ಶ್ರೀನಿವಾಸ ಕಲ್ಯಾಣೋತ್ಸವದ ಜತೆ 100 ಜೋಡಿಗೆ ಕಂಕಣಭಾಗ್ಯ: ಪುತ್ತಿಲ

ಶ್ರೀನಿವಾಸ ಕಲ್ಯಾಣೋತ್ಸವದ ಜತೆ 100 ಜೋಡಿಗೆ ಕಂಕಣಭಾಗ್ಯ: ಪುತ್ತಿಲ


ಪುತ್ತೂರು: ಈ ವರ್ಷ ಡಿ.27, 28 ಮತ್ತು 29ರಂದು ಪುತ್ತೂರು ಮಹತೋಭಾರ ಮಹಾಲೀಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ಆಗುವ ಈ ಸಂದರ್ಭದಲ್ಲಿ ಶ್ರೀನಿವಾಸ ಕಲ್ಯಾಣೊತ್ಸವದ ಸ್ಥಳದಲ್ಲಿ 100 ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಮಾಡಬೇಕೆಂಬ ಯೋಚನೆಗೆ ರೂಪಿಸಲಾಗಿದೆ. ಡಿ.27ಕ್ಕೆ ಶ್ರೀ ದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರ ಪುರಪ್ರವೇಶ ನಡೆಯಲಿದೆ. 

28ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. 29ಕ್ಕೆ ಶ್ರೀನಿವಾಸ ದೇವರ ಸಮ್ಮುಖದಲ್ಲೇ 100 ಜೋಡಿಗಳಿಗೆ ಉಚಿತವಾಗಿ ಸಾಮೂಹಿಕ ವಿವಾಹ ಕಾರ್ಯ ನಡೆಯಲಿದೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.

ಅವರು ಸೋಮವಾರ ಪುತ್ತಿಲ ಪರಿವಾರದ ಕಚೇರಿ ಬಳಿಯಲ್ಲಿನ ಸುಭದ್ರಾ ಕಲ್ಯಾಣ ಮಂಟಪದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ವಿವಾಹ ಸಮಾರಂಭ ಮಾಡುವ ಸಂದರ್ಭ ಯಾವುದೇ ರೀತಿಯ ಗೊಂದಲಗಳು ಉಂಟಾಗದಿರಲಿ ಎಂಬ ನಿಟ್ಟಿನಲ್ಲಿ  ದೃಢೀಕರಣ ಪತ್ರದ ಜೊತೆಗೆ ವಿವಾಹ ನಡೆಸಲು ನೊಂದಾವಣೆ ಕಚೇರಿಯನ್ನು ತೆರೆದಿದ್ದೇವೆ. ಯಾರು ವಿವಾಹ ಆಗುತ್ತಾರೋ ಅವರು ಸ್ಥಳೀಯ ಪಂಚಾಯತ್‌ನಿಂದ ವಿವಾಹ ಆಗಿಲ್ಲ ಎಂಬುದಕ್ಕೆ ದೃಢೀಕರಣ ಪತ್ರ ಮತ್ತು ಅವರು ವಾಸ್ತವ್ಯ ಇರುವುದಕ್ಕೆ ಆಧಾರ್ ಕಾರ್ಡ್ ಪ್ರತಿಗಳನ್ನು ನೀಡಬೇಕು. ವೈವಾಹಿಕ ಬಂಧ ನಡೆಯುವ ಎರಡು ಮನೆಯವರು ತಮ್ಮ ಒಪ್ಪಿಗೆ ಪತ್ರವನ್ನು ಕಚೇರಿಗೆ ನೀಡಬೇಕು ಎಂದ ಅವರು ವಧು ವರರ ಎರಡು ಕಡೆಯವರಿಗೆ ಮದುವೆಗೆ ಬೇಕಾದ ಎಲ್ಲಾ ಸಾಹಿತ್ಯದ ಜೊತೆಗೆ ಚಿನ್ನದ ಮಾಂಗಲ್ಯ, ಬೆಳ್ಳಿಯ ಕಾಲುಂಗುರ, ವಸ್ತ್ರಗಳನ್ನು ಟ್ರಸ್ಟ್ ಮೂಲಕ ನೀಡಲಾಗುವುದು ಎಂದು ಅವರು ತಿಳಿಸಿದರು.  

 ಗಿರಿಜಾ ಕಲ್ಯಾಣ, ಸೀತಾ ಕಲ್ಯಾಣಕ್ಕೂ ಚಿಂತನೆ:

ಎರಡು ವರ್ಷದಿಂದ ಅತ್ಯಂತ ಯಶಸ್ವಿಯಾಗಿ ಶ್ರದ್ದೆ ಭಕ್ತಿಯ ಜೊತೆಗೆ ಶ್ರೀನಿವಾಸ ಕಲ್ಯಾಣೋತ್ಸವ ನಡೆದಿದೆ. ೩ನೇ ವರ್ಷವೂ ಯಶಸ್ವಿಯಾಗಿ ನಡೆಸಲಿದ್ದೇವೆ. ಅದಾದ ಬಳಿಕ ಭಕ್ತರ ಆಶಯದಂತೆ ಮುಂದಿನ ದಿನಗಳಲ್ಲಿ ಗಿರಿಜಾ ಕಲ್ಯಾಣ, ಸೀತಾ ಕಲ್ಯಾಣವನ್ನೂ ನಡೆಸಲು ಚಿಂತನೆ ಮಾಡಲಾಗಿದೆ ಎಂದು ಹೇಳಿದರು.

 ಗೋ ಶಾಲೆ ನಿರ್ಮಾಣ ಯೋಜನೆ: 

ಕಳೆದ ಬಾರಿಯ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಪೇಜಾವರ ಶ್ರೀಗಳು ಪುತ್ತೂರಿನಲ್ಲಿ ದೊಡ್ಡದಾದ ಗೋ ಶಾಲೆ ನಿರ್ಮಾಣ ಮಾಡಬೇಕೆಂದು ಅಪೇಕ್ಷೆ ಪಟ್ಟರು. ಅವರ ಅಪೇಕ್ಷೆಯಂತೆ ಗೋ ಶಾಲೆ ನಿರ್ಮಾಣಕ್ಕೆ ಪುತ್ತಿಲ ಪರಿವಾರ ಟ್ರಸ್ಟ್ ಯೋಜನೆ ರೂಪಿಸುತ್ತಿದೆ. ಮುಂಡೂರು ಬದಿಯಡ್ಕದಲ್ಲಿ ಗೋಮಾಳದ ಜಾಗ ಇರುವ ಸರ್ವೆ ನಂಬರ್ ಅನ್ನು ಇಲಾಖೆಗೆ ನೀಡಿ ಗೋ ಶಾಲೆ ನಡೆಸಲು ಜಾಗ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಪುತ್ತಿಲ ಹೇಳಿದರು. 

ಟ್ರಸ್ಟ್ನಿಂದ 2 ಮನೆಗಳ ನಿರ್ಮಾಣ:

ಟ್ರಸ್ಟ್ನ ವತಿಯಿಂದ 2 ಮನೆಗಳನ್ನು ನಿರ್ಮಾಣ ಮಾಡುವ ಅಪೇಕ್ಷೆ ಸಮಾಜದಿಂದ ಬಂದಿದೆ. ಅವರ ಮನೆಗೆ ಸಂಬಂಧಿಸಿದ ಜಾಗದ ದಾಖಲೆ ಸಲ್ಲಿಕೆಯಾದ ಬಳಿಕ ಮನೆ ನಿರ್ಮಾಣ ಮಾಡಿ ಹಸ್ತಾಂತರ ಮಾಡಲಿದ್ದೇವೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು. 

ಸುದ್ಧಿಗೋಷ್ಠಿಯಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಅಧ್ಯಕ್ಷ ಮಹೇಂದ್ರ ವರ್ಮ, ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ರೈ ಮಠ, ಜತೆ ಕಾರ್ಯದರ್ಶಿ ರಾಜು ಶೆಟ್ಟಿ, ಸದಸ್ಯ ಪ್ರಜ್ವಲ್ ಘಾಟೆ, ಮಾದ್ಯಮ ವಕ್ತಾರ ನವೀನ್ ರೈ ಪಂಜಳ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article