
ಜಪಾನ್ ಹಾಗೂ ಆಳ್ವಾಸ್ ಸಹಯೋಗದಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣ
Thursday, February 27, 2025
ಮೂಡುಬಿದಿರೆ: ಇಲ್ಲಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ, ಜಪಾನಿನ ಕುಮಮೋಟೊ ವಿವಿ ಹಾಗೂ ಬೆಂಗಳೂರಿನ ಬೆಟಾ ಸಿಎಇ ಸಿಸ್ಟಮ್ಸ್ ಇಂಡಿಯಾ ಪ್ರೈ. ಲಿ ಸಹಯೋಗದಲ್ಲಿ ಸಾಮಾಗ್ರಿಗಳ ಬೆಸುಗೆ (ವೆಲ್ಡಿಂಗ್) ಹಾಗೂ ಅದರ ಉತ್ಪಾದನೆಯಲ್ಲಾಗುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕುರಿತು 2 ದಿನದ ವಿಚಾರ ಸಂಕಿರಣ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಕುಮಮೋಟೊ ವಿವಿಯ ಪ್ರಾಧ್ಯಾಪಕ ಡಾ. ಶುಯಿಚಿ ತೋರಿ, ಸೂಕ್ಷ್ಮ ಹಾಗೂ ದೊಡ್ಡ ಪ್ರಮಾಣದ ನ್ಯಾನೊ ಉಪಕರಣಗಳು ಮೈಕ್ರೋಎಲೆಕ್ಟ್ರಾನಿಕ್, ಆಟೋಮೊಬೈಲ್‌ಗಳು, ವಿಮಾನ ಮತ್ತು ವೈದ್ಯಕೀಯ ಸಾಧನಗಳ ಉತ್ಪಾದನ ವಲಯದಲ್ಲಿ ವೆಲ್ಡಿಂಗ್, ಬ್ರೇಝಿಂಗ್ ಮತ್ತು ಸೋಲ್ಡರಿಂಗ್ ತಂತ್ರಜ್ಞಾನಗಳು ಬಹುಮುಖ್ಯ ನಿರ್ಣಾಯಕ ಅಂಶಗಳಾಗಿವೆ. ಈ ಕ್ಷೇತ್ರದಲ್ಲಿನ ಹೊಸ ರೀತಿಯ ಬೆಳವಣಿಗೆ ಹಾಗೂ ನಾವೀನ್ಯತೆಯು ಉತ್ಪನ್ನಗಳ ಗುಣಮಟ್ಟ, ದರ ಹಾಗೂ ಉತ್ಪಾದಕತೆಯನ್ನು ಸುಧಾರಿಸಲು ಅನುಕೂಲಕರವಾಗಿದೆ ಎಂದರು.
ವಿಚಾರ ಸಂಕಿರಣದಲ್ಲಿ ‘ಎಕ್ಸ್ಪ್ಲೋಸಿವ್ ರಿಯಾಕ್ಟಿವ್ ರ‍್ಮರ್’ ವಿಷಯದ ಕುರಿತು ಡಿಆರ್‌ಡಿಒ ವಿಜ್ಞಾನಿ ಡಾ. ಸುರೇಶ್ ಕುಲಕರ್ಣಿ, ಎಕ್ಸ್ಪ್ಲೋಸಿವ್ ರಿಯಾಕ್ಟಿವ್ ಸಾಮಾಗ್ರಿಗಳ ಉತ್ಪಾನೆಯ ಕುರಿತು ಪ್ರಾಧ್ಯಾಪಕ ಡಾ. ಹೊಕಮೋಟೊ, ವೆಲ್ಡಿಂಗ್‌ಗೆ ಬಳಸುವ ಎಕ್ಸ್ಪ್ಲೋಸಿವ್ ಕ್ಲಾಡಿಂಗ್ ಕುರಿತು ಅಣ್ಣಾಮಲೈ ವಿವಿಯ ಡೀನ್ ಡಾ. ಕೆ. ರಘುಕಂದನ್, ಹೈಡ್ರೋಜನ್ ನಿರ್ವಹಣೆಯಲ್ಲಿ ವೆಲ್ಡಿಂಗ್ ವ್ಯವಸ್ಥೆಯ ಕುರಿತು ಬೆಂಗಳೂರಿನ ಸಿಪಿಆರ್‌ಐನ ಡಾ. ಎಂ. ಜಿ ಆನಂದಕುಮಾರ್ ವಿಷಯ ಮಂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ 15 ಸಂಸ್ಥೆಗಳು ಈ ವಿಚಾರಸಂಕಿರಣದಲ್ಲಿ ಸಹಭಾಗಿತ್ವ ವಹಿಸಿರುವುದು ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ಸಂಶೋಧನಾ ವಿಷಯಗಳ ವಿನಿಮಯಕ್ಕೆ ಅನುಕೂಲಕರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣದ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. 20 ವಿಷಯತಜ್ಞರು, ದೇಶ-ವಿದೇಶಗಳ ವಿವಿಧ ವಿವಿಗಳಿಂದ 26 ಪ್ರತಿನಿಧಿಗಳು ಭಾಗವಹಿಸಿದ್ದರು.
ಜಪಾನಿನ ಸೋಜೊ ವಿವಿಯ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಆರ್. ತೊಮೊಶಿಗೆ, ವಿಭಾಗ ಮುಖ್ಯಸ್ಥ ಡಾ. ಸತ್ಯನಾರಾಯಣ ಉಪಸ್ಥಿತರಿದ್ದರು. ಡಾ. ಗುರುಶಾಂತ್ ವಗ್ಗರ್ ನಿರೂಪಿಸಿದರು. ಡಾ. ಕುಮಾರಸ್ವಾಮಿ, ಡಾ. ಪ್ರವೀಣ್ ಕೆ.ಸಿ., ಡಾ. ಪ್ರಮೋದ್ ವಿ ಬಿ, ಕಿರಣ್ ಸಿಎಚ್ ಅತಿಥಿಗಳನ್ನು ಪರಿಚಯಿಸಿದರು. ಡಾ. ಸುರೇಶ್ ಪಿ.ಎಸ್. ವಂದಿಸಿದರು.