಯಾದಿ ಕೆಲಸಗಳನ್ನು ಮಾಡುತ್ತಾ ಬಂದಿತ್ತು. ಇತರೆ ಸಾಂಸ್ಕೃತಿಕ ಕೆಲಸಗಳ ಒತ್ತಡದಲ್ಲಿ ಸ್ಥಗಿತಗೊಂಡ ಮಿಟಾಕಣ್ ಅನ್ನು ಪುನರುಜ್ಜೀವಗೊಳಿಸುತ್ತಿದ್ದೇವೆ. ಈ ಸಾಲಿನಲ್ಲಿ ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಗಮನ ಹರಿಸಲಿದ್ದೇವೆ. ಬೇರೆ ಭಾಷೆಗಳಿಂದ ಕೊಂಕಣಿಗೆ ಮಕ್ಕಳ ಸಾಹಿತ್ಯ ಅನುವಾದ ಮಾಡಲಿದ್ದೇವೆ. ವರ್ಷದಲ್ಲಿ ಹೊಸ ಕವಿತೆಗಳ ಒಂದೆರಡು ಕವಿಗೋಷ್ಟಿಗಳು ಹಾಗೂ ನವೆಂಬರದಲ್ಲಿ ಮಕ್ಕಳ ಸಾಹಿತ್ಯೋತ್ಸವ ಆಚರಿಸಲಿದ್ದೇವೆ ಎಂದು ತಿಳಿಸಿದರು.
ಮಕ್ಕಳ ಸಾಹಿತ್ಯದ ಬಗ್ಗೆ ಮಾರ್ಗದರ್ಶಿ ಭಾಷಣ ಮಾಡಿದ ಭಾಷಾ ತಜ್ಞ ವಂ. ಡಾ. ಪ್ರತಾಪ್ ನಾಯ್ಕ್ ಗೋವಾ ಇವರು ಮಕ್ಕಳೊಡನೆ ಮಕ್ಕಳಾಗಿ ಅವರ ಮನೋಭೂಮಿಕೆ ಅರಿತು ಸಾಹಿತ್ಯ ರಚಿಸಬೇಕು ಎಂದು ಹೇಳಿ ಮಕ್ಕಳ ಸಾಹಿತ್ಯ ರಚನೆಗೆ 12 ಸೂತ್ರಗಳನ್ನು ಸೂಚಿಸಿದರು. ಇಂದಿನ ಕಾಲಕ್ಕೆ ಸರಿಯಾಗಿ ಕಾರ್ಟೂನುಗಳು, ಧ್ವನಿಮುದ್ರಿಕೆಗಳು, ವಿಡಿಯೊ ಹಾಗೂ ಇತರ ಸಮಾಜಿಕ ಜಾಲತಾಣಗಳ ಮೂಲಕ ಮಕ್ಕಳಿಗೆ ರುಚಿಸುವ ಸಾಹಿತ್ಯ ರಚಿಸಲು ಕರೆ ಕೊಟ್ಟರು.
ನಂತರ ನಡೆದ ಸಂವಾದದಲ್ಲಿ ಎರಿಕ್ ಒಝೇರಿಯೊ, ನವೀನ್ ಕುಲ್ಶೇಕರ್, ಅಜಯ್ ಡಿಸೋಜ, ಹೇಮಾಚಾರ್ಯ, ಲಿಲ್ಲಿ ಮಿರಾಂದ, ಚಾರ್ಲಿ ಕುಲ್ಶೇಕರ್, ಸಲೋಮಿ ಮಿಯಾಪದವ್ ಮತ್ತು ಮುಂಡ್ರೆಲ್ ಸಿರಿಲ್ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಂಡ್ ಸೊಭಾಣ್ ಅಧ್ಯಕ್ಷ ಲುವಿಸ್ ಜೆ. ಪಿಂಟೊ ವೇದಿಕೆ ಮೇಲಿನ ಅತಿಥಿಗಳನ್ನು ಹೂಗುಚ್ಛವನ್ನಿತ್ತು ಗೌರವಿಸಿದರು. ಅರುಣ್ ರಾಜ್ ರೊಡ್ರಿಗಸ್ ನಿರೂಪಿಸಿ, ಸಂವಾದ ನಡೆಸಿ ಕೊಟ್ಟರು.