
ಅಧಿಕಾರಿಗಳ ಅನುಪಸ್ಥಿತಿ: ಬೆಳುವಾಯಿ ಗ್ರಾಮಸಭೆ ರದ್ದು
Monday, February 17, 2025
ಮೂಡುಬಿದಿರೆ: ಹೆಚ್ಚಿನ ಅಧಿಕಾರಿಗಳು ಮತ್ತು ಗ್ರಾಮಸ್ಥರ ಅನುಪಸ್ಥಿತಿಯಿಂದಾಗಿ ಸೋಮವಾರ ನಡೆಯಬೇಕಾಗಿದ್ದ ಬೆಳುವಾಯಿ ಗ್ರಾಮಸಭೆಯು ರದ್ದುಗೊಂಡಿದೆ.
ಬೆಳುವಾಯಿ ಗ್ರಾಮ ಪಂಚಾಯತ್ ನ ದ್ವಿತೀಯ ಸುತ್ತಿನ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷ ಸುರೇಶ್ ಪೂಜಾರಿ ಗೋಲಾರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ 10.30ಕ್ಕೆ ನಡೆಯಬೇಕಾಗಿತ್ತು. ಅದರಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮ ನಾಯಕ್ ಸಿದ್ಧತೆ ಮಾಡಿಕೊಂಡಿದ್ದರು.
ಆದರೆ 11.15 ಆದರೂ ಸಭೆ ಆರಂಭವಾಗಿರಲಿಲ್ಲ ಕಾರಣ ಈ ಸಂದಭ೯ ಸಭೆಗೆ ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಆಶಾ ಕಾಯ೯ಕತೆ೯ಯರು ಭಾಗವಹಿಸಿದ್ದರು. ಇದಲ್ಲದೆ ಬೆರಳೆಣಿಕೆಯ ಗ್ರಾಮಸ್ಥರು ಮಾತ್ರ ಹಾಜರಿದ್ದರು.
ಅಗತ್ಯವಾಗಿ ಬೇಕಾಗಿದ್ದ ರಾ.ಹೆ. ಇಲಾಖೆಯ ಅಧಿಕಾರಿಗಳು ಸಹಿತ ಇತರ ಅಧಿಕಾರಿಗಳು ಗೈರು ಹಾಜರಾಗಿದ್ದರು. ಇದರಿಂದಾಗಿ ಕೋರಂ ಕೊರತೆ ಮತ್ತು ಅಧಿಕಾರಿಗಳ ಅನುಪಸ್ಥಿತಿಯ ಕಾರಣ ನೀಡಿ ಅಧ್ಯಕ್ಷರು ಗ್ರಾಮಸಭೆಯನ್ನು ರದ್ದುಗೊಳಿಸಿದರು.
ಗ್ರಾಮಸಭೆಗೆ ಗೈರಾಗಿರುವ ಅಧಿಕಾರಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ನೋಟೀಸ್ ನೀಡಲಾಗುವುದೆಂದು ಪಿಡಿಓ ತಿಳಿಸಿದ್ದಾರೆ.