
ಸಮಾಜದ ಸಂಕಷ್ಟಕ್ಕೆ ಸ್ಪಂದಿಸುವ ಸಂಘಟನೆ: ಶಾಸಕ ಕೋಟ್ಯಾನ್
ಮೂಡುಬಿದಿರೆ: ಹೆಣ್ಣು ಮಕ್ಕಳ, ಗೋಮಾತೆಯ ರಕ್ಷಣೆ ಮತ್ತು ನಮ್ಮ ಸಮಾಜ ಸಂಕಷ್ಟಕ್ಕೆ ಒಳಗಾದಾಗ ಪ್ರಾಣಕೊಟ್ಟು ಸ್ಪಂದಿಸುವ ಕೆಲಸವನ್ನು ಹಿಂದೂ ಸಂಘಟನೆಗಳು ಮಾಡುತ್ತಿವೆ ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು.
ಅವರು ಕರಾವಳಿ ಕೇಸರಿ ಸೇವಾ ಟ್ರಸ್ಟ್ ರಿ. ಬೆದ್ರ ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇದರ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಶನಿವಾರ ರಾತ್ರಿ ದರೆಗುಡ್ಡೆ ಸರಕಾರಿ ಪ್ರಾಥಮಿಕ ಶಾಲಾ ಆವರಣದ ದಿ. ಕೆ.ಪಿ. ಲಕ್ಷ್ಮೀಕಾಂತ್ ಅಧಿಕಾರಿ ಅವರ ವೇದಿಕೆಯಲ್ಲಿ ನಡೆದ ಶನೀಶ್ಚರ ಪೂಜೆಯ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಹಿಂದೂ ಸಂಘಟನೆಯ ಯುವಕರು ಅನ್ಯಾಯದ ವಿರುದ್ಧ ಹೋರಾಡುತ್ತಿರುವುದರ ಫಲವಾಗಿಯೇ ಹಿಂದೂ ಧರ್ಮ ಇನ್ನಷ್ಟು ಪ್ರಬಲವಾಗಿ ನಿಲ್ಲಲು ಸಾಧ್ಯವಾಗಿದೆ ಎಂದರು.
ಯುವ ನ್ಯಾಯವಾದಿ ಶರತ್ ಶೆಟ್ಟಿ ಸಭಾ ಕಾಯ೯ಕ್ರಮವನ್ನು ಉದ್ಘಾಟಿಸಿ, ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬಗಳಿಗೆ ಸಹಾಯಧನ ವಿತರಿಸಿ ಮಾತನಾಡಿ ಸಮಾಜದಲ್ಲಿ ಜಾತಿ ಎಂಬ ಬೇಧಭಾವ ಮಾಡದೆ,ಮೇಲು ಕೀಳೆಂಬ ಧೋರಣೆ ತಾಳದೆ ನಾವೆಲ್ಲರೂ ಹಿಂದೂಗಳು ನಾವೆಲ್ಲ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಇಲ್ಲದಿದ್ದರೆ ದೇಶಕ್ಕೆ ಮತ್ತು ಸಮಾಜಕ್ಕೆ ಅಪಾಯವಿದೆ ಎಂದು ಎಚ್ಚರಿಸಿದ ಅವರು ಹಿಂದೂಗಳು ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿರೋಣ ಎಂದು ಸಲಹೆ ನೀಡಿದರು.
ಬಿಜೆಪಿ ಮುಖಂಡ ಕೆ.ಪಿ. ಜಗದೀಶ ಅಧಿಕಾರಿ ಅಧ್ಯಕ್ಷತೆ ವಹಿಸಿದ್ದರು.
ಸಾಧಕರಿಗೆ ಪ್ರಶಸ್ತಿ ಪ್ರಧಾನ:
ಮುಂಬೈ ಉದ್ಯಮಿ ನಾರಾಯಣ ಕೆ. ಶೆಟ್ಟಿ ಅವರ ಸಮಾಜಮುಖಿ ಸೇವೆಗಾಗಿ ‘ಸಮಾಜಸೇವಾ ರತ್ನ ಪ್ರಶಸ್ತಿ’, ಮೂಡುಬಿದಿರೆ ಉದ್ಯಮಿ ರಾಜೇಶ್ ಎಂ. ಕೋಟ್ಯಾನ್ ಅವರಿಗೆ ‘ಉದ್ಯಮ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿರುವ ವಿಘ್ನೇಶ್ ಶೆಟ್ಟಿ ಅವರ ಪರವಾಗಿ ತಾಯಿಯನ್ನು, ರಾಷ್ಟ್ರಮಟ್ಟದ 600ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ಸುಮಂತ್ ಎಸ್ ಅವರನ್ನು ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ನಾರಾಯಣ ಕೆ. ಶೆಟ್ಟಿ, ಬಿಜೆಪಿ ಮುಖಂಡ ಕೆ.ಪಿ. ಜಗದೀಶ ಅಧಿಕಾರಿ, ಪಂಚಶಕ್ತಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜಿತ್ ಪೂಜಾರಿ ತೋಡಾರು, ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ, ಉದ್ಯಮಿ ವಿಜೇಶ್ ಕುಕ್ಯಾನ್, ಹಿಂಜಾವೇ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದರು. ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಅಧ್ಯಕ್ಷ ಸದಾನಂದ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಬೇಬಿ, ಚಿದಾನಂದ ಕುಕ್ಯಾನ್ ಉಪಸ್ಥಿತರಿದ್ದರು.
ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸಮಿತ್‌ರಾಜ್ ದರೆಗುಡ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಬಿ. ಅಳಿಯೂರು ಕಾಯ೯ಕ್ರಮ ನಿರೂಪಿಸಿ ವಂದಿಸಿದರು.
ವೇದಮೂರ್ತಿ ನಾಗರಾಜ್ ಭಟ್ ನೇತೃತ್ವದಲ್ಲಿ ಶನೀಶ್ಚರ ಪೂಜೆ ನಡೆಯಿತು.
ನಂತರ ಶಾಲಾ ಮಕ್ಕಳು ಹಾಗೂ ಕಲಾವಿದರಿಂದ ನೃತ್ಯ ಸಿಂಚನ, ಸಪ್ತಸ್ವರ ಮೆಲೋಡೀಸ್ ವಾಮದಪದವು ಮತ್ತು ಕಟೀಲೇಶ್ವರೀ ಮೆಲೋಡೀಸ್ ಕೆಲ್ಲಪುತ್ತಿಗೆ ಇವರಿಂದ ಸಂಗೀತ ರಸಮಂಜರಿ ಹಾಗೂ ನಂತರ ದಿ. ಸುರೇಂದ್ರ ಕುಮಾರ್ ಕಲತ್ರಪಾದೆ ವಿರಚಿತ ತುಳು ಸಾಮಾಜಿಕ ನಾಟಕ ‘ದೇವೆರ್ ಮುನಿಂಡಾ' ಪ್ರದರ್ಶನಗೊಂಡಿತು.