
ಫೆ.28 ರಿಂದ ಮಾ. 7ರವರೆಗೆ ಪುತ್ತಿಗೆಯಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ
ಮೂಡುಬಿದಿರೆ: ಸುಮಾರು 800 ವರ್ಷಗಳ ಇತಿಹಾಸವಿರುವ ಮೂಡುಬಿದಿರೆ ಪುತ್ತಿಗೆಯ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆ.28 ರಿಂದ ಮಾ.7 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕುಲದೀಪ ಎಂ. ಅವರು ತಿಳಿಸಿದರು.
ಅವರು ಶ್ರೀ ಕ್ಷೇತ್ರದಲ್ಲಿ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಈಗಾಗಲೇ ಸುಮಾರು 15 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಕೆಲಸಗಳಾಗಿದೆ, ದಿನಂಪ್ರತಿ ಕೆಲಸಗಳು ನಡೆಯುತ್ತಿದ್ದು ಬ್ರಹ್ಮಕಲಶೋತ್ಸವ ಯಶಸ್ಸಿಗೆ ಈ ಪರಿಸರದ ಜನರು, ಭಕ್ತರು ಶ್ರಮಿಸುತ್ತಿದ್ದಾರೆ, ಸಂಪೂರ್ಣ ಜೀರ್ಣೋದ್ಧಾರಗೊಂಡು ದೇವಸ್ಥಾನದಲ್ಲಿ ಎಂಟು ದಿನಗಳ ಕಾಲ ಬ್ರಹ್ಮಕಲಶೋತ್ಸವ ಸಂಭ್ರಮ ನಡೆಯಲಿದೆ ಎಂದವರು ಮಾಹಿತಿ ನೀಡಿದರು.
ಈಗಾಗಲೇ ಮೂರು ಕಡೆಗಳಲ್ಲಿ ಪ್ರಮುಖ ಪ್ರವೇಶದ್ವಾರ ನಿರ್ಮಾಣ ಮಾಡಲಾಗಿದೆ, ಎರಡು ಸಾವಿರ ವಾಹನಗಳ ಪಾರ್ಕಿಂಗ್‌ಗೆ ವಿಶಾಲವಾದ ಜಾಗದ ವ್ಯವಸ್ಥೆ ಮಾಡಲಾಗಿದೆ, ಈಗಾಗಲೇ ಮೂವತ್ತು ಸಾವಿರದಷ್ಟು ಆಹ್ವಾನ ಪತ್ರಿಕೆಗಳನ್ನು ಹಂಚಲಾಗಿದ್ದು, ಹದಿನೆಂಟು ಮಾಗಣೆಗಳ ಎಪ್ಪತ್ತೇಳು ಗ್ರಾಮಗಳ ಸಹಿತ ಸುಮಾರು ಒಂದೂವರೆ ಲಕ್ಷದಷ್ಟು ಜನರು ಸೇರುವ ನಿರೀಕ್ಷೆ ಇದೆ ಎಂದರು.
28 ರಂದು ಶುಕ್ರವಾರ ಮಧ್ಯಾಹ್ನ ಎರಡರಿಂದ ಚೌಟರ ಅರಮನೆಯಿಂದ ಕನ್ನಡಭವನದವರೆಗೆ ಹಸಿರು ಹೊರೆಕಾಣಿಕೆ ಭವ್ಯ ಮೆರವಣಿಗೆಯಲ್ಲಿ ಸಾಗಲಿದ್ದು ಬಳಿಕ ನೆಲ್ಲಿಗುಡ್ಡೆಯಿಂದ ಪಾದಯಾತ್ರೆ ತೆರಳಲಿದೆ ಹಾಗೂ ದೇವಸ್ಥಾನದ ಇತಿಹಾಸ, ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಾಧ್ಯಕ್ಷರಾದ ನೀಲೇಶ್ ಶೆಟ್ಟಿ ಪುತ್ತಿಗೆಗುತ್ತು ಕೊಲಕಾಡಿ, ಕೋಶಾಧಿಕಾರಿ ಕೆ. ಶ್ರೀಪತಿ ಭಟ್, ಕಾರ್ಯದರ್ಶಿಗಳಾದ ವಿದ್ಯಾ ರಮೇಶ್ ಭಟ್, ವಾದಿರಾಜ ಮಡ್ಮಣ್ಣಾಯ, ಉಪಾಧ್ಯಕ್ಷರಾದ ಬಾಹುಬಲಿ ಪ್ರಸಾದ್, ಕುಂಗೂರು ಚಾವಡಿ ಮನೆ ಶಿವಪ್ರಸಾದ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.