ಅಳಿಯೂರಿನ ಪಾಕತಜ್ಞರ ಮನೆಯಲ್ಲಿ ಹಗಲಲ್ಲೇ ದರೋಡೆ: 20 ಪವನ್ ಚಿನ್ನಾಭರಣ ದೋಚಿದ ಕಳ್ಳರು

ಅಳಿಯೂರಿನ ಪಾಕತಜ್ಞರ ಮನೆಯಲ್ಲಿ ಹಗಲಲ್ಲೇ ದರೋಡೆ: 20 ಪವನ್ ಚಿನ್ನಾಭರಣ ದೋಚಿದ ಕಳ್ಳರು


ಮೂಡುಬಿದಿರೆ: ಅಳಿಯೂರಿನಲ್ಲಿರುವ ಪಾಕ ತಜ್ಞರ ಮನೆಗೆ ಹಗಲಲ್ಲೇ ನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿದ್ದ ಮೂರೂವರೆ ಲಕ್ಷ ರೂ. ನಗದು ಹಾಗೂ 20 ಪವನ್ ಚಿನ್ನಾಭರಣವನ್ನು ದೋಚಿದ ಘಟನೆ ಭಾನುವಾರ ನಡೆದಿದೆ.

ಅಳಿಯೂರಿನ ನೇಲಡೆಯ ನಿವಾಸಿ, ಖ್ಯಾತ ಪಾಕತಜ್ಞರಾಗಿರುವ ಪ್ರಶಾಂತ್ ಜೈನ್ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು ಈ ಸಂದಭ೯ ಮನೆಯಲ್ಲಿ ಅವರ ಮಗಳ ಹೊರತಾಗಿ ಬೇರಾರೂ ಇರಲಿಲ್ಲ. ಪ್ರಶಾಂತ್ ಮತ್ತು ಅವರ ಮಗ ಮೂಲ್ಕಿಯಲ್ಲಿ ಅಡುಗೆ ಕೆಲಸಕ್ಕೆ ಹೋಗಿದ್ದು ಅವರ ಪತ್ನಿ ಶಿರ್ತಾಡಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು.

ಇದೇ ಸಮಯವನ್ನು ಅರಿತ ಕಳ್ಳರು ಆ ಮನೆಯೊಳಗೆ ನುಗ್ಗಿದ್ದಾರೆ. ಕಪಾಟು ಸದ್ದು ಕೇಳಿ ಯುವತಿ ಬಂದು ನೋಡಿದಾಗ ಬೊಬ್ಬೆ ಹೊಡೆಯದಂತೆ ಬಾಯಿಗೆ ಒತ್ತಿ ಹಿಡಿದರೆನ್ನಲಾಗಿದೆ. ಅಲ್ಲದೆ ಆಕೆಗೆ ಸ್ಪ್ರೇ ಹಾಕಿ ಪ್ರಜ್ಞೆ ತಪ್ಪಿಸಿ ನಗದು ಮತ್ತು ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದಾರೆ.


ಬೆಳಿಗ್ಗೆ ಹತ್ತೂವರೆ ಗಂಟೆ ವೇಳೆಗೆ ಈ ಘಟನೆ ಸಂಭವಿಸಿದ್ದು ಮಧ್ಯಾಹ್ನ ಹನ್ನೆರಡೂವರೆ ವೇಳೆಗೆ ನೆರೆಮನೆಯಲ್ಲಿರುವ ಸಂಬಂಧಿಕ ಮಹಿಳೆ ಬಂದ ನಂತರವೇ ಆಕೆ ಎಚ್ಚರಗೊಂಡು ನಡೆದ ಘಟನೆಯನ್ನು ಅವರಲ್ಲಿ ವಿವರಿಸಿದ್ದಾಳೆನ್ನಲಾಗಿದೆ. ಹಗಲಿನ ಹೊತ್ತಲ್ಲೇ ನಡೆದ ಈ ಘಟನೆ ಈ ಪರಿಸರದಲ್ಲಿ ದೊಡ್ಡ ಪ್ರಕರಣವಾಗಿದೆ.

ಘಟನಾ ಸ್ಥಳಕ್ಕೆ ಪಣಂಬೂರು ಎಸಿಪಿ ಶ್ರೀಕಾಂತ್, ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶ್ವಾನದಳ, ಪ್ರಾಯೋಗಿಕ ವಿಧಿ ವಿಜ್ಞಾನದವರೂ ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ.

ಮನೆಯೊಳಗಡೆ ನುಗ್ಗಿರುವ ಇಬ್ಬರು ಮುಸುಕುಧಾರಿಗಳಿದ್ದರೆನ್ನಲಾಗಿದ್ದು, ಸ್ಥಳೀಯ ಹಾಗೂ ಈ ಮನೆಯನ್ನು ಬಲ್ಲವರೇ ಈ ಕೃತ್ಯವೆಸಗಿರಬಹುದೆಂದು ಶಂಕಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article